
ದೆಹಲಿ (ಆ.21): ಪ್ರಸಕ್ತ ಸಾಲಿನ ದೆಹಲಿ ಪ್ರೀಮಿಯರ್ ಲೀಗ್ (DPL 2026) ಟೂರ್ನಿಯಲ್ಲಿ ದೆಹಲಿಯ ಯುವ ಆಟಗಾರ್ತಿ ಮೇಧವಿ ಬಿಧುರಿ GenZ '6-7' ಸೆಲಬ್ರೇಷನ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಮೈದಾನದಲ್ಲಿ ಅವರು ಮಾಡಿದ ಕೈಸಂಜ್ಞೆಯ ಸಂಭ್ರಮವು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಇಷ್ಟಕ್ಕೂ ಯಾರೀ ಮೇಧಾವಿ ಬಿಧುರಿ? ಅವರ ಕ್ರಿಕೆಟ್ ಹಿನ್ನೆಲೆಯೇನು? ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಆಗಸ್ಟ್ 20ರಂದು ನಡೆದ ವುಮೆನ್ಸ್ ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ'ಸೆಂಟ್ರಲ್ ದೆಹಲಿ ಕ್ವೀನ್ಸ್' ತಂಡವನ್ನು ಪ್ರತಿನಿಧಿಸಿದ್ದ 20 ಹರೆಯದ ಮೇಧವಿ ಬಿಧುರಿ, ಕಳೆದ ಬಾರಿಯ ಚಾಂಪಿಯನ್ಸ್ ವಿರುದ್ಧ ಎರಡು ಪ್ರಮುಖ ವಿಕೆಟ್ ಪಡೆದು ಮಿಂಚಿದರು. ತಮ್ಮ ಅದ್ಭುತ ಲೆಗ್-ಸ್ಪಿನ್ ಬೌಲಿಂಗ್ ಜೊತೆಗೆ ಈ ವಿಶಿಷ್ಟ ವೈರಲ್ ಸೆಲಬ್ರೇಷನ್ ಕಾರಣದಿಂದ ಅವರು ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದರು.
ಸೌತ್ ದೆಹಲಿ ಸೂಪರ್‌ಸ್ಟಾರ್ಜ್ ವಿರುದ್ಧದ ಪಂದ್ಯದ 16ನೇ ಓವರ್‌ನಲ್ಲಿ ಎದುರಾಳಿ ತಂಡದ ಬ್ಯಾಟರ್ ನಿಶಿಕಾ ಸಿಂಗ್ ಅವರ ವಿಕೆಟ್ ಉರುಳಿಸಿದಾಗ ಮೇಧವಿ ಈ ವಿಭಿನ್ನ ಸಂಭ್ರಮಾಚರಣೆ ಮಾಡಿದರು. ಸಾಂಪ್ರದಾಯಿಕವಾಗಿ ಮುಷ್ಟಿ ಬಿಗಿದು ಅಥವಾ ಜಿಗಿದು ಸಂಭ್ರಮಿಸುವ ಬದಲು, ತಮ್ಮ ಎರಡೂ ಕೈಗಳನ್ನು ಮೇಲಕ್ಕೆ-ಕೆಳಕ್ಕೆ ಆಡಿಸುತ್ತಾ "ಸಿಕ್ಸ್-ಸೆವೆನ್" (6-7) ಎಂದು ಸಂಭ್ರಮಿಸಿದ್ದಾರೆ. ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಈ ಪಂದ್ಯದಲ್ಲಿ ಸೆಂಟ್ರಲ್ ದೆಹಲಿ ಕ್ವೀನ್ಸ್ ತಂಡ 29 ರನ್‌ಗಳಿಂದ ಸೋಲನುಭವಿಸಿದರೂ, ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದು ಮಾತ್ರ ಮೇಧವಿಯ ಈ ಸಂಭ್ರಮಾಚರಣೆ.
