ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಹೆಡ್‌ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ನೇಮಕ

By Naveen KodaseFirst Published Aug 14, 2022, 10:26 AM IST
Highlights

ಜಿಂಬಾಬ್ವೆಗೆ ಏಕದಿನ ಸರಣಿಯನ್ನಾಡಲು ಬಂದಿಳಿದ ಟೀಂ ಇಂಡಿಯಾ
ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾ ಹೆಡ್‌ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ
ಜಿಂಬಾಬ್ವೆ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿರುವ ಟೀಂ ಇಂಡಿಯಾ

ಮುಂಬೈ(ಆ.14): ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್‌, ಮುಂಬರುವ ಜಿಂಬಾಬ್ವೆ ಪ್ರವಾಸದ ವೇಳೆಯಲ್ಲಿ ಟೀಂ ಇಂಡಿಯಾ ಹೆಡ್‌ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಏಷ್ಯಾಕಪ್ ಟೂರ್ನಿಗೂ ಮುನ್ನ ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನಾಡಲಿದೆ. ಜಿಂಬಾಬ್ವೆ ಪ್ರವಾಸದಲ್ಲಿ ಲಕ್ಷ್ಮಣ್, ಟೀಂ ಇಂಡಿಯಾ ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

'' ಹೌದು, ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ಆಡಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿವಿಎಸ್‌ ಲಕ್ಚ್ಮಣ್‌, ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದರರ್ಥ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದಿದ್ದಾರೆ ಎಂದಲ್ಲ. ಜಿಂಬಾಬ್ವೆ ಎದುರಿನ ಸರಣಿಯು ಆಗಸ್ಟ್ 22ಕ್ಕೆ ಮುಕ್ತಾಯವಾಗಲಿದೆ. ಇನ್ನು ಆಗಸ್ಟ್ 23ರಂದು ಭಾರತ ತಂಡದ ಜತೆಗೆ ರಾಹುಲ್ ದ್ರಾವಿಡ್, ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಬೇಕಿದೆ. ಎರಡು ಟೂರ್ನಿಗಳ ನಡುವೆ ಸಣ್ಣ ಅಂತರ ಇರುವುದರಿಂದಾಗಿ ಜಿಂಬಾಬ್ವೆ ಪ್ರವಾಸಕ್ಕೆ ವಿವಿಎಸ್ ಲಕ್ಷ್ಮಣ್ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಜಯ್ ಶಾ ತಿಳಿಸಿದ್ದಾರೆ.

ಏಷ್ಯಾಕಪ್‌ ಟೂರ್ನಿಗೆ ಸ್ಥಾನ ಪಡೆದ ಕೆ ಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಮಾತ್ರ ಜಿಂಬಾಬ್ವೆ ಪ್ರವಾಸದಲ್ಲಿರಲಿದ್ದಾರೆ. ಈ ಕಾರಣಕ್ಕಾಗಿ ಹೆಡ್‌ ಕೋಚ್‌ ಟಿ20 ತಂಡದ ಜತೆಗಿರಲಿದ್ದಾರೆ. ದೀಪಕ್ ಹೂಡಾ ಹಾಗೂ ಕೆ ಎಲ್ ರಾಹುಲ್‌, ಹರಾರೆಯಿಂದ ನೇರವಾಗಿ ಯುಎಇಗೆ ಬಂದಿಳಿಯಲಿದ್ದಾರೆ ಎಂದು ಜಯ್ ಶಾ ಖಚಿತಪಡಿಸಿದ್ದಾರೆ.

ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 18, 20 ಹಾಗೂ 22ರಂದು ನಡೆಯಲಿದೆ. ಈ ಮೊದಲಿಗೆ ಶಿಖರ್ ಧವನ್‌ಗೆ ಜಿಂಬಾಬ್ವೆ ಎದುರಿನ ಏಕದಿನ ಸರಣಿಗೆ ಟೀಂ ಇಂಡಿಯಾದ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಆದರೆ ಕೆ ಎಲ್ ರಾಹುಲ್ ಸಂಪೂರ್ಣ ಫಿಟ್ ಆದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದ ಬದಲಾವಣೆ ಎನ್ನುವಂತೆ ಕೆ ಎಲ್ ರಾಹುಲ್‌ಗೆ ನಾಯಕ ಪಟ್ಟ ಕಟ್ಟಲಾಗಿದ್ದು, ಶಿಖರ್ ಧವನ್ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇನ್ನು ಈ ಮೊದಲು ಕಳೆದ ಜೂನ್-ಜುಲೈನಲ್ಲಿ ರಾಹುಲ್‌ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ, ವಿವಿಎಸ್ ಲಕ್ಷ್ಮಣ್‌ ಮಾರ್ಗದರ್ಶನದಲ್ಲಿ ಭಾರತದ ಇನ್ನೊಂದು ತಂಡವು ಐರ್ಲೆಂಡ್ ಪ್ರವಾಸ ಕೈಗೊಂಡಿತ್ತು. 

click me!