ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ
ಪ್ರಶಸ್ತಿಗಾಗಿ ಪಾಕಿಸ್ತಾನ-ಇಂಗ್ಲೆಂಡ್ ನಡುವೆ ಕಾದಾಟ
ಮೆಲ್ಬೊರ್ನ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ
ಮೆಲ್ಬರ್ನ್(ನ.13): ವಿಶ್ವ ಟಿ20ಗೆ ಹೊಸ ಬಾಸ್ ಯಾರು ಎನ್ನುವುದು ಭಾನುವಾರ ನಿರ್ಧಾರವಾಗಲಿದೆ. ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದ್ದು, 2ನೇ ಬಾರಿಗೆ ಪ್ರಶಸ್ತಿ ಜಯಿಸಲು ಎದುರು ನೋಡುತ್ತಿವೆ. ಪಾಕಿಸ್ತಾನ 2009ರಲ್ಲಿ ಚಾಂಪಿಯನ್ ಆಗಿತ್ತು. ಇಂಗ್ಲೆಂಡ್ 2010ರಲ್ಲಿ ಟ್ರೋಫಿ ಜಯಿಸಿತ್ತು. ಎರಡೂ ತಂಡಗಳು ಈ ಸಲ ಆರಂಭದಲ್ಲಿ ತಿಣುಕಾಡಿ, ಇನ್ನೂ ಕ್ರಿಕೆಟ್ ಶಿಶುಗಳು ಎಂದೇ ಕರೆಸಿಕೊಳ್ಳುತ್ತಿರುವ ತಂಡಗಳ ವಿರುದ್ಧ ಸೋತರೂ ಪುಟಿದೆದ್ದು ಫೈನಲ್ ಪ್ರವೇಶಿಸಿದ ರೀತಿ ಸ್ಫೂರ್ತಿದಾಯಕ.
ಪಾಕಿಸ್ತಾನ ಸತತ 2 ಸೋಲುಗಳೊಂದಿಗೆ ಟೂರ್ನಿಯನ್ನು ಆರಂಭಿಸಿತು. ಭಾರತ, ಜಿಂಬಾಬ್ವೆ ವಿರುದ್ಧ ಸೋತು ಹೊರಬೀಳುವ ಆತಂಕದಲ್ಲಿದ್ದ ಪಾಕಿಸ್ತಾನ, ಆ ನಂತರ ಸತತ 3 ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಸೆಮೀಸ್‌ನಲ್ಲಿ ನ್ಯೂಜಿಲೆಂಡ್‌ಗೆ ಸೋಲುಣಿಸಿ ಪ್ರಶಸ್ತಿ ಸುತ್ತಿಗೇರಿತು.
undefined
ಮತ್ತೊಂದೆಡೆ ಇಂಗ್ಲೆಂಡ್, ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತು. ಆಸ್ಪ್ರೇಲಿಯಾ ವಿರುದ್ಧದ ಪಂದ್ಯ ಒಂದೂ ಎಸೆತ ಕಾಣದೆ ಮಳೆಗೆ ಬಲಿಯಾದಾಗ ಇಂಗ್ಲೆಂಡ್ ಸೆಮಿಫೈನಲ್‌ಗೇರುವ ಸಾಧ್ಯತೆ ಕ್ಷೀಣಿಸಿತ್ತು. ಆದರೆ ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯಗಳಲ್ಲಿ ಗೆಲ್ಲುವುದರ ಜೊತೆಗೆ ನೆಟ್ ರನ್‌ರೇಟ್ ಗುದ್ದಾಟದಲ್ಲಿ ಆಸ್ಪ್ರೇಲಿಯಾವನ್ನು ಹಿಂದಿಕ್ಕಿದ ಇಂಗ್ಲೆಂಡ್, ಸೆಮೀಸ್‌ನಲ್ಲಿ ಭಾರತವನ್ನು ಬಗ್ಗುಬಡಿಯಿತು.
ಇಂಗ್ಲೆಂಡ್ ಫೇವರಿಟ್?: ಮೇಲ್ನೋಟಕ್ಕೆ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದೆ. ತಂಡಕ್ಕೆ ಪ್ರಚಂಡ ಬ್ಯಾಟರ್‌ಗಳಾದ ಬಟ್ಲರ್, ಹೇಲ್ಸ್, ಸ್ಟೋಕ್ಸ್, ಸಾಲ್ಟ್, ಬ್ರೂಕ್, ಲಿವಿಂಗ್‌ಸ್ಟೋನ್, ಮೋಯಿನ್ ಅಲಿ ಬಲವಿದೆ. ಆದರೆ ತಂಡದ ಮಧ್ಯಮ ಕ್ರಮಾಂಕ ಟೂರ್ನಿಯಲ್ಲಿ ಇನ್ನೂ ಪರೀಕ್ಷೆಗೆ ಒಳಗಾಗಿಲ್ಲ. ಮಧ್ಯಮ ಕ್ರಮಾಂಕದ ಯಾವ ಬ್ಯಾಟರ್ ಸಹ ಟೂರ್ನಿಯಲ್ಲಿ ಒಂದಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿಲ್ಲ.
ಅಚ್ಚರಿ ಎನಿಸಿದರೂ ಸತ್ಯ, 1992ರ ವಿಶ್ವಕಪ್‌ಗೂ 2022ರ ವಿಶ್ವಕಪ್‌ಗೂ ಇದೆ 5 ಕುತೂಹಲಕಾರಿ ಹೋಲಿಕೆ..!
