ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಲಂಕಾ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು, ಭಾರತ ತಂಡದ ಆಟಗಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ಕೋಚ್ ಗೌತಮ್ ಗಂಭೀರ್ ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲೇ ಟೀಂ ಇಂಡಿಯಾ ಆಟಗಾರರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಮುನ್ನ ಮುಂಬೈನಲ್ಲಿ ಬಿಸಿಸಿಐ ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆ ಗಂಭೀರ್ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಗಂಭೀರ್, ಇನ್ಮುಂದೆ ಆಟಗಾರರು ತಮ್ಮಿಷ್ಟದಂತೆ ತಾವು ಆಡಲು ಬಯಸುವ ಸರಣಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಪ್ರತಿ ಆಟಗಾರನೂ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲದಿದ್ದರೆ, ಎಲ್ಲಾ ಸರಣಿಗಳಿಗೂ ಆಯ್ಕೆಗೆ ಲಭ್ಯವಿರಬೇಕು. ಆಯ್ಕೆ ಮಾಡುವುದು ಬಿಡುವುಡು ಆಯ್ಕೆ ಸಮಿತಿ, ತಂಡದ ಆಡಳಿತಕ್ಕೆ ಬಿಟ್ಟಿದ್ದು ಎಂದು ಸ್ಪಷ್ಟ ಸಂದೇಶ ರವಾನಿಸಿದರು.
undefined
ಇದೇ ವೇಳೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಗಂಭೀರ್, ‘ಇಬ್ಬರಲ್ಲೂ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ. ಇಬ್ಬರೂ ವಿಶ್ವ ಶ್ರೇಷ್ಠ ಆಟಗಾರರು. ಅಂ.ರಾ.ಟಿ20ಯಿಂದ ನಿವೃತ್ತಿ ಪಡೆದಿರುವ ಈ ಇಬ್ಬರು, ಇನ್ಮುಂದೆ ಸಾಧ್ಯವಾದಷ್ಟು ಎಲ್ಲಾ ಟೆಸ್ಟ್, ಏಕದಿನ ಪಂದ್ಯಗಳನ್ನು ಆಡಬೇಕು ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಈ ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್, ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಫಿಟ್ನೆಸ್ ಕಾಯ್ದುಕೊಂಡರೆ ಇಬ್ಬರೂ 2027ರ ಏಕದಿನ ವಿಶ್ವಕಪ್ ಆಡಬಹುದು’ ಎಂದರು.
IPL 2025 ರೋಹಿತ್ ಶರ್ಮಾ ಕರೆತರಲು ಆರ್‌ಸಿಬಿ ಜತೆಗೆ ಮತ್ತೊಂದು ಫ್ರಾಂಚೈಸಿ ಮಾಸ್ಟರ್ ಪ್ಲಾನ್..!
ಇದೇ ವೇಳೆ, ಮುಂಬರುವ ದಿನಗಳಲ್ಲಿ ಮೂರು ಮಾದರಿಗಳಿಗೆ ಮೂರು ಪ್ರತ್ಯೇಕ ತಂಡಗಳನ್ನು ಸಿದ್ಧಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದ ಗಂಭೀರ್, ಭಾರತ ತಂಡಕ್ಕೆ ಕಾಲಿಡಲು ದಿನೇ ದಿನೇ ಪೈಪೋಟಿ ಹೆಚ್ಚುತ್ತಿದ್ದು, ಪ್ರತಿ ಆಟಗಾರನೂ ಹೆಚ್ಚಿನ ಶ್ರಮ ವಹಿಸುವಂತೆ ಕರೆ ನೀಡಿದರು.
ಇನ್ನು, ಏಕದಿನ ಹಾಗೂ ಟಿ20 ತಂಡಗಳ ಉಪನಾಯಕನಾಗಿ ನೇಮಕಗೊಂಡಿರುವ ಶುಭ್‌ಮನ್ ಗಿಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಗಂಭೀರ್, ಹಿರಿಯರು ತಂಡದಲ್ಲಿರುವಾಗಲೇ ಅವರಿಂದ ನಾಯಕತ್ವದ ವಿಚಾರಗಳನ್ನು ತಿಳಿದುಕೊಳ್ಳುವಂತೆ ಗಿಲ್‌ಗೆ ಸಲಹೆ ನೀಡಿದರು.
