
ಗುವಾಹಟಿ(ಅಸ್ಸಾಂ): ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್ ಆಡಲಿರುವ ಭಾರತ ತಂಡಕ್ಕೆ ಗುವಾಹಟಿಯಲ್ಲಿ ಈ ಬಾರಿ ಹೊಸ ಅನುಭವ ಉಂಟಾಗಲಿದೆ. ದೇಶದ ಇತರ ನಗರಗಳಿಗಿಂತ ಈಶಾನ್ಯ ಭಾಗದ ಗುವಾಹಟಿಯಲ್ಲಿ ಸುರ್ಯೋದಯ ಮತ್ತು ಸೂರ್ಯಾಸ್ತ ಬೇಗನೇ ಸಂಭವಿಸಲಿರುವ ಹಿನ್ನೆಲೆಯಲ್ಲಿ ಆಟಗಾರರು ದಿನಚರಿಯಲ್ಲಿ ಬದಲಾವಣೆ ಮಾಡಬೇಕಾಗಿದೆ.
ಬೆಂಗಳೂರಿನಲ್ಲಿ ಈಗ ಬೆಳಗ್ಗೆ 6.20ರ ವೇಳೆ ಸೂರ್ಯೋದಯವಾದರೆ, ಗುವಾಹಟಿಯಲ್ಲಿ 5.45ಕ್ಕೇ ಸೂರ್ಯ ಉದಯಿಸಲಿದೆ. ಸಾಮಾನ್ಯವಾಗಿ ದೇಶದ ಯಾವುದೇ ನಗರಗಳಲ್ಲಿ ಟೆಸ್ಟ್ ಪಂದ್ಯ ಆರಂಭಗೊಳ್ಳುವುದು ಬೆಳಗ್ಗೆ 9.30ಕ್ಕೆ. ಆದರೆ ಗುವಾಹಟಿಯಲ್ಲಿ ಬೆಳಗ್ಗೆ 8.30ಕ್ಕೆ ಟಾಸ್ ನಡೆಯಲಿದ್ದು, 9 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಇನ್ನು, ಬೆಂಗಳೂರಿನಲ್ಲಿ ಈಗ ಸೂರ್ಯಾಸ್ತಮಾನ ಸಮಯ ಸಂಜೆ 5.50. ಆದರೆ ಗುವಾಹಟಿಯಲ್ಲಿ 4.40ಕ್ಕೇ ಸೂರ್ಯ ಅಸ್ತಮಿಸಲಿದೆ. ಹೀಗಾಗಿ ಸಂಜೆ 4 ಗಂಟೆಗೇ ದಿನದಾಟ ಕೊನೆಗೊಳ್ಳಲಿದೆ. ಮಂದಬೆಳಕಿನ ಕಾರಣಕ್ಕೆ ಪಂದ್ಯ 4 ಗಂಟೆಗೂ ಮೊದಲೇ ಮುಗಿಯಬಹುದು ಎನ್ನಲಾಗುತ್ತಿದೆ.
ಟೆಸ್ಟ್ ಪಂದ್ಯದಲ್ಲಿ ಸಾಮಾನ್ಯವಾಗಿ ಮೊದಲ ಅವಧಿ ಬಳಿಕ ಊಟ, 2ನೇ ಅವಧಿ ವೇಳೆ ಟೀ ವಿರಾಮ ಇರುತ್ತದೆ. ಆದರೆ ಈ ಟೆಸ್ಟ್‌ನಲ್ಲಿ ಮೊದಲ ಅವಧಿ ಬಳಿಕ ಟೀ, 2ನೇ ಅವಧಿ ವೇಳೆ ಮಧ್ಯಾಹ್ನ 1.20ರಿಂದ 40 ನಿಮಿಷಗಳ ಊಟದ ವಿರಾಮ ಇರಲಿದೆ. ಬಳಿಕ 2 ರಿಂದ ಸಂಜೆ 4 ಗಂಟೆಯವರೆಗೂ ಕೊನೆ ಅವಧಿ ನಡೆಯಲಿದೆ.
ಆಟಗಾರರಿಗೆ ದಿನಚರಿಯ ವೇಳಾಪಟ್ಟಿ ಇರುತ್ತದೆ. ಅದೇ ಸಮಯಕ್ಕೆ ಎದ್ದು, ಅಭ್ಯಾಸ ನಡೆಸುವುದು, ಆಡುವುದು ವಾಡಿಕೆ. ಆದರೆ ಈ ಬಾರಿ ಆಟಗಾರರು ಸಾಮಾನ್ಯ ದಿನಗಳಿಗಿಂದ ಬೇಗನೇ ಎದ್ದು, ಕ್ರೀಡಾಂಗಣ ತಲುಪಬೇಕು. ಅರ್ಧ ಗಂಟೆ ಮುಂಚಿತವಾಗಿಯೇ ಪಂದ್ಯ ಆರಂಭಗೊಳ್ಳಲಿದೆ. ಟೀ ಹಾಗೂ ಊಟದ ವಿರಾಮದಲ್ಲೂ ಬದಲಾವಣೆ ಆಗುವುದರಿಂದ ಅದಕ್ಕೂ ಆಟಗಾರರು ಒಗ್ಗಿಕೊಳ್ಳಬೇಕಿದೆ.
- ಬೆಳಗ್ಗೆ 8.30ಕ್ಕೆ ಟಾಸ್
- ಬೆಳಗ್ಗೆ 9 ಗಂಟೆಗೆ ಪಂದ್ಯ ಶುರು
- 11 ಗಂಟೆಗೆ ಟೀ ವಿರಾಮ(20 ನಿಮಿಷ)
- 1.20ರಿಂದ 2 ಗಂಟೆ ವರೆಗೆ ಊಟ
- 2ರಿಂದ 4ರ ತನಕ ಕೊನೆ ಅವಧಿಯ ಆಟ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.