ಐಪಿಎಲ್ ಮಿನಿ ಹರಾಜಿಗೂ ಮುನ್ನ ಶತಕ ಸಿಡಿಸಿ ಅಬ್ಬರಿಸಿದ ದೇವದತ್ ಪಡಿಕ್ಕಲ್‌; ಕರ್ನಾಟಕಕ್ಕೆ ಶರಣಾದ ತಮಿಳುನಾಡು

Published : Dec 02, 2025, 03:59 PM IST
Devdutt Padikkal

ಸಾರಾಂಶ

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ, ಕನ್ನಡಿಗ ದೇವದತ್ ಪಡಿಕ್ಕಲ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಅವರ ಅಜೇಯ 102 ರನ್‌ಗಳ ನೆರವಿನಿಂದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ 146 ರನ್‌ಗಳ ಭರ್ಜರಿ ಜಯ ಸಾಧಿಸಿತು.  

ಅಹಮದಾಬಾದ್: ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕನ್ನಡಿಗ ದೇವದತ್ ಪಡಿಕ್ಕಲ್ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಆರ್‌ಸಿಬಿ ತಂಡದಿಂದ ರಿಲೀಸ್ ಆಗಿರುವ ಪಡಿಕ್ಕಲ್, ಮಿನಿ ಹರಾಜಿಗೂ ಮುನ್ನ ಸ್ಪೋಟಕ ಶತಕ ಸಿಡಿಸುವ ಮೂಲಕ ಮೂಲಕ ಎಲ್ಲಾ ಫ್ರಾಂಚೈಸಿಗಳಿಗೂ ತಾನೆಂತಹ ಅಪಾಯಕಾರಿ ಬ್ಯಾಟರ್ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ತಮಿಳುನಾಡು ಬಗ್ಗುಬಡಿದ ಕರ್ನಾಟಕ

ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ 146 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್‌ನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ಸ್ಪೋಟಕ ಬ್ಯಾಟರ್ ದೇವದತ್ ಪಡಿಕ್ಕಲ್ (46 ಎಸೆತಗಳಲ್ಲಿ ಅಜೇಯ 102) ಅವರ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ತಮಿಳುನಾಡು ಕೇವಲ 14.2 ಓವರ್‌ಗಳಲ್ಲಿ 100 ರನ್‌ಗಳಿಗೆ ಆಲೌಟ್ ಆಯಿತು. ತಲಾ ಮೂರು ವಿಕೆಟ್ ಪಡೆದ ಶ್ರೇಯಸ್ ಗೋಪಾಲ್ ಮತ್ತು ಪ್ರವೀಣ್ ದುಬೆ ತಮಿಳುನಾಡನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು

ಸವಾಲಿನ ಗುರಿ ಬೆನ್ನತ್ತಿದ ತಮಿಳುನಾಡು ತಂಡವು ಶ್ರೇಯಸ್ ಗೋಪಾಲ್, ವೈಶಾಖ್ ವಿಜಯ್‌ಕುಮಾರ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. 29 ರನ್ ಗಳಿಸಿದ ಆರಂಭಿಕ ಬ್ಯಾಟರ್ ತುಷಾರ್ ರಹೇಜಾ ತಮಿಳುನಾಡಿನ ಟಾಪ್ ಸ್ಕೋರರ್ ಎನಿಸಿಕೊಂಡರು. ಇನ್ನುಳಿದಂತೆ ಎನ್ ಜಗದೀಶನ್ (21), ರಾಜ್‌ಕುಮಾರ್ ರವಿಚಂದ್ರನ್ (16), ಮತ್ತು ಅಮಿತ್ ಸಾತ್ವಿಕ್ (15) ಎರಡಂಕಿ ದಾಟಿದ ಇತರ ಆಟಗಾರರು. ಭಾರತೀಯ ಟೆಸ್ಟ್ ಆಟಗಾರ ಸಾಯಿ ಸುದರ್ಶನ್ (8) ನಿರಾಸೆ ಮೂಡಿಸಿದರು. ಶಾರುಖ್ ಖಾನ್ (2), ಸಾಯಿ ಕಿಶೋರ್ (2), ಸೋನು ಯಾದವ್ (3), ವರುಣ್ ಚಕ್ರವರ್ತಿ (0) ಮತ್ತು ಟಿ ನಟರಾಜನ್ (1) ಔಟಾದ ಇತರ ಆಟಗಾರರು. ಗುರ್ಜಪ್ನೀತ್ ಸಿಂಗ್ (0) ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ದೇವದತ್ ಅವರ ಇನ್ನಿಂಗ್ಸ್ ಪಂದ್ಯದ ವಿಶೇಷವಾಗಿತ್ತು.

