IPL 2021: ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಡೇವಿಡ್ ವಾರ್ನರ್‌ ಗುಡ್‌ಬೈ?

By Suvarna NewsFirst Published Sep 29, 2021, 9:27 AM IST
Highlights

* ಡೇವಿಡ್‌ ವಾರ್ನರ್‌ ಸನ್‌ರೈಸರ್ಸ್‌ ಹೈದರಾಬಾದ್ ತಂಡ ತೊರೆಯುವುದು ಬಹುತೇಕ ಪಕ್ಕಾ

* ಇನ್ನುಳಿದ ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಪರ ಆಡೋಲ್ಲ ಎಂದ ವಾರ್ನರ್‌

* ಬಹುತೇಕ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಸನ್‌ರೈಸರ್ಸ್‌ ಹೈದರಾಬಾದ್‌

ದುಬೈ(ಸೆ.29): ಕಳಪೆ ಲಯದಿಂದಾಗಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಡೇವಿಡ್‌ ವಾರ್ನರ್‌ (David Warner), ಇನ್ನು ಮುಂದೆ ತಂಡದ ಪರ ಆಡುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ, ಈ ಆವೃತ್ತಿಯಲ್ಲಿನ್ನು ಮೈದಾನದಲ್ಲೂ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ ಉತ್ತರಿಸಿದ್ದಾರೆ. ‘ದುರದೃಷ್ಟವಶಾತ್‌, ಮತ್ತೆ ಸಾಧ್ಯವಿಲ್ಲ. ಆದರೆ ದಯವಿಟ್ಟು ಸನ್‌ರೈಸರ್ಸ್ ತಂಡವನ್ನು ಬೆಂಬಲಿಸುತ್ತಿರಿ’ ಎಂದು ವಿನಂತಿಸಿದ್ದಾರೆ. ಇದು ಹೈದರಾಬಾದ್‌ ಪರ ಇನ್ನು ವಾರ್ನರ್‌ ಆಡುವುದಿಲ್ಲ ಎಂಬ ವದಂತಿಗೆ ಪುಷ್ಠಿ ಒದಗಿಸಿದೆ. 

ಸನ್‌ರೈಸ​ರ್ಸ್‌ ಪರ ವಾರ್ನರ್‌ ಈ ಆವೃತ್ತಿಯ 8 ಪಂದ್ಯಗಳಲ್ಲಿ 181 ರನ್‌ ಗಳಿಸಿದ್ದು, ಹೀಗಾಗಿ ಸೋಮವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಿಂದ ಹೊರಬಿದ್ದಿದ್ದರು. ವಾರ್ನರ್‌ ಬದಲು ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದ ಜೇಸನ್‌ ರಾಯ್ 42 ಎಸೆತಗಳಲ್ಲಿ 60 ರನ್ ಸಿಡಿಸಿದ್ದರು. ಈ ಪಂದ್ಯವನ್ನು ಹೈದರಾಬಾದ್‌ ತಂಡವು 7 ವಿಕೆಟ್‌ಗಳಿಂದ ಜಯಿಸಿತ್ತು. 

IPL 2021: ಕೊನೆಗೂ ಗೆಲುವಿನ ಸಿಹಿ ಕಂಡ SRH,ರಾಜಸ್ಥಾನಕ್ಕೆ ನಿರಾಸೆ!

ಆವೃತ್ತಿಯ ಮೊದಲ ಭಾಗದಲ್ಲೇ ಅವರು ತಂಡದ ನಾಯಕತ್ವ ಕಳೆದುಕೊಂಡಿದ್ದರು. ಯುಎಇ (UAE) ಚರಣದ ಮೊದಲೆರಡು ಪಂದ್ಯಗಳಲ್ಲಿ ವಾರ್ನರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತಾದರೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು.

ವಾರ್ನರ್‌ 2014ರಲ್ಲಿ ತಂಡ ಸೇರಿಸಿಕೊಂಡಿದ್ದು, 2016ರಲ್ಲಿ ಅವರ ನಾಯಕತ್ವದಲ್ಲಿ ಹೈದರಾಬಾದ್‌ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮಣಿಸಿ ಚಾಂಪಿಯನ್‌ ಆಗಿತ್ತು. ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರವೇ ವಾರ್ನರ್‌ 4 ಸಾವಿರಕ್ಕೂ ಅಧಿಕ ರನ್‌ ಬಾರಿಸಿದ್ದಾರೆ. ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ವಾರ್ನರ್ ಅವರನ್ನು ಈ ಆವೃತ್ತಿಯ ಬಳಿಕ ಹೈದರಾಬಾದ್‌ ಫ್ರಾಂಚೈಸಿ ಕೈಬಿಡಲಿದೆ ಎಂದೂ ಮೂಲಗಳಿಂದ ತಿಳಿದುಬಂದಿದೆ.

IPL 2021: ಟಿ20 ವಿಶ್ವಕಪ್‌ ಟೂರ್ನಿಗೆ ಶ್ರೇಯಸ್ ಅಯ್ಯರ್‌ಗೆ ಜಾಕ್‌ಪಾಟ್‌..?

ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಸದ್ಯ 10 ಪಂದ್ಯಗಳನ್ನಾಡಿ 2 ಗೆಲುವು ಹಾಗೂ 8 ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಒಂದು ವೇಳೆ ಕೇನ್‌ ವಿಲಿಯಮ್ಸನ್‌ ನೇತೃತ್ವದ ಹೈದರಾಬಾದ್ ತಂಡವು ಪ್ಲೇ ಆಫ್‌ಗೇರಬೇಕಿದ್ದರೇ ಪವಾಡವೇ ನಡೆಯಬೇಕಿದೆ. ಬಹುತೇಕ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವಂತೆ ಕಾಣುತ್ತಿರುವ ಸನ್‌ರೈಸರ್ಸ್‌ ಇನ್ನುಳಿದ ಪಂದ್ಯಗಳಲ್ಲಿ ಯುವ ಆಟಗಾರರಿಗೆ ಮಣೆ ಹಾಕುವ ಇಂಗಿತವನ್ನು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಕೋಚ್ ವ್ಯಕ್ತಪಡಿಸಿದ್ದಾರೆ.

click me!