ಸಹಾಯಕ ಕೋಚ್‌ಗಳಾಗಿ ನಾಯರ್, ಡೊಶ್ಕಾಟೆ ನೇಮಕ
ಭಾರತ ತಂಡದ ನೂತನ ಸಹಾಯಕ ಕೋಚ್‌ಗಳಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಹಾಗೂ ನೆದರ್‌ಲೆಂಡ್ಸ್‌ನ ಮಾಜಿ ಕ್ರಿಕೆಟಿಗ ರ್‍ಯಾನ್ ಟೆನ್ ಡೊಶ್ಕಾಟೆ ಅವರ ನೇಮಕವನ್ನು ಪ್ರಧಾನ ಕೋಚ್ ಗೌತಮ್ ಗಂಭೀರ್ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು.
IPL 2025 ಟೂರ್ನಿಗೂ ಮುನ್ನ ಲಖನೌಗೆ ಗುಡ್‌ಬೈ ಹೇಳ್ತಾರಾ ಕನ್ನಡಿಗ ಕೆ ಎಲ್ ರಾಹುಲ್..? ಈ ತಂಡ ಸೇರೋದು ಪಕ್ಕಾ..?
ಇದೇ ವೇಳೆ ಫೀಲ್ಡಿಂಗ್ ಕೋಚ್ ಆಗಿ ಎರಡನೇ ಅವಧಿಗೆ ಟಿ.ದಿಲೀಪ್ ಮುಂದುವರಿಯಲಿದ್ದು, ಶ್ರೀಲಂಕಾ ಪ್ರವಾಸದ ಬಳಿಕ ಕಾಯಂ ಬೌಲಿಂಗ್ ಕೋಚ್ ನೇಮಕವಾಗಲಿದೆ ಎಂದು ಗಂಭೀರ್ ತಿಳಿಸಿದ್ದಾರೆ.
ಲಂಕಾ ತಲುಪಿದ ಟೀಂ ಇಂಡಿಯಾ
ತಲಾ 3 ಪಂದ್ಯಗಳ ಟಿ20, ಏಕದಿನ ಸರಣಿಯನ್ನಾಡಲು ಭಾರತ ತಂಡ ಸೋಮವಾರ ಶ್ರೀಲಂಕಾಕ್ಕೆ ತೆರಳಿತು. ಮುಂಬೈನಿಂದ ವಿಶೇಷ ವಿಮಾನದಲ್ಲಿ ಕೊಲೊಂಬೊಗೆ ಆಟಗಾರರು, ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿ ಪ್ರಯಾಣಿಸಿತು. ಜು.27ರಿಂದ ಟಿ20 ಸರಣಿ, ಆ.2ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.
ಕೊಹ್ಲಿ ಜೊತೆಗೆ ಯಾವ ಮನಸ್ತಾಪವೂ ಇಲ್ಲ: ಗೌತಿ
ವಿರಾಟ್ ಕೊಹ್ಲಿ ಜೊತೆಗಿನ ನನ್ನ ಸಂಬಂಧ ವೈಯಕ್ತಿಕವೇ ಹೊರತು ಟಿಆರ್‌ಪಿಗಾಗಿ ಅಲ್ಲ ಎಂದು ಗೌತಮ್ ಗಂಭೀರ್ ಸ್ಪಷ್ಟಪಡಿಸಿದರು. ಮೈದಾನದಾಚೆಗೂ ನಮ್ಮಿಬ್ಬರ ಸಂಬಂಧ ಚೆನ್ನಾಗೇ ಇದೆ. ಕೊಹ್ಲಿ ಒಬ್ಬ ವಿಶ್ವ ಶ್ರೇಷ್ಠ ಅಥ್ಲೀಟ್, ವಿಶ್ವ ಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಭಾರತೀಯ ಕ್ರಿಕೆಟ್‌ನ ಯಶಸ್ಸಿಗಾಗಿ ನಾವಿಬ್ಬರೂ ಒಟ್ಟಿಗೆ ಶ್ರಮಿಸಲಿದ್ದೇವೆ ಎಂದು ಗಂಭೀರ್ ಹೇಳಿದರು.