ಪ್ರತಿ IPL ತಂಡದಲ್ಲೂ ರಶೀದ್ ಖಾನ್ ಥರದವರಿರಬೇಕು, ಮುಂಬೈ ಇಂಡಿಯನ್ಸ್ ಈ 2 ಆಟಗಾರರ ಮೇಲೆ ಕಣ್ಣಿಟ್ಟಿದೆ: ಮಂಜ್ರೇಕರ್

By Naveen KodaseFirst Published Dec 21, 2022, 3:36 PM IST
Highlights

ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭ
ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜು
ಮುಂಬೈ ಇಂಡಿಯನ್ಸ್ ಎರಡು ಸ್ಪಿನ್ನರ್ ಮೇಲೆ ಕಣ್ಣಿಟ್ಟಿದೆ ಎಂದ ಸಂಜಯ್ ಮಂಜ್ರೇಕರ್

ಮುಂಬೈ(ಡಿ.21): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕ್ರಿಕೆಟ್ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡವು ಕಳೆದ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಿಂದಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಮಿನಿ ಹರಾಜಿಗೂ ಮುನ್ನ 13 ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದು, ಇದೀಗ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿಸುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

2022ರ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು, ಟೂರ್ನಿಯುದ್ದಕ್ಕೂ ನೀರಸ ಪ್ರದರ್ಶನ ತೋರುವ ಮೂಲಕ 10 ತಂಡಗಳನ್ನೊಳಗೊಂಡ ಟೂರ್ನಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆಡಿದ 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದರೇ ಇನ್ನುಳಿದ 10 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮಿನಿ ಹರಾಜಿಗೂ ಮುನ್ನ 13 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಈ ಬಾರಿಯ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಲೆಗ್‌ಸ್ಪಿನ್ನರ್‌ಗಳಾದ ಆಡಂ ಜಂಪಾ ಅಥವಾ ಆದಿಲ್ ರಶೀದ್ ಅವರ ಮೇಲೆ ಕಣ್ಣಿಟ್ಟಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. " ಎಲ್ಲಾ ಐಪಿಎಲ್ ತಂಡಗಳು ರಶೀದ್ ಖಾನ್ ಅವರಂತಹ ಆಟಗಾರನ್ನು ಹೊಂದಲು ಬಯಸುತ್ತವೆ. ಅವರೆಲ್ಲರೂ ರಶೀದ್ ಖಾನ್ ಅಥವಾ ಸುನಿಲ್ ನರೈನ್ ಅವರಂತಹ ಆಟಗಾರರನ್ನು ಹುಡುಕುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ವೇಗದ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿ ಆಡಂ ಜಂಪಾ ಇಲ್ಲವೇ ಆದಿಲ್ ರಶೀದ್ ಅವರಂತಹ ಆಟಗಾರರನ್ನು ಖರೀದಿಸಲು ಮುಂದಾಗುವ ಸಾಧ್ಯತೆಯಿದೆ" ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತ, 15 ರನ್‌ಗೆ ಸಿಡ್ನಿ ಥಂಡರ್ ಆಲೌಟ್!

2023ರ ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಆಟಗಾರರ ಪಟ್ಟಿಯನ್ನು ಮಂಗಳವಾರ ಐಪಿಎಲ್‌ ಆಡಳಿತ ಮಂಡಳಿ ಪ್ರಕಟಿಸಿದ್ದು, 405 ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಭಾರತ 273 ಆಟಗಾರರ ಜೊತೆ 132 ವಿದೇಶಿ ಆಟಗಾರರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 119 ಅಂತಾರಾಷ್ಟ್ರೀಯ ಆಟಗಾರರು, 282 ಅನ್‌ಕ್ಯಾಪ್ಡ್‌ ಆಟಗಾರರು ಪಟ್ಟಿಯಲ್ಲಿದ್ದಾರೆ. ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಹ್ಯಾರಿ ಬ್ರೂಕ್‌, ಆಸ್ಪ್ರೇಲಿಯಾದ ಕ್ಯಾಮರೋನ್‌ ಗ್ರೀನ್‌ ಸೇರಿದಂತೆ ಪ್ರಮುಖ ಆಟಗಾರರ ಬಂಪರ್‌ ನಿರೀಕ್ಷೆಯಲ್ಲಿದ್ದಾರೆ.

click me!