
ಮುಂಬೈ(ಜು.26): ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಗಾಯದ ಸಮಸ್ಯೆ ಕಾಡಿದ್ದರಿಂದ ಶುಭ್‌ಮನ್ ಗಿಲ್, ಆವೇಶ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ತಂಡದಿಂದ ಹೊರಬಿದ್ದಿದ್ದು, ಇದೀಗ ಮುಂಬೈ ಕ್ರಿಕೆಟಿಗರಾದ ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಗಿಲ್ ನ್ಯೂಜಿಲೆಂಡ್ ವಿರುದ್ದ ಸೌಥಾಂಪ್ಟನ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆ ಎಡಗಾಲಿನ ಗಾಯಕ್ಕೆ ಒಳಗಾಗಿದ್ದರು. ಮೊದಲ ಪಂದ್ಯದಿಂದ ಗಿಲ್ ಹೊರಗುಳಿಯಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು, ಅದರೀಗ ಗಿಲ್ ತವರಿಗೆ ಮರಳಿದ್ದು ಇಂಗ್ಲೆಂಡ್ ವಿರುದ್ದ ಸರಣಿಯಿಂದ ಹೊರಬಿದ್ದಿದ್ದಾರೆ.
ಇನ್ನು ಕೌಂಟಿ ಇಲೆವನ್ ಹಾಗೂ ಭಾರತ ತಂಡಗಳ ನಡುವೆ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದ ವೇಳೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಬಲಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯದ ಅಗತ್ಯವಿರುವುದರಿಂದ ಸುಂದರ್ ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದಾರೆ. ಇನ್ನು ಯುವ ವೇಗಿ ಆವೇಶ್ ಖಾನ್ ಕೂಡಾ ಅಭ್ಯಾಸ ಪಂದ್ಯದ ವೇಳೆ ಎಡಗೈ ಗಾಯಕ್ಕೆ ಒಳಗಾಗಿದ್ದು, ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದಾರೆ.
ಕೋವಿಡ್‌ನಿಂದ ರಿಷಭ್ ಪಂತ್ ಗುಣಮುಖ: ಬಯೋಬಬಲ್ ಪ್ರವೇಶ
ಪೃಥ್ವಿ-ಸೂರ್ಯಗೆ ಸ್ಥಾನ: ಸೀಮಿತ ಓವರ್‌ಗಳ ಸರಣಿಯಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮತ್ತೋರ್ವ ಮುಂಬೈ ಕ್ರಿಕೆಟಿಗ ಪೃಥ್ವಿ ಶಾ ಕೂಡಾ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದು, ರೋಹಿತ್ ಶರ್ಮಾ ಜತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 04ರಿಂದ ಆರಂಭವಾಗಲಿದೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಜರುಗಲಿದೆ.
ಇಂಗ್ಲೆಂಡ್ ಸರಣಿಗೆ ಭಾರತ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ, ಮಯಾಂಕ್ ಅಗರ್‌ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.