
ಬೆಂಗಳೂರು(ಏ.06): ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗುವ ತಂಡ ಯಾವುದು ಎನ್ನುವ ಕುರಿತಂತೆ ಭವಿಷ್ಯ ನುಡಿದಿದ್ದಾರೆ. ಅಚ್ಚರಿಯೆಂದರೆ, ಎಬಿಡಿ, ಆರ್‌ಸಿಬಿ ಬದಲು ಇನ್ನೊಂದು ತಂಡವು ಕಪ್ ಗೆಲ್ಲಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಎಬಿ ಡಿವಿಲಿಯರ್ಸ್ ಅವರಿಗೆ 'ಆರ್‌ಸಿಬಿ ಹಾಲ್ ಆಫ್ ಫೇಮ್' ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕಪ್ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡಕ್ಕೆ ಈ ಬಾರಿ ಮತ್ತೊಮ್ಮೆ ಕಪ್ ಗೆಲ್ಲುವ ಸಾಮರ್ಥ್ಯವಿದೆ ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ
ಈ ಬಾರಿ ಕಪ್ ಗೆಲ್ಲೋರು ಯಾರು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಎಬಿ ಡಿವಿಲಿಯರ್ಸ್, "ಯಾರು ಎಂದು ಊಹಿಸುವುದು ನಿಜಕ್ಕೂ ಕಷ್ಟ. ತುಂಬಾ ಸಮಯದ ಹಿಂದೆ, ಅಂದರೆ ಐಪಿಎಲ್ ಆಟಗಾರರ ಹರಾಜಿನ ವೇಳೆಯಲ್ಲಿ ನಾನು, ಗುಜರಾತ್ ಟೈಟಾನ್ಸ್ ಸತತವಾಗಿ ಕಪ್ ಗೆಲ್ಲಲಿದೆ ಎಂದು ಹೇಳಿದ್ದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಕಪ್ ಗೆಲ್ಲಬೇಕು ಎಂದು ಮನಸ್ಸಿನಲ್ಲಿದ್ದರೂ ಸಹಾ, ಟೈಟಾನ್ಸ್ ಕಪ್ ಗೆಲ್ಲಲಿದೆ ಎನ್ನುವ ನನ್ನ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ಕಳೆದ ವರ್ಷವೂ ಅವರು ಒಳ್ಳೆಯ ತಂಡವನ್ನು ಹೊಂದಿದ್ದರು. ತಂಡವು ಸಮತೋಲನದಿಂದ ಕೂಡಿದೆ ಎಂದು ಎಬಿಡಿ ಹೇಳಿದ್ದಾರೆ.
"RCB ಪರ ಕೊಹ್ಲಿ ಸಾಧಿಸಿದ್ದನೇ ನಾನು ಸಾಧಿಸಬೇಕು": ಸ್ಮೃತಿ ಮಂಧನಾ ಹೇಳಿಕೆ ಬಗ್ಗೆ ಕೊಹ್ಲಿ ರಿಯಾಕ್ಷನ್ ವೈರಲ್..!
ವಿರಾಟ್ ಕೊಹ್ಲಿ, ನಾಯಕತ್ವದಿಂದ ಕೆಳಗಿಳಿದ ಬಳಿಕ ಕೊಂಚ ರಿಲ್ಯಾಕ್ಸ್ ಆದಂತೆ ಕಾಣುತ್ತಿದ್ದಾರೆ. ಅವರೊಬ್ಬ ಅದ್ಭುತ ನಾಯಕ ಆದರೆ ದೀರ್ಘಕಾಲದ ವರೆಗೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ನಲ್ಲಿ ನಾಯಕತ್ವವನ್ನು ನಿಭಾಯಿಸುವುದು ಸುಲಭವಲ್ಲ. ಹೀಗಾದಾಗ ನಿಮಗೆ ಕುಟುಂಬದೊಟ್ಟಿಗೆ, ಸ್ನೇಹಿತರೊಂದಿಗೆ ಕೆಲವು ಕಾಲ ಎಂಜಾಯ್ ಮಾಡಲು ಬಿಡುವೇ ಸಿಗುವುದಿಲ್ಲ. ಈ ವರ್ಷ ರಿಲ್ಯಾಕ್ಸ್ ಆಗಿರುವುದರಿಂದರಿಂದ ವಿರಾಟ್ ಕೊಹ್ಲಿ ಬ್ಯಾಟಿಂದ ಉತ್ತಮ ಪ್ರದರ್ಶನ ಮೂಡಿ ಬರುವ ವಿಶ್ವಾಸವಿದೆ ಎಂದು ಎಬಿಡಿ ಹೇಳಿದ್ದಾರೆ.
ವಿರಾಟ್ ಕೊಹ್ಲಿಯವರಲ್ಲಿ ಹೆಚ್ಚಿನ ಬದಲಾವಣೆಯಾಗಿದೆ ಎಂದೇನು ನನಗೆ ಅನಿಸುತ್ತಿಲ್ಲ, ಎಲ್ಲವೂ ಸಹಜವಾಗಿಯೇ ಇದೆ. ತಾಂತ್ರಿಕವಾಗಿ ಅವರು ಮತ್ತಷ್ಟು ಬಲಾಢ್ಯರಾದಂತೆ ಕಂಡು ಬರುತ್ತಿದ್ದಾರೆ. ಕ್ರೀಸ್‌ನಲ್ಲಿಯೂ ಅವರು ಒಳ್ಳೆಯ ಬ್ಯಾಲೆನ್ಸ್ ಹೊಂದಿದ್ದಾರೆ. ನನ್ನ ಪ್ರಕಾರ ಅವರು ಈ ಬಾರಿಯ ಐಪಿಎಲ್‌ನಲ್ಲಿ ಫ್ರೆಶ್ ಆಗಿ ಕಣಕ್ಕಿಳಿದಂತೆ ಕಾಣುತ್ತಿದ್ದಾರೆ. ನಾನು ಅವರ ಕೆಲವು ಸಂದರ್ಶನಗಳನ್ನು ನೋಡಿದ್ದೇವೆ. ಅಲ್ಲಿ ಹಿಂದೆಂದಿಗಿಂತಲೂ ಹೆಚ್ಚು ನಗುಮುಖದಲ್ಲಿ ಕಾಣಿಸುತ್ತಿದ್ದಾರೆ ಎಂದು ಎಬಿಡಿ ಹೇಳಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಆರ್‌ಸಿಬಿ ತಂಡವು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಆರ್‌ಸಿಬಿ ತಂಡವು 8 ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯ 82 ರನ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.