
ನವದೆಹಲಿ (ಅ.11) ದೆಹಲಿಯಲ್ಲಿ ಕಾಕ್ರೋಚ್ ಪ್ರತಿಭಟನೆ ವಿರುದ್ದ ದೆಹಲಿ ಪೊಲೀಸರು ಹಲವು ಕಠಿಣ ಕ್ರಮ ಕೈಗೊಂಡಿದ್ದಾರೆ. ದಿಲ್ಲಿ ಪೊಲೀಸರ ನಡೆ ವಿರುದ್ದ ಪ್ರತಿಪಕ್ಷಗಳು, ಕಾಕ್ರೋಚ್ ಪಾರ್ಟಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟಿಗ ದೆಹಲಿ ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೆಹಲಿಯ ಪರಿಸ್ಥಿತಿ ನೋಡಿದರೆ ದಿಲ್ಲಿ ಪೊಲೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಹೇಳಿದ್ದಾರೆ.
ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಅಕ್ಟೋಬರ್ 10ರಂದು ಪ್ರತಿಭಟನೆ ಮಾಡುವುದಾಗಿ ಕಾಕ್ರೋಚ್ ನಾಯಕರು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದರು. ಸೋಶಿಯಲ್ ಮೀಡಿಯಾ, ಮಾಧ್ಯಮಗಳ ಮೂಲಕ ಹೇಳಿದ್ದರು. ಆದರೆ ಕಾಕ್ರೋಚ್ ಪ್ರತಿಭಟನೆಗೆ ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಇತ್ತ ಹೋರಾಟಕ್ಕಿಳಿದ ಕಾಕ್ರೋಚ್ ಜನತಾ ಪಾರ್ಟಿ ನಾಯಕರು, ಬೆಂಬಲಿಗರು,ಪ್ರತಿಪಕ್ಷಗಳ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ನಡೆಯನ್ನು ಸಮರ್ಥಿಸಿಕೊಂಡು ದಾನೀಶ್ ಕನೇರಿಯಾ ಟ್ವೀಟ್ ಮಾಡಿದ್ದರು. ಇದು ಭಾರಿ ವೈರಲ್ ಆಗಿದೆ.
ಕಾಕ್ರೋಚ್ ನಾಯಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಮೂಲಕ ಇಡೀ ಹೋರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದರು. ಜೊತೆಗೆ ಎಲ್ಲಾ ಕಾಕ್ರೋಚ್ ನಾಯಕರು, ಪ್ರತಿಪಕಕ್ಷಗಳ ನಾಯಕರ ಲೆಕ್ಕಾಚಾರ ಉಲ್ಟಾ ಮಾಡಿದ್ದರು. ಇದರ ಬೆನ್ನಲ್ಲೇ ದಾನೀಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ. ದಿಲ್ಲಿ ಪೊಲೀಸರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಾನೀಶ್ ಕನೇರಿಯಾ ಕಳೆದ ಹಲವು ವರ್ಷಗಳಿಂದ ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳು, ನಿರ್ಧಾರಗಳನ್ನು ಸಮರ್ಥಿಸಿಕೊಂಡು ಬಂದಿದ್ದಾರೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ನಡೆಯುತಿರುವ ಹಿಂದೂಗಳ ಮೇಲಿನ ದಾಳಿ ಕುರಿತು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಈ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದೀಗ ಮತ್ತೆ ಬಿಜೆಪಿ ಸರ್ಕಾರದ ನಿಲುವು, ದಿಲ್ಲಿ ಪೊಲೀಸರ ಕ್ರಮ ಸಮರ್ಥಿಸಿ ಪೋಸ್ಟ್ ಮಾಡಿದ್ದಾರೆ.
ದಾನೀಶ್ ಕನೇರಿಯಾ ಪೋಸ್ಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಗೆ ಫಿಕ್ಸರ್ ಎಂದು ಟೀಕಿಸಿದ್ದಾರೆ. ಫಿಕ್ಸಿಂಗ್ ಆರೋಪ ನೆನಪಿಸಿ ಟೀಕೆ ಮಾಡಿದ್ದಾರೆ. ಇದೇ ವೇಳೆ ಹಲವರು ದಾನೀಶ್ ಕನೇರಿಯಾಗೆ ಬೆಂಬಲ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧಗಳ ಚರ್ಚೆ ನಡೆಯುತ್ತಿದೆ. ಇದೇ ವೇಳೆ ದಿಲ್ಲಿ ಪೊಲೀಸರು ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯನ್ನು ಹತ್ತಿಕ್ಕಿದ ರೀತಿ ಕುರಿತು ಚರ್ಚೆಯಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.