
ಅಹಮದಾಬಾದ್: ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ನ ನಂಬರ್ 1 ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳು ದಟ್ಟವಾಗಿದೆ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದ ತಂಡ ಸತತ 2ನೇ ಸೋಲು ಕಂಡಿದೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 83 ರನ್‌ಗಳಲ್ಲಿ ಹೀನಾಯವಾಗಿ ಸೋತ ಗುಜರಾತ್, ಅಗ್ರ-2ರಿಂದ ಹೊರಬೀಳುವ ಆತಂಕಕ್ಕೆ ಗುರಿಯಾಗಿದೆ.
ತಂಡ ಎಲ್ಲಾ 14 ಪಂದ್ಯಗಳನ್ನಾಡಿದ್ದು, 18 ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಇದೆ. ಆದರೆ ಆರ್ ಸಿಬಿ(17), ಪಂಜಾಬ್ (17), ಮುಂಬೈ (16) ತಂಡಗಳು ಕೊನೆ ಪಂದ್ಯದಲ್ಲಿ ಗೆದ್ದರೆ ಗುಜರಾತ್ 3ನೇ ಸ್ಥಾನಕ್ಕೆ ತಳ್ಳಲ್ಪಡಲಿವೆ. ಮತ್ತೊಂದೆಡೆ ಚೆನ್ನೈ 4 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಿಯಾಗಿಯೇ ಟೂರ್ನಿಗೆ ವಿದಾಯ ಹೇಳಿತು.
ಮೊದಲು ಬ್ಯಾಟ್ ಮಾಡಿದ ಚೆನ್ನೈ 5 ವಿಕೆಟ್‌ಗೆ 230 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಗುಜರಾತ್ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿ, 18.3 ಓವರ್‌ಗಳಲ್ಲಿ 147 ರನ್‌ಗೆ ಆಲೌಟಾಯಿತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಗುಜರಾತ್, ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದು ಪ್ಲೇ-ಆಫ್‌ಗೂ ಮುನ್ನ ತಂಡದ ಆತಂಕಕ್ಕೆ ಕಾರಣವಾಗಿದೆ.
ಚೆನ್ನೈನ ನಿಖರ ದಾಳಿಗೆ ಸಾಯಿ ಸುದರ್ಶನ್ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್‌ಗೆ ಕ್ರೀಸ್ ನಲ್ಲಿ ನೆಲೆಯೂರಲಾಗಲಿಲ್ಲ. ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿರುವ ಸುದರ್ಶನ್ 41 ರನ್ ಗಳಿಸಿದರು. ಶುಭ್ರಮನ್ ಗಿಲ್ (13), ಬಟ್ಲರ್ (5), ರುಥರ್‌ಫೋರ್ಡ್(0), ಶಾರುಖ್ ಖಾನ್(19), ರಾಹುಲ್ ತೆವಾಟಿಯಾ (14) ಹಾಗೂ ರಶೀದ್ ಖಾನ್ (12) ತಂಡಕ್ಕೆ ನೆರವಾಗಲಿಲ್ಲ. ನೂರ್ ಅಹ್ಮದ್ ಹಾಗೂ ಅನ್ಸುಲ್ ಕಂಬೋಜ್ ತಲಾ 3 ವಿಕೆಟ್ ಕಿತ್ತರು.
