
ಚೆನ್ನೈ(ಏ.13): ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ ರಾಯಲ್ಸ್ ಎದುರು 3 ರನ್ ರೋಚಕ ಸೋಲು ಅನುಭವಿಸಿದೆ. ಏಪ್ರಿಲ್ 12ರಂದು ನಡೆದ ಜಿದ್ದಾಜಿದ್ದಿನ ಪೈಪೋಟಿಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಧೋನಿ, ಸಿಎಸ್‌ಕೆ ಬ್ಯಾಟರ್‌ಗಳ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು, ಜೋಸ್ ಬಟ್ಲರ್ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ 176 ರನ್‌ಗಳ ಸವಾಲಿನ ಗುರಿ ನೀಡಿತ್ತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭದಲ್ಲೇ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಅಜಿಂಕ್ಯ ರಹಾನೆ ಹಾಗೂ ಡೆವೊನ್ ಕಾನ್‌ವೇ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು.
ಆದರೆ ರಾಜಸ್ಥಾನ ರಾಯಲ್ಸ್ ಬೌಲರ್‌ಗಳು ಅತ್ಯಂತ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಜತೆಗೆ ಮಧ್ಯ ಮಧ್ಯ ಸಿಎಸ್‌ಕೆ ಬ್ಯಾಟರ್‌ಗಳ ವಿಕೆಟ್ ಕಬಳಿಸುವ ಮೂಲಕ ಧೋನಿ ಪಡೆಗೆ ದೊಡ್ಡ ಹೊಡೆತ ನೀಡಿದರು. ಇನ್ನು ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರೂ, ಕೂದಲೆಳೆ ಅಂತರದಲ್ಲಿ ಗೆಲುವಿನ ಅವಕಾಶವನ್ನು ಸಿಎಸ್‌ಕೆ ಪಡೆ ಕೈಚೆಲ್ಲಿತು.
ಇನ್ನು ರಾಜಸ್ಥಾನ ರಾಯಲ್ಸ್ ಎದುರು ರೋಚಕ ಸೋಲು ಅನುಭವಿಸಿದ ಬೆನ್ನಲ್ಲೇ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಸಿಎಸ್‌ಕೆ ತಂಡವು ಮಧ್ಯದ ಓವರ್‌ಗಳಲ್ಲಿ ಸ್ಟ್ರೈಕ್ ರೊಟೇಷನ್ ಮಾಡಬೇಕಿತ್ತು. ಬ್ಯಾಟರ್‌ಗಳ ವೈಫಲ್ಯದಿಂದಲೇ ನಾವು ಈ ಪಂದ್ಯವನ್ನು ಸೋತಿದ್ದು ಎಂದು ನಾಯಕ ಅಸಮಾಧಾನ ಹೊರಹಾಕಿದ್ದಾರೆ.
" ನನ್ನ ಪ್ರಕಾರ, ಮಧ್ಯಮ ಓವರ್‌ಗಳಲ್ಲಿ ನಮ್ಮ ಬ್ಯಾಟರ್‌ಗಳು ಇನ್ನಷ್ಟು ಸ್ಟ್ರೈಕ್ ರೊಟೇಷನ್ ಮಾಡಬೇಕಿತ್ತು. ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತಿರಲಿಲ್ಲ. ಆದರೆ ಎದುರಾಳಿ ತಂಡದಲ್ಲಿ ಹೆಚ್ಚು ಅನುಭವಿ ಸ್ಪಿನ್ನರ್‌ಗಳಿದ್ದರು. ಆದರೆ ನಾವು ಆಗ ಸ್ಟ್ರೈಕ್ ರೊಟೇಟ್ ಮಾಡಲು ಹೆಚ್ಚು ಯಶಸ್ವಿಯಾಗಲಿಲ್ಲ. ಸ್ಟ್ರೈಕ್ ರೊಟೇಟ್ ಮಾಡುವುದು ಬ್ಯಾಟರ್‌ಗಳಿಗೆ ಕಷ್ಟವೇನೂ ಆಗಿರಲಿಲ್ಲ. ಈ ಸೋಲಿಗೆ ನಮ್ಮ ತಂಡದ ಬ್ಯಾಟರ್‌ಗಳೇ ಕಾರಣ. ಮಧ್ಯಮ ಕ್ರಮಾಂಕದಲ್ಲಿ ನಿದಾನಗತಿಯಲ್ಲಿ ಬ್ಯಾಟಿಂಗ್ ಮಾಡುವುದರಿಂದ ಟೂರ್ನಿಯ ಲೀಗ್ ಹಂತ ಮುಗಿಯುವ ವೇಳೆಗೆ ನಮ್ಮ ನೆಟ್ ರನ್‌ರೇಟ್ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ" ಎಂದು ತಂಡಕ್ಕೆ ಧೋನಿ ಎಚ್ಚರಿಕೆ ನೀಡಿದ್ದಾರೆ.
