
ಕೊಯಮತ್ತೂರು(ಸೆ.25): 2022ನೇ ಸಾಲಿನ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಕೊನೆಯ ದಿನ ಅನಿರೀಕ್ಷಿತ ಘಟನೆಯೊಂದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾದರು. ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯಗಳು ಮುಖಾಮುಖಿಯಾಗಿದ್ದವು. ಕೊನೆಯ ದಿನದಾಟದ ವೇಳೆ ಅಶಿಸ್ತು ತೋರಿದ ಪಶ್ಚಿಮ ವಲಯದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ನಾಯಕ ಶಿಸ್ತಿನ ಪಾಠ ಹೇಳಿ ಕೆಲ ಸಮಯದ ವರೆಗೆ ಅವರನ್ನು ಪೆವಿಲಿಯನ್‌ಗೆ ಕಳಿಸಿದ ಅಪರೂಪದ ಘಟನೆ ನಡೆದಿದೆ.
ಹೌದು, ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ ತಂಡಗಳ ನಡುವಿನ ದುಲೀಪ್ ಟ್ರೋಫಿ ಫೈನಲ್ ಪಂದ್ಯಕ್ಕೆ ಇಲ್ಲಿನ ಎಸ್‌ಎನ್‌ಆರ್ ಕಾಲೇಜು ಕ್ರಿಕೆಟ್ ಗ್ರೌಂಡ್ ಸಾಕ್ಷಿಯಾಗಿತ್ತು. ನಾಲ್ಕನೇ ದಿನದಾಟದಂತ್ಯಕ್ಕೆ ದಕ್ಷಿಣ ವಲಯ ತಂಡವು 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿದ್ದ ದಕ್ಷಿಣ ವಲಯ ತಂಡವು ಐದನೇ ದಿನ ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆಹೋಗಿ ಸೋಲಿನಿಂದ ಪಾರಾಗಲು ಯತ್ನಿಸುತ್ತಿತ್ತು. ಹೈದರಾಬಾದ್ ಮೂಲದ ಆಲ್ರೌಂಡರ್ ಟಿ ರವಿ ತೇಜ ಹಾಗೂ ಸಾಯಿ ಕಿಶೋರ್, ಐದನೇ ದಿನದಾಟದ ಆರಂಭದಲ್ಲಿ ನೆಲಕಚ್ಚಿ ಆಡುವ ಮೂಲಕ ಪಶ್ಚಿಮ ವಲಯದ ಬೌಲರ್‌ಗಳನ್ನು ಕಾಡಿದರು. ಆರ್ ಸಾಯಿ ಕಿಶೋರ್ 82 ಎಸೆತಗಳನ್ನು ಎದುರಿಸಿ ಕೇವಲ 7 ರನ್ ಗಳಿಸಿದರೆ, ಟಿ ರವಿ ತೇಜ 97 ಎಸೆತಗಳನ್ನು ಎದುರಿಸಿ 53 ರನ್ ಗಳಿಸಿದರು.
ರವಿ ತೇಜ ಬ್ಯಾಟಿಂಗ್ ಮಾಡುತ್ತಿದ್ದಾಗ, ಫೀಲ್ಡಿಂಗ್ ಮಾಡುತ್ತಿದ್ದ 20 ವರ್ಷದ ಯಶಸ್ವಿ ಜೈಸ್ವಾಲ್ ಪದೇ ಪದೇ ಕಿರಿಕಿರಿಯನ್ನುಂಟು ಮಾಡುತ್ತಿದ್ದರು. ಇನಿಂಗ್ಸ್‌ನ 50ನೇ ಓವರ್‌ನಲ್ಲಿ ರವಿ ತೇಜ ಹಾಗೂ ಯಶಸ್ವಿ ಜೈಸ್ವಾಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಕ್ಕೂ ಮೊದಲೇ ಆನ್ ಫೀಲ್ಡ್ ಅಂಪೈರ್, ಯಶಸ್ವಿ ಜೈಸ್ವಾಲ್‌ಗೆ ಎಚ್ಚರಿಕೆ ನೀಡಿದ್ದರು. ಹೀಗಿದ್ದೂ ಪದೇ ಪದೇ ರವಿ ತೇಜ ಅವರನ್ನು ಕೆಣಕುತ್ತಿದ್ದ ಯಶಸ್ವಿ ಜೈಸ್ವಾಲ್ ಬಳಿ ತೆರಳಿದ ಅಜಿಂಕ್ಯ ರಹಾನೆ, ಕೆಲ ಸಮಯದ ಮಟ್ಟಿಗೆ ಮೈದಾನದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಬಳಿಕ ಗೊಣಗುತ್ತಲೇ ಯಶಸ್ವಿ ಜೈಸ್ವಾಲ್ ಮೈದಾನ ತೊರೆದರು.
ಇದಾದ ಬಳಿಕ ಇನಿಂಗ್ಸ್‌ನ 65ನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಅಜಿಂಕ್ಯ ರಹಾನೆ ಮೈದಾನದೊಳಗೆ ಕರೆಸಿಕೊಂಡರು. ಯಶಸ್ವಿ ಜೈಸ್ವಾಲ್‌ಗೆ ಶಿಸ್ತಿನ ಪಾಠ ಮಾಡಿದ ಅಜಿಂಕ್ಯ ರಹಾನೆಯವರ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
Duleep Trophy: ದಕ್ಷಿಣ ವಲಯ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪಶ್ಚಿಮ ವಲಯ
ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಸ್ಪೋಟಕ ದ್ವಿಶತಕ ಚಚ್ಚಿದ ಯಶಸ್ವಿ ಜೈಸ್ವಾಲ್: ಇನ್ನು ಮುಂಬೈ ಮೂಲದ ಪ್ರತಿಭಾನ್ವಿತ ಎಡಗೈ ಬ್ಯಾಟರ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಆಕರ್ಷಕ ದ್ವಿಶತಕ ಚಚ್ಚುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 57 ರನ್‌ಗಳ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯಕ್ಕೆ ಯಶಸ್ವಿ ಆಸರೆಯಾದರು. ಯಶಸ್ವಿ ಜೈಸ್ವಾಲ್ 323 ಎಸೆತಗಳನ್ನು ಎದುರಿಸಿ 30 ಬೌಂಡರಿ, 4 ಸಿಕ್ಸರ್ ಸಹಿತ 265 ರನ್ ಬಾರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.