IPL 2022: ಅಂಡರ್‌ ಡಾಗ್ಸ್‌ ಗುಜರಾತ್ ಟೈಟಾನ್ಸ್‌ ಟ್ರೋಫಿ ಗೆದ್ದಿದ್ದೇಗೆ?

Published : May 31, 2022, 07:15 AM ISTUpdated : May 31, 2022, 08:03 AM IST
IPL 2022: ಅಂಡರ್‌ ಡಾಗ್ಸ್‌ ಗುಜರಾತ್ ಟೈಟಾನ್ಸ್‌ ಟ್ರೋಫಿ ಗೆದ್ದಿದ್ದೇಗೆ?

ಸಾರಾಂಶ

* ಚೊಚ್ಚಲ ಪ್ರಯತ್ನದಲ್ಲೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ ಗುಜರಾತ್ ಟೈಟಾನ್ಸ್ * ಎಲ್ಲಾ ನಿರೀಕ್ಷೆಗಳನ್ನು ಮೀರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹಾರ್ದಿಕ್ ಪಾಂಡ್ಯ ಪಡೆ * ‘ಅಂಡರ್‌ ಡಾಗ್ಸ್‌’ ಎನಿಸಿಕೊಂಡಿದ್ದ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದಿದ್ದೇ ಒಂದು ಪವಾಡ

ಬೆಂಗಳೂರು(ಮೇ.31): ಚೊಚ್ಚಲ ಪ್ರಯತ್ನದಲ್ಲೇ ಐಪಿಎಲ್‌ ಚಾಂಪಿಯನ್‌ ಆದ ಗುಜರಾತ್‌ ಟೈಟಾನ್ಸ್‌ನದ್ದು (IPL Champion Gujarat Titans) ಖಂಡಿತವಾಗಿಯೂ ಒಂದು ‘ಅಂಡರ್‌ ಡಾಗ್ಸ್‌’ ಕಥೆ. ಈ ತಂಡ ಅಥವಾ ಆಟಗಾರ ಗೆಲ್ಲಬಹುದು ಅಂತ ಯಾರೂ ನಿರೀಕ್ಷೆ ಇಟ್ಟುಕೊಂಡಿರುವುದಿಲ್ಲ. ಅಂತಹ ಆಟಗಾರ ಇಲ್ಲವೇ ತಂಡವನ್ನು ‘ಅಂಡರ್‌ ಡಾಗ್ಸ್‌’ ಎಂದು ಕರೆಯಲಾಗುತ್ತೆ. ಮೆಗಾ ಹರಾಜು ಮುಗಿದು 15ನೇ ಆವೃತ್ತಿಗೆ ತಂಡ ಸಿದ್ಧಗೊಂಡಾಗ ಈ ತಂಡ ಚಾಂಪಿಯನ್‌ ಆಗಲಿದೆ ಎಂದು ಯಾರೂ ನಂಬಿರಲಿಲ್ಲ. ಇನ್ನು ಟೂರ್ನಿಗೆ 3-4 ವಾರ ಬಾಕಿ ಇರುವಾಗಲೂ ತಂಡದ ಸ್ಪರ್ಧೆ ಖಚಿತವಾಗಿರಲಿಲ್ಲ. ತಂಡದ ಮಾಲಿಕರು ಬೆಟ್ಟಿಂಗ್‌ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅನರ್ಹಗೊಳಿಸುವಂತೆ ಕೂಗು ಕೇಳಿಬಂದಿತ್ತು. ಇಷ್ಟಾಗಿಯೂ ಗುಜರಾತ್ ಟೈಟಾನ್ಸ್‌ ಚಾಂಪಿಯನ್‌ ಆಗಿದ್ದೇಗೆ? ತಂಡದ ಯಶಸ್ಸಿಗೆ ಕೊಡುಗೆ ನೀಡಿದ ಆಟಗಾರರು ಯಾರಾರ‍ಯರು ಎನ್ನುವ ವಿವರ ಇಲ್ಲಿದೆ.

ಕನ್ನಡಪ್ರಭ ವಿಶ್ಲೇಷಣೆ

ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದ ತ್ರಿವಳಿಗಳು!

