ರಿಕಿ ಪಾಂಟಿಂಗ್, ವಿರೇಂದ್ರ ಸೆಹ್ವಾಗ್ ಸಾರ್ವಕಾಲಿಕ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ..!

By Naveen KodaseFirst Published Jan 18, 2023, 2:21 PM IST
Highlights

ಇಂದಿನಿಂದ ಭಾರತ-ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿ ಆರಂಭ
ಪಾಂಟಿಂಗ್, ಸೆಹ್ವಾಗ್ ಸಾರ್ವಕಾಲಿಕ ದಾಖಲೆ ಮುರಿಯಲು ಕಿಂಗ್ ಕೊಹ್ಲಿ ರೆಡಿ
ಇನ್ನೊಂದು ಶತಕ ಸಿಡಿಸಿದ್ರೆ ಕೊಹ್ಲಿ, ಸಾರ್ವಕಾಲಿಕ ದಾಖಲೆ ಸರಿಗಟ್ಟಲಿದ್ದಾರೆ

ಹೈದರಾಬಾದ್‌(ಜ.18): ಟೀಂ ಇಂಡಿಯಾ ರನ್‌ ಮಷೀನ್ ವಿರಾಟ್ ಕೊಹ್ಲಿ, ಅದ್ಭುತ ಲಯದಲ್ಲಿದ್ದು, ಲಂಕಾ ಎದುರಿನ  ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರನ್ ಮಳೆ ಹರಿಸಿದ್ದಾರೆ. ಲಂಕಾ ಎದುರು ಆಡಿದ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಶತಕ ಚಚ್ಚಿದ್ದ ಕೊಹ್ಲಿ, ಇದೀಗ ಕಿವೀಸ್‌ ಎದುರು ಅಬ್ಬರಿಸಲು ರೆಡಿಯಾಗಿದ್ದಾರೆ. ಇನ್ನು ಇದೇ ಸರಣಿಯಲ್ಲಿ ಕ್ರಿಕೆಟ್ ದಿಗ್ಗಜರಾದ ವಿರೇಂದ್ರ ಸೆಹ್ವಾಗ್ ಹಾಗೂ ರಿಕಿ ಪಾಂಟಿಂಗ್ ಅವರ ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳಲು ಸಜ್ಜಾಗಿದ್ದಾರೆ.

ಈಗಾಗಲೇ ಹಲವು ಸಾರ್ವಕಾಲಿಕ ದಾಖಲೆಗಳ ಒಡೆಯರಾಗಿರುವ ವಿರಾಟ್ ಕೊಹ್ಲಿ, ಲಂಕಾ ಎದುರು ಮೂರನೇ ಪಂದ್ಯದಲ್ಲಿ ಶತಕ ಸಿಡಿಸುವುದರ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತವರಿನಲ್ಲಿ 21 ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದರ ಜತೆಗೆ ಒಂದು ನಿರ್ದಿಷ್ಟ ತಂಡದ ಎದುರು ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನ್ನುವ ದಾಖಲೆ ಹೊಂದಿದ್ದ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು.  

ಇದೀಗ ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ, ಮತ್ತೊಂದು ಸಾರ್ವಕಾಲಿಕ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ನ್ಯೂಜಿಲೆಂಡ್ ಎದುರು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಕಿವೀಸ್ ಎದುರು ವಿರಾಟ್ ಕೊಹ್ಲಿ, 26 ಏಕದಿನ ಪಂದ್ಯಗಳನ್ನಾಡಿ 5 ಶತಕ ಹಾಗೂ 8 ಅರ್ಧಶತಕ ಸಹಿತ 59.91ರ ಬ್ಯಾಟಿಂಗ್ ಸರಾಸರಿಯಲ್ಲಿ 1,378 ರನ್ ಬಾರಿಸಿದ್ದಾರೆ. 

ಇದೀಗ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದ್ದು, ಕೊಹ್ಲಿ, ಕಿವೀಸ್ ಎದುರು ಇನ್ನೊಂದು ಶತಕ ಬಾರಿಸಿದರೇ, ದಿಗ್ಗಜ ಆಟಗಾರರಾದ ವಿರೇಂದ್ರ ಸೆಹ್ವಾಗ್ ಹಾಗೂ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ. ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಹಾಗೂ ರಿಕಿ ಪಾಂಟಿಂಗ್ ತಲಾ 6 ಶತಕ ಸಿಡಿಸಿದ್ದಾರೆ. ಕೊಹ್ಲಿ ಇನ್ನೊಂದು ಶತಕ ಸಿಡಿಸಿದರೇ, ಈ ದಾಖಲೆ ಸರಿಗಟ್ಟಲಿದ್ದಾರೆ. ಕಿವೀಸ್ ಎದುರು ಇನ್ನೆರಡು ಶತಕ ಬಾರಿಸಿದರೇ, ಸಾರ್ವಕಾಲಿಕ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ.

click me!