ಆಂಗ್ಲೋ-ಪಾಕ್ ಮೂರನೇ ಟೆಸ್ಟ್‌ ಕೂಡಾ ಡ್ರಾನಲ್ಲಿ ಅಂತ್ಯ, ಸರಣಿ ಇಂಗ್ಲೆಂಡ್ ಕೈವಶ

By Suvarna NewsFirst Published Aug 26, 2020, 9:48 AM IST
Highlights

ಇಂಗ್ಲೆಂಡ್- ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇದರೊಂದಿಗೆ 1-0 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

ಸೌಥಾಂಪ್ಟನ್(ಆ.26): ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಇಂಗ್ಲೆಂಡ್ ತಂಡವು 1-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಹೌದು, ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡ ಜಾಕ್ ಕ್ರಾವ್ಲಿ(267) ಆಕರ್ಷಕ ದ್ವಿಶತಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಸಮಯೋಚಿತ(152) ಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 583 ರನ್‌ ಬಾರಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಶಾಹಿನ್ ಅಫ್ರಿದಿ, ಯಾಸಿರ್ ಶಾ ಹಾಗೂ ಫವಾದ್ ಆಲಂ ತಲಾ 2 ವಿಕೆಟ್ ಪಡೆದರೆ, ಶಫೀಕ್ ಮತ್ತು ನಸೀಮ್ ಶಾ ಒಂದೊಂದು ವಿಕೆಟ್ ಕಬಳಿಸಿದರು.

ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ ತಂಡ ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಅಜರ್ ಅಲಿ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ ಕೆಲಕಾಲ ಪ್ರತಿರೋಧ ತೋರಿದರು. ನಾಯಕ ಅಜರ್ ಅಲಿ ಅಜೇಯ 141 ರನ್ ಬಾರಿಸಿದರೆ, ರಿಜ್ವಾನ್ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಪಾಕಿಸ್ತಾನ ತಂಡವು 273 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಪ್ರವಾಸಿ ತಂಡದ ಮೇಲೆ ಇಂಗ್ಲೆಂಡ್ ಫಾಲೋ ಆನ್ ಹೇರಿತು.

ಇಂಗ್ಲೆಂಡ್ ಪರ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್ 5 ವಿಕೆಟ್ ಪಡೆದರೆ, ಕ್ರಿಸ್ ಬ್ರಾಡ್ 2 ಹಾಗೂ ಕ್ರಿಸ್ ವೋಕ್ಸ್ ಮತ್ತು ಡಾಮ್ ಬಿಸ್ ತಲಾ ಒಂದೊಂದು ವಿಕೆಟ್ ಪಡೆದರು.  ಆತಿಥೇಯ ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಆದರೆ ಮಳೆಯ ಅಡಚಣೆ ಹಾಗೂ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ಟೆಸ್ಟ್‌ನಲ್ಲಿ 600 ವಿಕೆಟ್‌ ಕಿತ್ತು ದಾಖಲೆ ಬರೆದ ಆ್ಯಂಡರ್‌ಸನ್‌

ಇನ್ನು ವೇಗಿ ಆ್ಯಂಡರ್‌ಸನ್ ಈ ಪಂದ್ಯದಲ್ಲಿ 7 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 600 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ವೇಗದ ಬೌಲರ್ ಎನ್ನುವ ದಾಖಲೆಯನ್ನು ನಿರ್ಮಿಸಿದರು. 

ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ 3 ವಿಕೆಟ್‌ಗಳಿಂದ ಜಯಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಆ ಬಳಿಕ ಸೌಥಾಂಪ್ಟನ್‌ನಲ್ಲಿ ನಡೆದ ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

click me!