Asia Cup 2022 ಟೂರ್ನಿಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ, ಶಕೀಬ್‌ಗೆ ನಾಯಕ ಪಟ್ಟ..!

By Naveen KodaseFirst Published Aug 14, 2022, 8:55 AM IST
Highlights

ಏಷ್ಯಾಕಪ್, ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಪ್ರಕಟ
ನಾಯಕನಾಗಿ ಬಾಂಗ್ಲಾದೇಶ ತಂಡ ಮುನ್ನಡೆಸಲಿರುವ ಶಕೀಬ್ ಅಲ್ ಹಸನ್
ಆಗಸ್ಟ್‌ 27ರಿಂದ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ

ಢಾಕಾ(ಆ.14): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು, ಇದೇ ಆಗಸ್ಟ್‌ 27ರಿಂದ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಲ್ರೌಂಡರ್ ಶಕೀಬ್ ಅಲ್‌ ಹಸನ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ. 

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಶನಿವಾರ, ಮುಂಬರುವ ಏಷ್ಯಾಕಪ್ ಟಿ20 ಕ್ರಿಕೆಟ್ ಸರಣಿ, ನ್ಯೂಜಿಲೆಂಡ್, ಪಾಕಿಸ್ತಾನ ತಂಡಗಳ ಜತೆಗಿನ ಮೂರು ತಂಡಗಳನ್ನೊಂಡ ಸರಣಿ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಜರುಗಲಿದೆ. ಬಾಂಗ್ಲಾದೇಶ ತಂಡವು ಗ್ರೂಪ್ ಹಂತದಲ್ಲಿ ಶ್ರೀಲಂಕಾ ಹಾಗೂ ಆಪ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

ಚುಟುಕು ಕ್ರಿಕೆಟ್‌ನಲ್ಲಿ ಶಕೀಬ್ ಅಲ್ ಹಸನ್ ಅವರ ನಾಯಕತ್ವ ಅಷ್ಟೇ ಉತ್ತಮವಾಗಿಲ್ಲ. ಇದುವರೆಗೂ ಶಕೀಬ್ ಅಲ್ ಹಸನ್‌ 21 ಪಂದ್ಯಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಶಕೀಬ್ ನಾಯಕತ್ವದಲ್ಲಿ ಬಾಂಗ್ಲಾದೇಶ ತಂಡವು ಕೇವಲ 7 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ.  ಇನ್ನು ಕಳೆದ ಜೂನ್‌ನಲ್ಲಿ ಮೊಮಿನುಲ್ ಹಕ್‌, ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಶಕೀಬ್ ಅಲ್ ಹಸನ್ ಅವರಿಗೆ ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ.

ಬಾಂಗ್ಲಾದೇಶ ತಂಡದಲ್ಲಿ ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರರ ಪಡೆಯನ್ನು ಹೊಂದಿದೆ. ಶಕೀಬ್ ಅಲ್ ಹಸನ್‌, ಮೊಹಮ್ಮದುಲ್ಲಾ, ಮುಷ್ಫಿಕುರ್ ರಹೀಮ್, ಮುಷ್ತಾಫಿಜುರ್ ರೆಹಮಾನ್, ಮೆಹದಿ ಹಸನ್, ಟಸ್ಕಿನ್ ಅಹಮ್ಮದ್ ಸೇರಿದಂತೆ ಹಲವು ಚಿರಪರಿಚಿತ ಹೆಸರುಗಳು ಬಾಂಗ್ಲಾದೇಶ ತಂಡದಲ್ಲಿವೆ. 

Ind vs Pak ಭಾರತವನ್ನು ಎದುರಿಸುವಾಗ ಯಾವಾಗಲೂ ಒತ್ತಡವಿರುತ್ತೆ: ಪಾಕ್ ನಾಯಕ ಬಾಬರ್ ಅಜಂ

ಇತ್ತೀಚೆಗಷ್ಟೇ ಶಕೀಬ್ ಅಲ್ ಹಸನ್‌ ಅವರು ಬೆಟ್ಟಿಂಗ್ ವೆಬ್‌ಸೈಟ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ 35 ವರ್ಷದ ಶಕೀಬ್ ಅಲ್ ಹಸನ್‌ಗೆ ಬಾಂಗ್ಲಾದೇಶ ರಾಷ್ಟ್ಟೀಯ ತಂಡದಲ್ಲಿ ಆಡಬೇಕು ಎಂದಿದ್ದರೇ, ಬೆಟ್ಟಿಂಗ್ ವೆಬ್‌ಸೈಟ್‌ ಜತೆಗಿನ ಪ್ರಾಯೋಜಕತ್ವದಿಂದ ಹಿಂದೆ ಸರಿಯಬೇಕು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಖಡಕ್ ವಾರ್ನಿಂಗ್ ನೀಡಿತ್ತು. ಇದರ ಬೆನ್ನಲ್ಲೇ ಬೆಟ್ಟಿಂಗ್ ವೆಬ್‌ಸೈಟ್‌ ಜತೆಗಿನ ಪ್ರಾಯೋಜಕತ್ವ ಕೈಬಿಟ್ಟು, ಬಾಂಗ್ಲಾದೇಶ ರಾಷ್ಟ್ರೀಯ ತಂಡದ ಜತೆಗಿರುವ ತೀರ್ಮಾನಕ್ಕೆ ಶಕೀಬ್ ಅಲ್ ಹಸನ್ ಬಂದಿದ್ದರು.

ಏಷ್ಯಾಕಪ್, ನ್ಯೂಜಿಲೆಂಡ್ ಪ್ರವಾಸ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಹೀಗಿದೆ ನೋಡಿ

ಶಕೀಬ್ ಅಲ್ ಹಸನ್(ನಾಯಕ), ಅನ್ಮುಲ್ ಹಕ್, ಮುಷ್ಪಿಕುರ್ ರಹಿಮ್, ಅಫಿಫ್ ಹೊಸೈನ್, ಮೊಸದಕ್ ಹೊಸೈನ್, ಮೊಹಮ್ಮದುಲ್ಲಾ, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮೊಹಮ್ಮದ್, ಮುಷ್ತಾಫಿಜುರ್ ರೆಹಮಾನ್, ನಸುಮ್‌ ಅಹಮ್ಮದ್, ಶಬ್ಬೀರ್ ರೆಹಮಾನ್, ಮೆಹದಿ ಹಸನ್ ಮಿರಾಜ್, ಎಬೊದತ್ ಹೊಸೈನ್, ಪರ್ವೇಜ್‌ ಹೊಸೈನ್ ಎಮೊನ್, ನುರುಲ್ ಹಸನ್, ಟಸ್ಕಿನ್ ಅಹಮದ್.

click me!