Asia Cup 2022: ಅಕ್ಷರ್ ಪಟೇಲ್‌ಗೆ ಸ್ಥಾನ ನೀಡದಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಪಾರ್ಥಿವ್ ಪಟೇಲ್..!

By Naveen KodaseFirst Published Aug 11, 2022, 1:44 PM IST
Highlights

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಅಕ್ಷರ್ ಪಟೇಲ್‌ಗಿಲ್ಲ ಸ್ಥಾನ
ಏಷ್ಯಾಕಪ್ ಟೂರ್ನಿಯು ಆಗಸ್ಟ್ 27ರಿಂದ ಆರಂಭ
ವಿಂಡೀಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಅಕ್ಷರ್ ಪಟೇಲ್

ನವದೆಹಲಿ(ಆ.11): ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ  ಸೆಳೆದಿದ್ದ ಆಲ್ರೌಂಡರ್‌ ಅಕ್ಷರ್ ಪಟೇಲ್, ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇದೀಗ ಅಕ್ಷರ್ ಪಟೇಲ್‌ ಅವರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ನೀಡದೇ ಇರುವುದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಕುರಿತಂತೆ ಮಾತನಾಡಿರುವ ಪಾರ್ಥಿವ್ ಪಟೇಲ್‌, ಅಕ್ಷರ್ ಪಟೇಲ್‌ ಟೀಂ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಾಗಲೆಲ್ಲಾ, ನಾವೆಲ್ಲರೂ ಅವರಿಂದ ಏನನ್ನು ನಿರೀಕ್ಷಿಸುತ್ತೇವೋ ಅದನ್ನು ಅವರು ನೀಡಿದ್ದಾರೆ. ಹೀಗಿದ್ದೂ ಅವರು ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗದೇ ಹೋದದ್ದು ಅಚ್ಚರಿಯಾಗುತ್ತಿದೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ. ನನಗೆ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಹೊರಗಿಟ್ಟಿದ್ದು ಸಾಕಷ್ಟು ಅಚ್ಚರಿ ಮೂಡಿಸಿತು. ತಂಡ ಬಯಸಿದಂತಹ ಪ್ರದರ್ಶನವನ್ನು ಅವಕಾಶ ಸಿಕ್ಕಾಗಲೆಲ್ಲಾ ಅವರು ಮಾಡುತ್ತಲೇ ಬಂದಿದ್ದಾರೆ ಎಂದು ಪಾರ್ಥಿವ್ ಪಟೇಲ್ ತಮ್ಮದೇ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ಪ್ರಕಾರ, ಕಳೆದ ಟಿ20 ವಿಶ್ವಕಪ್‌ನಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಅವಕಾಶ ನೀಡಿ ಪ್ರಯೋಗ ನಡೆಸಿದರು. ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ನಿಮಗೆ ಆಫ್‌ಸ್ಪಿನ್ನರ್ ಅಗತ್ಯವಿದೆ ಎಂದಾದರೇ ದೀಪಕ್ ಹೂಡಾ ಕೂಡಾ ಒಳ್ಳೆಯ ಆಯ್ಕೆಯಾಗಬಲ್ಲರು. ರವೀಂದ್ರ ಜಡೇಜಾ ಅವರಿಗೆ ಬ್ಯಾಕ್‌ ಅಪ್‌ ಆಗಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಇನ್ನು ಏಷ್ಯಾಕಪ್‌ ಟೂರ್ನಿಗೆ ಒಟ್ಟಾರೆ ಭಾರತ ತಂಡ ಹೇಗಿದೆ ಎನ್ನುವುದರ ಕುರಿತಂತೆ ಪಾರ್ಥಿವ್ ಪಟೇಲ್ ಮಾತನಾಡಿದ್ದು, ಓರ್ವ ತಜ್ಞ ವೇಗಿಯ ಕೊರತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಭಾರತ ತಂಡವು ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಂಡಿದೆ. ಇದು ಯುಎಇನ ವಾತಾವರಣವನ್ನು ಗಮನಿಸಿದರೇ  ಕೊಂಚ ಅಚ್ಚರಿಯಾಗುತ್ತದೆ. ಇನ್ನು ಕೇವಲ ಮೂವರು ವೇಗಿಗಳನ್ನು ಮಾತ್ರ ಆಯ್ದುಕೊಂಡಿದೆ. ಇಲ್ಲಿ ಓರ್ವ ವೇಗಿಯ ಕೊರತೆಯಾದಂತೆ ಕಾಣುತ್ತಿದೆ. ಕಳೆದ ಬಾರಿ ಇಲ್ಲಿ ನಡೆದ ಐಪಿಎಲ್‌ ಪಂದ್ಯಾವಳಿಗಳನ್ನು ಗಮನಿಸಿದರೇ ವೇಗಿಗಳಿಗೆ ಹೆಚ್ಚಿನ ನೆರವು ಸಿಕ್ಕಿತ್ತು. ಹೀಗಾಗಿ ಟೀಂ ಇಂಡಿಯಾ ಮೂರು ಸ್ಪಿನ್ನರ್‌ಗಳು ಹಾಗೂ ನಾಲ್ವರು ವೇಗಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಭುಜದ ನೋವಿಗೆ ತುತ್ತಾದ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್..!

ಇದೇ ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ಗಾಯದ ಸಮಸ್ಯೆಯಿಂದಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್‌ ಪಟೇಲ್ ಸದ್ಯ ಏಷ್ಯಾಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಇಬ್ಬರು ವೇಗಿಗಳು ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ. ಸಾಕಷ್ಟು ಬಿಡುವಿನ ಬಳಿಕ ಭಾರತ ತಂಡವನ್ನು ಕೂಡಿಕೊಂಡಿರುವ ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಏಷ್ಯಾಕಪ್‌ಗೆ  ಟೀಂ ಇಂಡಿಯಾ: ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್‌ ಪಂತ್‌ (ವಿ.ಕೀ), ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯಜುವೇಂದ್ರ ಚಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಆರ್ಶ್‌ದೀಪ್‌ ಸಿಂಗ್‌,  ಅವೇಶ್ ಖಾನ್.

click me!