ತಮಿಳುನಾಡು ಬೌಲರ್‌ಗಳನ್ನು ಚೆಂಡಾಡಿದ ಪಡಿಕ್ಕಲ್

ಮಯಾಂಕ್ ಅಗರ್‌ವಾಲ್ ವಿಕೆಟ್ ಪತನದ ಬಳಿಕ ಕಣಕ್ಕಿಳಿದ ದೇವದತ್ ಪಡಿಕ್ಕಲ್, ತಮಿಳುನಾಡು ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪಡಿಕ್ಕಲ್ ಕೇವಲ 46 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 102 ರನ್ ಸಿಡಿಸಿದರು. ಶರತ್ (53), ಮಯಾಂಕ್ ಅಗರ್ವಾಲ್ (24), ಮತ್ತು ಕರುಣ್ ನಾಯರ್ (4) ಔಟಾದ ಇತರ ಆಟಗಾರರು. ಸ್ಮರಣ್ ರವಿಚಂದ್ರನ್ (29 ಎಸೆತಗಳಲ್ಲಿ 46) ಅಜೇಯರಾಗಿ ಉಳಿದರು.

ವೈಭವ್ ಶತಕದ ಹೊರತಾಗಿಯೂ ಬಿಹಾರಕ್ಕೆ ಸೋಲು

ಇನ್ನು 14 ವರ್ಷದ ವೈಭವ್ ಸೂರ್ಯವಂಶಿ ಬಾರಿಸಿದ ಸ್ಪೋಟಕ ಶತಕದ ಹೊರತಾಗಿಯೂ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಬಿಹಾರ ಮೂರು ವಿಕೆಟ್‌ಗಳಿಂದ ಸೋತಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬಿಹಾರ ಮೂರು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ವೈಭವ್ ಸೂರ್ಯವಂಶಿ 61 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪೃಥ್ವಿ ಶಾ (30 ಎಸೆತಗಳಲ್ಲಿ 66) ಮಹಾರಾಷ್ಟ್ರ ಪರ ಮಿಂಚಿದರು. ನೀರಜ್ ಜೋಶಿ (30) ಮತ್ತು ನಿಕಂ (27) ಕೂಡ ಉತ್ತಮ ಪ್ರದರ್ಶನ ನೀಡಿದರು. ಈ ಶತಕದೊಂದಿಗೆ ವೈಭವ್ ಕೆಲವು ಮೈಲಿಗಲ್ಲುಗಳನ್ನು ದಾಟಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ವೈಭವ್. 14 ವರ್ಷದ ಈ ಆಟಗಾರನ ಇನ್ನಿಂಗ್ಸ್‌ನಲ್ಲಿ ತಲಾ ಏಳು ಸಿಕ್ಸರ್ ಮತ್ತು ಬೌಂಡರಿಗಳಿದ್ದವು. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇದು ವೈಭವ್ ಅವರ ಮೊದಲ ಶತಕವಾಗಿದೆ. ಆಡಿದ ಐದನೇ ಪಂದ್ಯದಲ್ಲೇ ವೈಭವ್ ಶತಕ ಪೂರೈಸಿದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!