
ಬಾಸ್ಟೆರೆ(ಆ.27): ಟಿ20 ಕ್ರಿಕೆಟ್ ಹೆಚ್ಚು ಜನಪ್ರಿಯವಾದಂತೆ, ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದೆ. ತಂತ್ರಜ್ಞಾನ ಬಳಕೆಯಿಂದ ಆಟದ ಆಯಾಮವು ಬದಲಾಗುತ್ತಿದೆ. ಸ್ಟಂಪ್ ಮೈಕ್, ಹೆಲ್ಮೆಟ್ ಕ್ಯಾಮೆರಾ, ಬೆಳಕಿನ ಸ್ಟಂಪ್ಸ್, ಡಿಆರ್‌ಎಸ್, ಹಾಕ್ ಐ ಹೀಗೆ ಹಲವು ತಂತ್ರಜ್ಞಾನಗಳು ಆಟವನ್ನು ಆಳವಾಗಿ ಅಧ್ಯಯನ ನಡೆಸಿ, ಸುಧಾರಣೆ ತರಲು ನೆರವಾಗಿವೆ. ಇದೀಗ ಮೊದಲ ಬಾರಿಗೆ ವೃತ್ತಿಪರ ಟಿ20 ಲೀಗ್‌ನಲ್ಲಿ ‘ಸ್ಮಾರ್ಟ್ ಬಾಲ್’ ಬಳಕೆ ಆಗುತ್ತಿದೆ. ಗುರುವಾರ(ಆ.26)ದಿಂದ ಅರಂಭಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಟಿ20 ಟೂರ್ನಿಯಲ್ಲಿ ಸ್ಮಾರ್ಟ್ ಬಾಲ್ ಉಪಯೋಗಿಸಲಾಗುತ್ತಿದೆ. ಇದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಏನಿದು ಸ್ಮಾರ್ಟ್ ಬಾಲ್?
ಆಸ್ಪ್ರೇಲಿಯಾದ ಕೂಕಾಬುರಾ ಕಂಪನಿಯ ಚೆಂಡಿನೊಳಗೆ ಎಲೆಕ್ಟ್ರಾನಿಕ್ ಚಿಪ್‌ವೊಂದನ್ನು ಇರಿಸಲಾಗಿರುತ್ತದೆ. ಇದರ ಸಹಾಯದಿಂದ ಬೌಲರ್ ಚೆಂಡನ್ನು ಎಸೆದಾಗ ಚೆಂಡು ಬೌನ್ಸ್ ಆಗುವ ಮೊದಲಿನ ವೇಗ, ಬೌನ್ಸ್ ಆದ ಮೇಲಿನ ವೇಗ, ಬೌಲರ್ ಬೌಲ್ ಮಾಡಲು ಎಷ್ಟು ಶ್ರಮ ಉಪಯೋಗಿಸುತ್ತಿದ್ದಾನೆ, ಸ್ಪಿನ್ನರ್ ಎಷ್ಟು ಡಿಗ್ರಿ ಚೆಂಡನ್ನು ತಿರುಗಿಸುತ್ತಿದ್ದಾನೆ, ಚೆಂಡು ಯಾವ ಆ್ಯಂಗಲ್‌ನಲ್ಲಿ ಸಂಚರಿಸುತ್ತಿದೆ ಸೇರಿ ಇನ್ನೂ ಅನೇಕ ದತ್ತಾಂಶಗಳನ್ನು ಮೊಬೈಲ್ ಆ್ಯಪ್ ಮೂಲಕ ತಂಡಗಳಿಗೆ ಲಭ್ಯವಾಗಲಿದೆ. ಈ ಚೆಂಡು ಸಾಮಾನ್ಯ ಚೆಂಡಿನಂತೆಯೇ ವರ್ತಿಸಲಿದ್ದು, ಗಂಟೆಗೆ 150 ಕಿ.ಮೀ. ವೇಗದಲ್ಲಿ ಬ್ಯಾಟ್‌ನಿಂದ ಹೊಡೆದರೂ ಒಡೆದು ಹೋಗುವುದಿಲ್ಲ ಎಂದು ಅಧ್ಯಯನದಿಂದ ತಿಳಿದುಬಂದಿದೆ.
Ind vs Eng ಲೀಡ್ಸ್ ಟೆಸ್ಟ್: ವೇಗಿ ಸಿರಾಜ್ ಮೇಲೆ ಬಾಲ್ ಎಸೆದ ಇಂಗ್ಲೆಂಡ್ ಪ್ರೇಕ್ಷಕರು!
ದತ್ತಾಂಶ ವರ್ಗಾವಣೆ ಹೇಗೆ?