ಕೇವಲ ಒಂದೇ ಒಂದು ವೈರಲ್ ವಿಡಿಯೋದಿಂದ ಜನಪ್ರಿಯತೆ ಗಳಿಸಿದವರ ಸಾಲಿಗೆ ಮೇಧವಿ ಸೇರುವುದಿಲ್ಲ. ಅವರು ಸುದೀರ್ಘ ಕಾಲದಿಂದ ದೆಹಲಿ ದೇಶೀಯ ಕ್ರಿಕೆಟ್‌ನಲ್ಲಿ ಸತತ ಪರಿಶ್ರಮ ವಹಿಸಿ ಬೆಳೆದುಬಂದ ಬೌಲರ್. ಬಲಗೈ ಲೆಗ್‌ಸ್ಪಿನ್ನರ್ ಆಗಿರುವ ಈಕೆ, ದೆಹಲಿ ಮತ್ತು ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (DDCA) ಪಟ್ಟಿಯಲ್ಲಿ ಪ್ರಮುಖ ಲೆಗ್-ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2024 ರ ಹರಾಜು ಪಟ್ಟಿಯಲ್ಲೂ ಇವರ ಹೆಸರು ನೋಂದಾಯಿತವಾಗಿತ್ತು. ಕಳೆದ ಆವೃತ್ತಿಯ ದೆಹಲಿ ಪ್ರೀಮಿಯರ್ ಲೀಗ್ (DPL 2025) ಫೈನಲ್ ಪಂದ್ಯದಲ್ಲಿ ಸೂಪರ್‌ಸ್ಟಾರ್ಜ್ ತಂಡದ ಪರವಾಗಿ ಕಣಕ್ಕಿಳಿದು, 26 ರನ್ ನೀಡಿ 3 ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬೊಂಬಾಟ್ ಪ್ರದರ್ಶನ ನೀಡಿದ್ದರು.
ಪ್ರಸ್ತುತ ಜಾಗತಿಕ ಮಟ್ಟದಲ್ಲಿ '6-7' (ಸಿಕ್ಸ್-ಸೆವೆನ್) ಸಂಭ್ರಮಾಚರಣೆಯು 'ಜೆನ್ ಜೀ' (Gen Z) ಮತ್ತು 'ಜೆನ್ ಆಲ್ಫಾ' ಯುವಜನತೆಯಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದೆ. ಎರಡೂ ಕೈಗಳನ್ನು ತಕ್ಕಡಿಯಂತೆ ಅಥವಾ seesaw ಮಾದರಿಯಲ್ಲಿ ಮೇಲಕ್ಕೆ-ಕೆಳಕ್ಕೆ ಆಡಿಸುವ ಈ ಸಂಭ್ರಮಕ್ಕೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲದಿದ್ದರೂ, ಟಿಕ್‌ಟಾಕ್‌ನಿಂದ ಹಿಡಿದು ಜಾಗತಿಕ ಕ್ರೀಡಾಂಗಣಗಳವರೆಗೆ ಇದು ವ್ಯಾಪಿಸಿದೆ. ಕೆವಿನ್ ಪೀಟರ್ಸನ್, ಡೇವಿಡ್ ವಾರ್ನರ್ ಹಾಗೂ ಫುಟ್‌ಬಾಲ್ ತಾರೆ ಕಾಸೆಮಿರೊ ಅವರಂತಹ ಜಾಗತಿಕ ಜಗತ್ತಿನ ದಿಗ್ಗಜರು ಕೂಡ ಈ ಸಂಭ್ರಮಾಚರಣೆಯನ್ನು ಅನುಕರಿಸಿದ್ದಾರೆ.
ಆದರೆ ಮೇಧವಿ ಬಿಧುರಿ ವಿಷಯದಲ್ಲಿ ಈ ಆಚರಣೆ ಮತ್ತಷ್ಟು ವಿಶೇಷವೆನಿಸಲು ಕಾರಣ ಅವರ ಜೆರ್ಸಿ ಸಂಖ್ಯೆ 67 (Sixty-Seven)! ತಮ್ಮ ಜೆರ್ಸಿ ಸಂಖ್ಯೆಗೆ ಹೊಂದುವ ರೀತಿಯಲ್ಲಿ ಅವರು ಈ ಸಂಭ್ರಮಾಚರಣೆ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.