T20 World Cup: ಸ್ಟೋಕ್ಸ್‌, ಅರ್ಚರ್ ಇಲ್ಲದೆಯೂ ಇಂಗ್ಲೆಂಡ್ ಕಪ್‌ ಗೆಲ್ಲಲಿದೆ ಎಂದ ಬಟ್ಲರ್

By Suvarna NewsFirst Published Oct 4, 2021, 5:51 PM IST
Highlights

* ಇಂಗ್ಲೆಂಡ್ ಟಿ20 ವಿಶ್ವಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡವೆಂದ ಬಟ್ಲರ್

* 2016ರ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಇಂಗ್ಲೆಂಡ್

* ಇಂಗ್ಲೆಂಡ್ ತಂಡದಿಂದ ಹೊರಗುಳಿದಿರುವ ಜೋಫ್ರಾ ಆರ್ಚರ್‌, ಬೆನ್ ಸ್ಟೋಕ್ಸ್‌

ಲಂಡನ್‌(ಅ.04): ಮುಂಬರುವ ಐಸಿಸಿ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಮಾರಕ ವೇಗಿ ಜೋಪ್ರಾ ಆರ್ಚರ್ ಹಾಗೂ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ಅನುಪಸ್ಥಿತಿಯ ಹೊರತಾಗಿಯೂ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ (England Cricket Team) ಚಾಂಪಿಯನ್‌ ಆಗುವ ಸಾಮರ್ಥ್ಯವಿದೆ ಎಂದು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ (Jos Buttler) ಹೇಳಿದ್ದಾರೆ.

ಮಾನಸಿಕ ಆರೋಗ್ಯದ ದೃಷ್ಠಿಯಿಂದ ಬೆನ್‌ ಸ್ಟೋಕ್ಸ್‌ (Ben Stokes) ಕ್ರಿಕೆಟ್‌ನಿಂದ ದೀರ್ಘಕಾಲಿಕ ಬಿಡುವು ಪಡೆದುಕೊಂಡಿದ್ದಾರೆ. ಹೀಗಾಗಿ ಸ್ಟೋಕ್ಸ್‌ ಇಂಗ್ಲೆಂಡ್‌ ಪ್ರಕಟಿಸಿದ 15 ಆಟಗಾರರ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇನ್ನು ಬಲಗೈ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವೇಗಿ ಜೋಫ್ರಾ ಆರ್ಚರ್ (Jos Archer) ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ ಆರ್ಚರ್‌ ಕೂಡಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಈ ಇಬ್ಬರು ಆಟಗಾರರ ಬದಲಿಗೆ ಲಿಯಾಮ್‌ ಲಿವಿಂಗ್‌ ಸ್ಟೋನ್‌ ಹಾಗೂ ಟೈಮಲ್‌ ಮಿಲ್ಸ್‌ ಇಂಗ್ಲೆಂಡ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ನಮ್ಮದು ಅದ್ಭುತ ತಂಡವಾಗಿದ್ದು, ಖಂಡಿತವಾಗಿಯೂ ನಾವು ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು. ಹೌದು, ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್ ಈ ಇಬ್ಬರು ಸೂಪರ್ ಸ್ಟಾರ್ ಆಟಗಾರರನ್ನು ನಾವು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ತಂಡವನ್ನು ಗಮನಿಸಿದರೆ ಸಾಕಷ್ಟು ಮಂದಿ ಆಟಗಾರರು ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಜೋಸ್‌ ಬಟ್ಲರ್ ಹೇಳಿದ್ದಾರೆ.

T20 World Cup ಟೂರ್ನಿ ಆರಂಭಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ICC

ಲಿಯಾಮ್‌ ಲಿವಿಂಗ್‌ಸ್ಟೋನ್‌ ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ದದ ಟಿ20 ಸರಣಿ ಹಾಗೂ ದಿ ಹಂಡ್ರೆಡ್‌ (The Hundred) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದು, ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆತ್ಮವಿಶ್ವಾಸದಿಂದ ಸಜ್ಜಾಗಿದ್ದಾರೆ. ಇನ್ನು ಟೈಮಲ್‌ ಮಿಲ್ಸ್‌ ಅದ್ಭುತವಾಗಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಎಡಗೈ ಆಂಗಲ್‌ನಲ್ಲಿ ಸೂಕ್ತ ಏರಿಳಿತದೊಂದಿಗೆ ಬೌಲಿಂಗ್ ಮಾಡುತ್ತಿದ್ದು, ಎದುರಾಳಿ ತಂಡವನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಬಟ್ಲರ್ ಹೇಳಿದ್ದಾರೆ. 

2016ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಕೋಲ್ಕತದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ವೆಸ್ಟ್ ಇಂಡೀಸ್ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

ಇನ್ನು 2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಯಾನ್‌ ಮಾರ್ಗನ್ (Eoin Morgan) ನೇತೃತ್ವದ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು. ಇದೀಗ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಲು ಎದುರು ನೋಡುತ್ತಿದೆ. ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡವು ಅಕ್ಟೋಬರ್ 23ರಂದು ದುಬೈನಲ್ಲಿ ವೆಸ್ಟ್ ಇಂಡೀಸ್‌ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಅಕ್ಟೋಬರ್ 17ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿವೆ. ಅರ್ಹತಾ ಸುತ್ತಿನಲ್ಲಿ 8 ತಂಡಗಳು 2 ಗುಂಪಿನಲ್ಲಿ ಸ್ಪರ್ಧಿಸಲಿದ್ದು, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಲಿವೆ. ಇನ್ನು ಅರ್ಹತಾ ಸುತ್ತಿನ ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಗಳಿಸುವ ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿವೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23 ರಿಂದ ಆರಂಭವಾಗಲಿವೆ. 

click me!