ಚೆಂಡಿನೊಳಗಿರುವ ಚಿಪ್ ಅನ್ನು ಆ್ಯಪ್ ಮೂಲಕ ಸಕ್ರಿಯಗೊಳಿಸಬಹುದು. ಸೆನ್ಸರ್‌ಗಳು ದತ್ತಾಂಶ ಸಂಗ್ರಹಿಸಿ ಕ್ರೀಡಾಂಗಣದಲ್ಲಿ ಇರಿಸಲಾದ ಗೇಟ್‌ವೇ (ರೌಟರ್)ಗೆ ಬ್ಲೂಟೂಥ್ ಮೂಲಕ ರವಾನಿಸುತ್ತವೆ. ಬಳಿಕ ಆರ್ಟಿಫಿಷಿಯಲ್ ಇಂಟಿಲಿಜೆನ್ಸ್(ಎಐ) ಸಹಾಯದಿಂದ ದತ್ತಾಂಶದ ವಿಶ್ಲೇಷಣೆ ನಡೆಸಲಾಗುತ್ತದೆ. ಈ ಇಷ್ಟೂ ಪ್ರಕ್ರಿಯೆ ಪೂರ್ಣಗೊಳ್ಳಲು ಗರಿಷ್ಠ 5 ಸೆಕೆಂಡ್ ಆಗಲಿದೆ. 150-200 ಮೀ. ದೂರಕ್ಕೆ ಬ್ಲೂಟೂಥ್ ಕೆಲಸ ಮಾಡಲಿದೆ. ಸದ್ಯ ಉಪಯೋಗಿಸುತ್ತಿರುವ ಚೆಂಡುಗಳಲ್ಲಿ ರೀಚಾರ್ಜ್ ಮಾಡಲಾಗದ ಬ್ಯಾಟರಿಗಳನ್ನು ಬಳಸಲಾಗಿದ್ದು, 30 ಗಂಟೆಗಳ ಉಪಯೋಗಿಸಬಹುದಾಗಿದೆ. ಕೂಕಾಬುರಾ ಸಂಸ್ಥೆಯೂ ಚಾರ್ಜ್ ಮಾಡಬಲ್ಲ ಬ್ಯಾಟರಿಗಳನ್ನು ಹೊಂದಿರುವ ಚೆಂಡುಗಳನ್ನೂ ಸಿದ್ಧಪಡಿಸುತ್ತಿದೆ. ಅವುಗಳನ್ನು ಸ್ಮಾರ್ಟ್ ವಾಚ್, ಏರ್‌ಪಾಡ್ ರೀತಿ ಚಾರ್ಜ್ ಮಾಡಬಹುದಾಗಿದೆ.
ಉಪಯೋಗವೇನು?
ಬೌಲ್ ಮಾಡುವ ವೇಗ, ಬಳಸುವ ಶ್ರಮ, ಆ್ಯಂಗಲ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಈ ದತ್ತಾಂಶಗಳನ್ನು ಬಳಸಿ ಬೌಲರ್‌ಗಳ ಪ್ರದರ್ಶನ ಗುಣಮಟ್ಟವನ್ನು ಹೆಚ್ಚಿಸಲು ಕೋಚ್‌ಗಳಿಗೆ ಅನುಕೂಲವಾಗಲಿದೆ. ಕೆಲ ಪ್ರಮುಖ ಗಾಯದ ಸಮಸ್ಯೆಗಳನ್ನೂ ತಪ್ಪಿಸಲು ನೆರವಾಗಲಿದೆ.
ಪ್ರತಿ ಚೆಂಡಿಗೆ 7000-.8000?
ಕೂಕಾಬುರಾ ಸಂಸ್ಥೆಯೂ ಸ್ಮಾರ್ಟ್ ಚೆಂಡುಗಳನ್ನು ಇನ್ನೂ ಮಾರುಕಟ್ಟೆಗೆ ಬಿಟ್ಟಿಲ್ಲ. ಕೇವಲ ಒಪ್ಪಂದ ಮಾಡಿಕೊಂಡ ಲೀಗ್‌ಗಳಿಗಷ್ಟೇ ಚೆಂಡನ್ನು ಸರಬರಾಜು ಮಾಡುತ್ತಿದೆ. ಆದರೆ ಕೂಕಾಬುರಾ ಸ್ಮಾರ್ಟ್ ಚೆಂಡನ್ನು ತಯಾರಿಸಿದ ಮೊದಲ ಸಂಸ್ಥೆ ಏನಲ್ಲ. ಬೆಂಗಳೂರು ಮೂಲದ ಸ್ಟಾರ್ಟ್ ಅಪ್‌ವೊಂದು 2018ರಲ್ಲೇ ಸ್ಮಾರ್ಟ್ ಬಾಲ್ ಅನ್ನು ಪರಿಚಯಿಸಿತ್ತು. ಇನ್ನೂ ಕೆಲ ಸಂಸ್ಥೆಗಳು ಎಲೆಕ್ಟ್ರಾನಿಕ್ ಚಿಪ್‌ವುಳ್ಳ ಕ್ರಿಕೆಟ್ ಚೆಂಡನ್ನು ಸಿದ್ಧಪಡಿಸಿವೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಒಂದು ಚೆಂಡಿಗೆ 7000ದಿಂದ 8000 ರು. ಆಗಲಿದೆ. ಸ್ಮಾರ್ಟ್ ಬಾಲ್ ಹೆಚ್ಚು ಟಿ20 ಲೀಗ್‌ಗಳಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಳಕೆಯಾಗಲು ಶುರುವಾದ ಮೇಲೆ ನಿರ್ದಿಷ್ಟ ದರ ನಿಗದಿಯಾಗಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.