ಗುಜರಾತ್‌ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಮೂವರು ಬ್ಯಾಟರ್‌ಗಳು. ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ತಂಡದ ನಂ.1 ಬ್ಯಾಟರ್‌ ಆಗಿ ಹೊರಹೊಮ್ಮಿದರು. ಒಟ್ಟು 487 ರನ್‌ ಕಲೆಹಾಕಿದ ಹಾರ್ದಿಕ್‌ ತಂಡದ ಪರ ಅತಿಹೆಚ್ಚು ರನ್‌ ಗಳಿಸಿದ ಆಟಗಾರ. ಶುಭ್‌ಮನ್‌ ಗಿಲ್‌ (Shubman Gill) 483, ಡೇವಿಡ್‌ ಮಿಲ್ಲರ್‌ (David Miller) 481 ರನ್‌ ಕಲೆಹಾಕಿದರು. ಬಹುತೇಕ ಪಂದ್ಯಗಳಲ್ಲಿ ಈ ಮೂವರ ಪೈಕಿ ಕನಿಷ್ಠ ಒಬ್ಬರು ಉತ್ತಮ ಪ್ರದರ್ಶನ ತೋರಿದರು. ಇನ್ನು ಕೇವಲ 11 ಪಂದ್ಯಗಳನ್ನು ಆಡಿದರೂ ವೃದ್ಧಿಮಾನ್‌ ಸಾಹ (Wriddhiman Saha) 317 ರನ್‌ ಗಳಿಸಿ ತಂಡದ ಯಶಸ್ಸಿಗೆ ಕೊಡುಗೆ ನೀಡಿದರು.

ಗುಜರಾತ್‌ ಈ ಆವೃತ್ತಿಯಲ್ಲಿ ಒಮ್ಮೆಯೂ 200 ರನ್‌ ಗಳಿಸಲಿಲ್ಲ. ತಂಡ 16 ಪಂದ್ಯಗಳಲ್ಲಿ ಕೇವಲ 4 ಬಾರಿ ಮಾತ್ರ 190 ರನ್‌ ಅಥವಾ ಅದಕ್ಕಿಂತ ಹೆಚ್ಚು ರನ್‌ ಗಳಿಸಿತು. ಇನ್ನು ಇಡೀ ಅವೃತ್ತಿಯಲ್ಲಿ ತಂಡದಿಂದ ದಾಖಲಾಗಿದ್ದು 79 ಸಿಕ್ಸರ್‌ ಮಾತ್ರ.

10 ಬೌಲರ್‌ಗಳನ್ನು ಬಳಸಿದ ಟೈಟಾನ್ಸ್‌!

ಗುಜರಾತ್‌ ಈ ಆವೃತ್ತಿಯಲ್ಲಿ ಒಟ್ಟು 10 ಬೌಲರ್‌ಗಳ ಸೇವೆಯನ್ನು ಬಳಸಿಕೊಂಡಿತು. ಇದರಲ್ಲಿ ಹಾರ್ದಿಕ್‌ ಸಹ ಒಬ್ಬರು. ಮೊಹಮದ್‌ ಶಮಿ, ರಶೀದ್‌ ಖಾನ್‌ (Rashid Khan), ಲಾಕಿ ಫಗ್ರ್ಯೂಸನ್‌, ಹಾರ್ದಿಕ್‌ ಹೊರತುಪಡಿಸಿ ಉಳಿದ್ಯಾವ ಬೌಲರ್‌ ಸಹ 10ಕ್ಕಿಂತ ಹೆಚ್ಚು ಪಂದ್ಯ ಆಡಲಿಲ್ಲ. ಯಶ್‌ ದಯಾಳ್‌, ಸಾಯಿ ಕಿಶೋರ್‌, ದರ್ಶನ್‌ ನಲ್ಕಂಡೆಯಂತಹ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಯಿತು. ಅನುಭವವಿದ್ದರೂ ಹೆಚ್ಚು ಯಶಸ್ಸು ಕಾಣದ ಪ್ರದೀಪ್‌ ಸಾಂಗ್ವಾನ್‌, ವರುಣ್‌ ಆ್ಯರೋನ್‌ಗೂ ಅವಕಾಶ ಸಿಕ್ಕಿತು. 15ನೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 5 ಸ್ಥಾನಗಳಲ್ಲಿ ಟೈಟಾನ್ಸ್‌ನ ಒಬ್ಬ ಬೌಲರ್‌ ಸಹ ಇಲ್ಲ. 20 ವಿಕೆಟ್‌ ಕಿತ್ತ ಶಮಿ 6ನೇ ಸ್ಥಾನ ಪಡೆದಿದ್ದಾರೆ. ರಶೀದ್‌ 19 ವಿಕೆಟ್‌ ಕಬಳಿಸಿದರು. ಆದರೂ ತಂಡ ಆಡಿದ 16 ಪಂದ್ಯಗಳಲ್ಲಿ ಒಮ್ಮೆಯೂ 200 ರನ್‌ ಬಿಟ್ಟುಕೊಡಲಿಲ್ಲ.