ಇನ್ನು, ಸ್ಯಾಮ್ ಕರ್ರನ್ ಡೆತ್ ಓವರ್‌ಗಳಲ್ಲಿ ತಂಡದ ಕೈಹಿಡಿಯುತ್ತಿದ್ದಾರೆ. ಮಾರ್ಕ್ ವುಡ್ ಗಾಯದಿಂದ ಚೇತರಿಸಿಕೊಂಡಿದ್ದು, ಫೈನಲ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚು. ಭಾರತ ವಿರುದ್ಧ ಆಡಿದ್ದ ಜೋರ್ಡನ್‌ರನ್ನು ಕೈಬಿಟ್ಟು, ಎಂಸಿಜಿ ಸ್ವಿಂಗ್ ಬೌಲಿಂಗ್‌ಗೆ ಸಹಕರಿಸುವ ಕಾರಣ ಎಡಗೈ ವೇಗಿ ಡೇವಿಡ್ ವಿಲ್ಲಿ ಕಣಕ್ಕಿಳಿಯಬಹುದು. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಮತ್ತೊಮ್ಮೆ ನಿರ್ಣಾಯಕ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ.
ಹ್ಯಾರಿಸ್ ಟ್ರಂಪ್‌ಕಾರ್ಡ್?: 6 ವಾರಗಳ ಹಿಂದಷ್ಟೇ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡು 7 ಟಿ20 ಪಂದ್ಯಗಳ ಸರಣಿಯನ್ನು ಆಡಿತ್ತು. ಹೀಗಾಗಿ ಪಾಕಿಸ್ತಾನದ ಬಲಾಬಲದ ಬಗ್ಗೆ ಇಂಗ್ಲೆಂಡ್‌ಗೆ ಅರಿವಿದೆ. ಆದರೆ ಆ ಸರಣಿಯಲ್ಲಿ ಹೆಚ್ಚು ಬ್ಯಾಟ್ ಮಾಡದ ಮೊಹಮದ್ ಹ್ಯಾರಿಸ್, ಈ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸವಾಲೆಸೆಯಬಹುದು. 3ನೇ ಕ್ರಮಾಂಕದಲ್ಲಿ 162ರ ಸ್ಟ್ರೈಕ್‌ರೇಟ್‌ನೊಂದಿಗೆ 89 ರನ್ ಚಚ್ಚಿದ್ದಾರೆ. ಆರಂಭಿಕರಾದ ಬಾಬರ್ ಆಜಂ ಹಾಗೂ ಮೊಹಮದ್ ರಿಜ್ವಾನ್ ಬೇಗನೆ ಔಟಾದರೆ ಇನ್ನಿಂಗ್‌್ಸ ಕಟ್ಟುವ ಹೊಣೆ ಹ್ಯಾರಿಸ್ ಹೆಗಲಿಗೆ ಬೀಳಲಿದೆ.
ಪಾಕಿಸ್ತಾನದ ಅಸಲಿ ತಾಕತ್ತು ಇರುವುದು ಬೌಲಿಂಗ್‌ನಲ್ಲಿ. ಶಾಹೀನ್ ಅಫ್ರಿದಿ ಲಯಕ್ಕೆ ಮರಳಿದ್ದಾರೆ. ಮೊದಲ 3 ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಕಿತ್ತಿದ್ದ ಎಡಗೈ ವೇಗಿ ಕೊನೆ 3 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದಾರೆ. ಪವರ್-ಪ್ಲೇನಲ್ಲಿ ಶಾಹೀನ್ ಇಂಗ್ಲೆಂಡ್ ತಂಡವನ್ನು ನಡುಗಿಸಿದರೆ ಅರ್ಧ ಗೆದ್ದಂತೆ. ಹ್ಯಾರಿಸ್ ರೌಫ್, ನಸೀಂ ಶಾ, ಮೊಹಮದ್ ವಾಸೀಂ ವೇಗದ ಬೌಲಿಂಗ್ ಪಡೆಯಲ್ಲಿ ಇರಲಿದ್ದು, ಶದಾಬ್ ಖಾನ್‌ರ ಸ್ಪಿನ್ ಬೌಲಿಂಗ್ ಪಾಕಿಸ್ತಾನಕ್ಕೆ ಲಾಭವಾಗಬಹುದು.
ಮೆಲ್ಬರ್ನ್‌ನಲ್ಲಿ ನಿಲ್ಲದ ಮಳೆ
ಶನಿವಾರದಿಂದಲೇ ಮೆಲ್ಬರ್ನ್‌ನಲ್ಲಿ ಮಳೆ ಸುರಿಯುತ್ತಿದ್ದು, ಕ್ರೀಡಾಂಗಣದ ಔಟ್‌ಫೀಲ್ಡ್ ಒದ್ದೆಯಾಗಿತ್ತು. ಪಿಚ್‌ಗೆ ಹೊದಿಕೆ ಹೊದಿಸಲಾಗಿತ್ತಾದರೂ ತೇವಾಂಶ ಹೆಚ್ಚಿದೆ ಎಂದು ವರದಿಯಾಗಿದೆ. ಭಾನುವಾರ ಇಡೀ ದಿನ ಭಾರೀ ಮಳೆ ಮುನ್ಸೂಚನೆ ಇದ್ದು, ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾಗಬಹುದು. ಸೋಮವಾರವೂ ಮಳೆ ಮುನ್ಸೂಚನೆ ಇದ್ದು, ಪಂದ್ಯ ಪೂರ್ಣಗೊಳಿಸಲು ಸಾಧ್ಯವಾಗದೆ ಹೋದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಸಂಭವನೀಯ ಆಟಗಾರರ ಪಟ್ಟಿ
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಡೇವಿಡ್ ಮಲಾನ್/ ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್/ಕ್ರಿಸ್ ಜೋರ್ಡನ್, ಆದಿಲ್ ರಶೀದ್.
ಪಾಕಿಸ್ತಾನ: ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕಾರ್ ಅಹಮದ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ವಾಸೀಂ, ನಸೀಂ ಶಾ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್