ಬ್ರೆವಿಸ್ ಸ್ಫೋಟಕ ಆಟ: ಇದಕ್ಕೂ ಮುನ್ನ ಇನ್ನಿಂಗ್ಸ್ 2ನೇ ಓವರ್‌ನಲ್ಲೇ 28 ರನ್ ಸಿಡಿಸುವ ಮೂಲಕ 17 ವರ್ಷದ ಆಯುಶ್ ಮಾಥ್ರೆ ಚೆನ್ನೈಗೆ ಉತ್ತಮ ಆರಂಭ ಒದಗಿಸಿದರು. ಪವರ್-ಪ್ಲೇನಲ್ಲಿ 68 ರನ್ ಗಳಿಸಿದ್ದ ತಂಡ, ಆ ಬಳಿಕವೂ ವೇಗವಾಗಿ ರನ್ ಕಲೆಹಾಕಿತು. ಆಯುಶ್ 17 ಎಸೆತಕ್ಕೆ 34 ರನ್ ಗಳಿಸಿ ಔಟಾದ ಬಳಿಕ, ಉರ್ವಿಲ್ ಪಟೇಲ್ 19 ಎಸೆತಕ್ಕೆ 37 ರನ್ ಚಚ್ಚಿದರು. ಡೆವೋನ್ ಕಾನ್‌ವೇ 35 ಎಸೆತಕ್ಕೆ 52 ರನ್ ಗಳಿಸಿದರೆ, ಡೆತ್ ಓವರ್‌ಗಳಲ್ಲಿ ಆರ್ಭಟಿಸಿದ ಡೆವಾಲ್ಡ್ ಬ್ರೆವಿಸ್ 23 ಎಸೆತಕ್ಕೆ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ ಔಟಾಗದೆ 57 ರನ್ ಸಿಡಿಸಿದರು. ಜಡೇಜಾ 21, ದುಬೆ 17 ರನ್ ಕೊಡುಗೆ ನೀಡಿದರು.
ಸ್ಕೋರ್: ಚೆನ್ನೈ 20 ಓವರಲ್ಲಿ 230/5 (ಬ್ರೆವಿಸ್ 57, ಕಾನ್‌ವೇ 52, ಉರ್ವಿಲ್ 37, ಆಯುಶ್ 34, ಪ್ರಸಿದ್ಧ 2-22),
ಗುಜರಾತ್ 18.3 ಓವರಲ್ಲಿ 147/10 (ಸುದರ್ಶನ್ 41, ಅನುಲ್ 3-13, ನೂ3-21) ಪಂದ್ಯಶ್ರೇಷ್ಠ: ಡೆವಾಲ್ಡ್ ಬ್ರೆವಿಸ್
ಕೊನೆ ಪಂದ್ಯದಲ್ಲಿ ಸನ್ 278!
ನವದೆಹಲಿ: ಹಾಲಿ ಚಾಂಪಿಯನ್ ಕೋಲ್ಕತಾ ವಿರುದ್ದ ಈ ಬಾರಿ ಐಪಿಎಲ್ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 110 ರನ್ ಭರ್ಜರಿ ಗೆಲುವು ಸಾಧಿಸಿದೆ. 14ರಲ್ಲಿ 6 ಪಂದ್ಯ ಗೆದ್ದ ಸನ್ ರೈಸರ್ಸ್ 6ನೇ ಸ್ಥಾನಕ್ಕೇರಿತು. ಕೆಕೆಆರ್ ಸೋಲಿನೊಂದಿಗೆ 7ನೇ ಸ್ಥಾನಕ್ಕೆ ಕುಸಿಯಿತು.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ 3 ವಿಕೆಟ್‌ಗೆ 278 ರನ್ ಕಲೆಹಾಕಿತು. ಇದು ಐಪಿಎಲ್‌ನಲ್ಲೇ ತಂಡವೊಂದರ 3ನೇ ಗರಿಷ್ಠ ಸ್ಕೋರ್. ಕಳೆದ ವರ್ಷ ಸನ್‌ರೈಸರ್ಸ್ ತಂಡ ಆರ್‌ಬಿ ವಿರುದ್ಧ 3 ವಿಕೆಟ್‌ಗೆ 287 ರನ್ ಗಳಿಸಿದ್ದು, ಈಗಲೂ ಗರಿಷ್ಠ, ಕ್ಲಾಸೆನ್ 37 ಎಸೆತಕ್ಕೆ ಶತಕ ಪೂರ್ಣಗೊಳಿಸಿದರು. ಇದು ಐಪಿಎಲ್‌ನ 3ನೇ ಜಂಟಿ ವೇಗದ ಶತಕ. ಕ್ರಿಸ್ ಗೇಲ್ 30, ವೈಭವ್ ಸೂರ್ಯವಂಶಿ 35 ಎಸೆತಕ್ಕೆ ಶತಕ ಬಾರಿಸಿದ್ದಾರೆ. ಉಳಿದಂತೆ ಟ್ರಾವಿಸ್ ಹೆಡ್ 76 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ 18.4 ಓವರ್‌ಗಳಲ್ಲಿ 168 ರನ್ ಆಲೌಟಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.