ಸವಾಲುಗಳನ್ನು ಮೆಟ್ಟಿನಿಂತು ಕಪ್‌ ಗೆಲುವು!

ಹರಾಜಿನಲ್ಲಿ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳಲಿಲ್ಲ ಎನ್ನುವ ಟೀಕೆಗೆ ಗುರಿಯಾಗಿದ್ದ ಗುಜರಾತ್‌, ಆರಂಭಿಕ ಕೆಲ ಪಂದ್ಯಗಳಲ್ಲಿ ಸರಿಯಾದ ಆಡುವ ಹನ್ನೊಂದರ ಬಳಗವನ್ನು ಹೊಂದಿಸಲು ಕಷ್ಟಪಟ್ಟಿತ್ತು. ಆದರೆ ಕೋಚ್‌ಗಳಾದ ಗ್ಯಾರಿ ಕಸ್ರ್ಟನ್‌, ಆಶಿಶ್‌ ನೆಹ್ರಾ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿದರು. ಅವರು ನಡೆಸಿದ ಪ್ರಯೋಗಗಳು ಕೈಹಿಡಿದವು. ಆಟಗಾರರು ನಂಬಿಕೆ ಉಳಿಸಿಕೊಂಡರು. ಇನ್ನು ತಂಡದಲ್ಲಿ ರಶೀದ್‌ ಖಾನ್‌ ಹೊರತುಪಡಿಸಿ ಮತ್ತೊಬ್ಬ ತಾರಾ ಸ್ಪಿನ್ನರ್‌ ಇರಲಿಲ್ಲ. ಆದರೆ ತಂಡ ವೇಗಿಗಳನ್ನಿಟ್ಟುಕೊಂಡೇ ಬಹುತೇಕ ಪಂದ್ಯಗಳನ್ನು ಜಯಿಸಿತು. ಕೊನೆ ಕೆಲ ಪಂದ್ಯಗಳಲ್ಲಿ ಎಡಗೈ ಸ್ಪಿನ್ನರ್‌ ಸಾಯಿ ಕಿಶೋರ್‌ರನ್ನು ಆಡಿಸಿದ್ದು ಲಾಭವಾಯಿತು.

IPL ಟ್ರೋಫಿ ಗೆಲ್ಲುತ್ತಿದ್ದಂತೆ ಪತಿ ಹಾರ್ದಿಕ್ ಪಾಂಡ್ಯರನ್ನು ಬಿಗಿದಪ್ಪಿದ ನತಾಶಾ ಸ್ಟಾಂಕೋವಿಚ್..!

ತಂಡದಲ್ಲಿ ಮ್ಯಾಚ್‌ ವಿನ್ನರ್‌ಗಳ ದಂಡು!

ಗುಜರಾತ್‌ ಇಡೀ ಟೂರ್ನಿಯಲ್ಲಿ ಸೋತಿದ್ದು 4 ಪಂದ್ಯಗಳಲ್ಲಿ ಮಾತ್ರ. ಒಟ್ಟು 8 ಪಂದ್ಯಗಳಲ್ಲಿ ತಂಡ ಗುರಿ ಬೆನ್ನತ್ತಿ ಜಯಿಸಿದೆ. ಈ ಆವೃತ್ತಿಯಲ್ಲಿ ತಂಡದ ಒಟ್ಟು 8 ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಸಮನಾದ ಕೊಡುಗೆಗಳು ಮೂಡಿಬಂದಿದ್ದು ಟೈಟಾನ್ಸ್‌ ಯಶಸ್ಸಿನ ರಹಸ್ಯ.

