ರಾಷ್ಟ್ರಧ್ವಜಕ್ಕೆ ಅಗೌರವ; ಭಾರತೀಯ ಫ್ಯಾನ್ಸ್‌ ಮೇಲೆ ಕಿಡಿಕಾರಿದ ಗವಾಸ್ಕರ್

By Suvarna NewsFirst Published Sep 7, 2021, 4:24 PM IST
Highlights

* ಇಂಗ್ಲೆಂಡ್ ಎದುರು 4ನೇ ಟೆಸ್ಟ್‌ ಪಂದ್ಯವನ್ನು ಜಯಿಸಿದ ಟೀಂ ಇಂಡಿಯಾ

* ಭಾರತ ಪರ ಚಿಯರ್ ಅಪ್‌ ಮಾಡುವ ಭರದಲ್ಲಿ ಅಭಿಮಾನಿಗಳ ಎಡವಟ್ಟು

* ಭಾರತೀಯ ಫ್ಯಾನ್ಸ್‌ ಕಿವಿಹಿಂಡಿದ ಸುನಿಲ್ ಗವಾಸ್ಕರ್

ನವದೆಹಲಿ(ಸೆ.07): ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬರೋಬ್ಬರಿ 50 ವರ್ಷಗಳ ಬಳಿಕ ಓವಲ್‌ ಮೈದಾನದಲ್ಲಿ ಟೆಸ್ಟ್‌ ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್ ಎದುರಿನ 4ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 157 ರನ್‌ ಅಂತರದ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1ರ ಮುನ್ನೆಡೆ ಸಾಧಿಸಿದೆ. ಗೆಲುವಿನ ಖುಷಿಯಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾಡಿದ ಒಂದು ಎಡವಟ್ಟಿಗೆ ಮಾಜಿ ದಿಗ್ಗಜ ಕ್ರಿಕೆಟಿಗ ಸುನಿಲ್‌ ಗವಾಸ್ಕರ್ ಕಿಡಿಕಾರಿದ್ದಾರೆ.

ಗೆಲುವಿನ ಖುಷಿಯಲ್ಲಿ ಅಭಿಮಾನಿಗಳು ಕೆಲವೊಮ್ಮೆ ನೈತಿಕ ನೆಲಗಟ್ಟಿನಲ್ಲಿ ಮಿತಿಮೀರಿ ವರ್ತಿಸಿದ ಸನ್ನಿವೇಷಗಳಿಗೂ ಸಾಕ್ಷಿಯಾಗಿದ್ದೇವೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ವೀಕ್ಷಕ ವಿವರಣೆಗಾರರ ಕಾರ್ಯ ನಿರ್ವಹಿಸುತ್ತಿರುವ ಸುನಿಲ್‌ ಗವಾಸ್ಕರ್, ಭಾರತೀಯ ಅಭಿಮಾನಿಗಳು ರಾಷ್ಟ್ರಧ್ವಜಕ್ಕೆ ತೋರಿದ ಅಗೌರವದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Sunil Gavaskar to fans : Show your love for the country but don't deface the flag by writing anything on it.

What a legend.

— Roshan Rai  (@ItsRoshanRai)

ಓವಲ್ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಭಾರತ ಕ್ರಿಕೆಟ್‌ ಅಭಿಮಾನಿಗಳ ಗುಂಪೊಂದು ದೊಡ್ಡ ರಾಷ್ಟ್ರಧ್ವಜವೊಂದನ್ನು ಮೈದಾನಕ್ಕೆ ತಂದು ಅದರ ಮೇಲೆ We Bleed Blue ಎಂದು ಬರೆದಿದ್ದರು. ದೇಶದ ಮೇಲೆ ಅಭಿಮಾನ ತೋರಿಸುವ ಭರದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಬೇಡಿ ಎಂದು ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ. ನೀವೆಷ್ಟೇ ದೊಡ್ಡ ಅಭಿಮಾನಿಯಾಗಿರಬಹುದು, ಆದರೆ ರಾಷ್ಟ್ರಧ್ವಜಕ್ಕೆ ಯಾವತ್ತೂ ಅಗೌರವ ತೋರಬೇಡಿ. ಅದು ಹೇಗಿರಬೇಕೋ ಹಾಗೆಯೇ ಇರಲಿ ಎಂದು ಗವಾಸ್ಕರ್ ನೇರ ಪ್ರಸಾರದ ವೀಕ್ಷಕ ವಿವರಣೆಯಲ್ಲೇ ಕಿಡಿಕಾರಿದ್ದಾರೆ.

Ind vs Eng ನೀವು ನೋಡಿರದ ಟೀಂ ಇಂಡಿಯಾ ಗೆಲುವಿನ ಸಂಭ್ರಮಾಚರಣೆಯಿದು..!

ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ರಾಷ್ಟ್ರಧ್ವಜ ಸಂಹಿತೆ 1971ರ ಪ್ರಕಾರ ಅಪರಾಧವಾಗಿದೆ. ಈ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಒಂದು ವೇಳೆ ಇಂತಹ ಘಟನೆ ಭಾರತದಲ್ಲೇ ನಡೆದಿದ್ದರೆ ಬಹುಶಃ ಪರಿಸ್ಥಿತಿ ಬೇರೆಯದ್ದೇ ಆಗಿರುತ್ತಿತ್ತು. ಭಾರತದಲ್ಲಿ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಪಾವಿತ್ರ್ಯತೆ ಹಾಗೂ ಗೌರವವಿದೆ. ರಾಷ್ಟ್ರಧ್ವಜಕ್ಕೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅಭಿಮಾನದ ಭರದಲ್ಲಿ ನಮ್ಮ ಕರ್ತವ್ಯ ಮರೆಯದಿರೋಣ. ನೀವೇನಂತೀರಾ..?

click me!