IPL 2023: ಬರೋಬ್ಬರಿ 15 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಮಣಿಸಿದ ರಾಜಸ್ಥಾನ!
ಇನ್ನು ಇದೇ ವೇಳೆ ಧೋನಿ, ಸಿಎಸ್‌ಕೆ ತಂಡದ ಬೌಲರ್‌ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಇಬ್ಬನಿ ಬೀಳುತ್ತಿದ್ದರೂ ಸಹಾ ನಮ್ಮ ಬೌಲರ್‌ಗಳು ಚೆನ್ನಾಗಿ ಪ್ರದರ್ಶನ ನೀಡಿದರು. ನಮ್ಮ ಬೌಲರ್‌ಗಳ ಪ್ರದರ್ಶನದ ಬಗ್ಗೆ ಖುಷಿಯಿದೆ ಎಂದು ಧೋನಿ ಹೇಳಿದ್ದಾರೆ.
ಟರ್ನಿಂಗ್ ಪಾಯಿಂಟ್
9 ಓವರ್‌ಗೆ ಮುಕ್ತಾಯಕ್ಕೆ 1 ವಿಕೆಟ್ಗೆ 76 ರನ್ ಗಳಿಸಿದ್ದ ಚೆನ್ನೈ ಬಳಿಕ ಮಂಕಾಯಿತು. ನಂತರದ 7 ಓವರ್‌ಗಳಲ್ಲಿ 41 ರನ್ ಗಳಿಸಿ ಪ್ರಮುಖ ಐವರನ್ನು ಕಳೆದುಕೊಂಡಿತು. ಕಾನ್‌ವೇ(50) ಏಕಾಂಗಿ ಹೋರಾಟ ಪ್ರದರ್ಶಿಸಿದರೆ, ಅಜಿಂಕ್ಯಾ ರಹಾನೆ 19 ಎಸೆತಗಳಲ್ಲಿ 31 ರನ್ ಸಿಡಿಸಿ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಆದರೆ ಉಳಿದವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಕೊನೆ 3 ಓವರಲ್ಲಿ 54 ರನ್ ಬೇಕಿದ್ದಾಗ ಧೋನಿ-ಜಡೇಜಾ 18ನೇ ಓವರಲ್ಲಿ 14, 19ನೇ ಓವರಲ್ಲಿ 19 ರನ್ ಸಿಡಿಸಿದರು. ಕೊನೆ 6 ಎಸೆತಗಳಲ್ಲಿ 61 ರನ್ ಅಗತ್ಯವಿತ್ತು. 2 ಮತ್ತು 3ನೇ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರೂ ಕೊನೆ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ವಿಫಲರಾದರು. ಧೋನಿ 17 ಎಸೆತಗಳಲ್ಲಿ 32, ಜಡೇಜಾ 15 ಎಸೆತಗಳಲ್ಲಿ 25 ರನ್ ಸಿಡಿಸಿದರು.
ಉತ್ತಮ ಆರಂಭ ಪಡೆದರೂ 10-17 ಓವರ್ ನಡುವೆ ಚೆನ್ನೈ 48 ಎಸೆತಗಳಲ್ಲಿ ಕೇವಲ 46 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತು. ಹೀಗಾಗಿ ಕೊನೆ 3 ಓವರಲ್ಲಿ 54 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ಮಧ್ಯಮ ಓವರ್‌ಗಳಲ್ಲಿ 10-20 ರನ್ ಹೆಚ್ಚು ಕಲೆಹಾಕಿದ್ದರೆ ಚೆನ್ನೈ ಪಂದ್ಯ ಗೆಲ್ಲುವ ಸಾದ್ಯತೆ ಇತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.