ಟೂರ್ನಿ ಸಾಗಿದಂತೆ ಪ್ರಭುತ್ವ ಸಾಧಿಸಿದ ನಾಯಕ ಹಾರ್ದಿಕ್‌!

ಮೊದಲ ಬಾರಿಗೆ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಹಾರ್ದಿಕ್‌ ಪಾಂಡ್ಯ ಆರಂಭಿಕ ಕೆಲ ಪಂದ್ಯಗಳಲ್ಲಿ ಬಹಳ ಬೇಗ ಸಹನೆ ಕಳೆದುಕೊಳ್ಳುತ್ತಿದ್ದರು. ಹಿರಿಯ ವೇಗಿ ಮೊಹಮದ್‌ ಶಮಿ ಮೇಲೆ ಸಿಟ್ಟಾಗಿದ್ದು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ ಟೂರ್ನಿ ಸಾಗಿದಂತೆ ಹಾರ್ದಿಕ್‌ ಪ್ರಭುತ್ವ ಕಂಡುಕೊಂಡರು. ತಂಡದ ನಿರ್ವಹಣೆಯನ್ನು ಅತ್ಯುತ್ತಮವಾಗಿ ನಡೆಸಿದರು. ನಾಯಕತ್ವದ ಒತ್ತಡ ತಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಂಡರು. ಮೇಲ್ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತ, ಬೌಲಿಂಗ್‌ನಲ್ಲೂ ಮಿಂಚುತ್ತ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಮಿಲ್ಲರ್‌ ಟೈಟಾನ್ಸ್‌ನ ಹೀರೋ!

ಮೆಗಾ ಹರಾಜಿನ ಮೊದಲ ದಿನ ಡೇವಿಡ್‌ ಮಿಲ್ಲರ್‌ ಬಿಕರಿಯಾಗದೆ ಉಳಿದಿದ್ದರು. 2ನೇ ದಿನ 3 ಕೋಟಿ ರು.ಗೆ ಗುಜರಾತ್‌ ಖರೀದಿಸಿದಾಗ ತಂಡದ ಲೆಕ್ಕಾಚಾರ ಕಂಡು ಹಾಸ್ಯ ಮಾಡಿದವರೇ ಹೆಚ್ಚು. ಆದರೆ ಮಿಲ್ಲರ್‌ ತಮ್ಮ ವೃತ್ತಿಬದುಕಿನ ಶ್ರೇಷ್ಠ ಪ್ರದರ್ಶನವನ್ನು ಈ ಐಪಿಎಲ್‌ನಲ್ಲಿ ತೋರಿದರು. ತಂಡದ 6 ರನ್‌ ಚೇಸ್‌ಗಳಲ್ಲಿ ಔಟಾಗದೆ ಉಳಿದರು. ಕ್ವಾಲಿಫೈಯರ್‌-1ನಲ್ಲಿ ಪಂದ್ಯಶ್ರೇಷ್ಠರಾದರು. ಚೆನ್ನೈ ವಿರುದ್ಧ 94 ರನ್‌ಗಳ ಇನ್ನಿಂಗ್ಸ್ ಅವರ ಅಸಲಿ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ 437 ರನ್‌ ಕಲೆಹಾಕಿದರು.

ಐಪಿಎಲ್‌ ಫೈನಲ್‌ಗೂ 2011ರ ವಿಶ್ವಕಪ್‌ ಫೈನಲ್‌ಗೂ ಸಾಮ್ಯತೆ!

15ನೇ ಆವೃತ್ತಿಯ ಐಪಿಎಲ್‌ ಫೈನಲ್‌ನಲ್ಲಿ ಸಿಕ್ಸರ್‌ನೊಂದಿಗೆ ಗೆಲುವಿನ ರನ್‌ ಬಾರಿಸಿದ ಶುಭ್‌ಮನ್‌ ಗಿಲ್‌ರ ಜೆರ್ಸಿ ಸಂಖ್ಯೆ 7. ಗ್ಯಾರಿ ಕಸ್ರ್ಟನ್‌, ಆಶಿಶ್‌ ನೆಹ್ರಾ ಸಂಭ್ರಮಿಸುವ ದೃಶ್ಯ ಕಂಡುಬಂತು. ಎದುರಾಳಿ ತಂಡದಲ್ಲಿ ಕುಮಾರ ಸಂಗಕ್ಕರ, ಲಸಿತ್‌ ಮಾಲಿಂಗ ಇದ್ದರು. 2011ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲೂ ಈ ರೀತಿಯ ಸನ್ನಿವೇಶವಿತ್ತು. ಎಂ.ಎಸ್‌.ಧೋನಿ ಸಿಕ್ಸರ್‌ನೊಂದಿಗೆ ಗೆಲುವಿನ ರನ್‌ ಬಾರಿಸಿದ್ದರು. ಅವರ ಜೆರ್ಸಿ ಸಂಖ್ಯೆ 7. ಭಾರತದ ಕೋಚ್‌ ಆಗಿದ್ದ ಕಸ್ರ್ಟನ್‌, ತಂಡದಲ್ಲಿದ್ದ ನೆಹ್ರಾ ಸಂಭ್ರಮಿಸಿದ್ದರು. ಭಾರತ ವಿರುದ್ಧ ಸೋತ ಲಂಕಾ ತಂಡದಲ್ಲಿ ಸಂಗಕ್ಕರ ಮತ್ತು ಮಾಲಿಂಗ ಇದ್ದರು.

ಟ್ರೋಫಿ ಗೆದ್ದ ಭಾರತದ ಮೊದಲ ಕೋಚ್‌ ನೆಹ್ರಾ!

ಗುಜರಾತ್‌ ಟೈಟಾನ್ಸ್‌ ಚಾಂಪಿಯನ್‌ ಆಗುವುದರೊಂದಿಗೆ ಆಶಿಶ್‌ ನೆಹ್ರಾ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ. ಐಪಿಎಲ್‌ ಟ್ರೋಫಿ ಗೆದ್ದ ಮೊದಲ ಭಾರತೀಯ ಪ್ರಧಾನ ಕೋಚ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 2008ರಲ್ಲಿ ರಾಜಸ್ಥಾನ ಗೆದ್ದಾಗ ಶೇನ್‌ ವಾರ್ನ್‌ ನಾಯಕ ಮತ್ತು ಕೋಚ್‌ ಆಗಿದ್ದರು. 2009ರಲ್ಲಿ ಡೆಕ್ಕನ್‌ ಚಾರ್ಜ​ರ್‍ಸ್ಗೆ ಆಸ್ಪ್ರೇಲಿಯಾದ ಡರೆನ್‌ ಲೀಮನ್‌, 2010, 2011, 2018, 2021ರಲ್ಲಿ ಚೆನ್ನೈಗೆ ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌, 2012, 2014ರಲ್ಲಿ ಕೆಕೆಆರ್‌ಗೆ ಆಸ್ಪ್ರೇಲಿಯಾದ ಟ್ರೆವರ್‌ ಬೇಯ್ಲಿಸ್‌, 2013ರಲ್ಲಿ ಮುಂಬೈಗೆ ನ್ಯೂಜಿಲೆಂಡ್‌ನ ಜಾನ್‌ ರೈಟ್‌, 2015ರಲ್ಲಿ ಆಸ್ಪ್ರೇಲಿಯಾದ ರಿಕಿ ಪಾಂಟಿಂಗ್‌, 2016ರಲ್ಲಿ ಸನ್‌ರೈಸ​ರ್ಸ್‌ಗೆ ಆಸ್ಪ್ರೇಲಿಯಾದ ಟಾಮ್‌ ಮೂಡಿ, 2017, 2019, 2020ರಲ್ಲಿ ಮುಂಬೈ ತಂಡ ಶ್ರೀಲಂಕಾದ ಮಹೇಲಾ ಜಯವರ್ಧನೆಯ ಮಾರ್ಗದರ್ಶನದಲ್ಲಿ ಚಾಂಪಿಯನ್‌ ಆಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?