
ನವದೆಹಲಿ (ಮೇ.8): ಐಪಿಎಲ್ 15ನೇ ಆವೃತ್ತಿ (IPL 2022) ನಿರ್ಣಾಯಕ ಹಂತ ತಲುಪಿದ್ದರೂ ಟೀವಿ ವೀಕ್ಷಕರ (TV Viewers) ಸಂಖ್ಯೆ ಮಾತ್ರ ಕುಸಿಯುತ್ತಿದೆ. ಮೊದಲ 2 ವಾರ ಕುಸಿತದ ಬಳಿಕ 3ನೇ ವಾರ ಚೇತರಿಸಿಕೊಂಡಿದ್ದ ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ (Star Sports) ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್(ಟಿಆರ್‌ಪಿ), 4ನೇ ವಾರ ಮತ್ತೆ ಕುಸಿದಿದೆ.
ಕಳೆದ ಆವೃತ್ತಿಗೆ ಹೋಲಿಸಿದರೆ ಈ ಆವೃತ್ತಿಯ 4ನೇ ವಾರ ಟಿಆರ್‌ಪಿ (TRP) ಶೇ.35ರಷ್ಟುಇಳಿಕೆ ಕಂಡಿದೆ. ಈ ಆವೃತ್ತಿ ಮುಗಿಯುತ್ತಿದ್ದಂತೆ 2023-2027ರ ಅವಧಿಗೆ ಮಾಧ್ಯಮ ಹಕ್ಕು (Media Rights) ಹರಾಜು ನಡೆಸಲು ಸಿದ್ಧತೆ ನಡೆಸುತ್ತಿರುವ ಬಿಸಿಸಿಐಗೆ (BCCI) ಹಿನ್ನಡೆ ಉಂಟಾಗಿದೆ. 32000 ಕೋಟಿ ರು.ಗೂ ಹೆಚ್ಚು ಮೊತ್ತವನ್ನು ಮೂಲಬೆಲೆಯಾಗಿ ನಿಗದಿ ಮಾಡಿರುವ ಬಿಸಿಸಿಐ, ಕನಿಷ್ಠ 50000 ಕೋಟಿ ರು.ಗೆ ಮಾಧ್ಯಮ ಹಕ್ಕು ಮಾರಾಟ ಮಾಡುವ ನಿರೀಕ್ಷೆಯಲ್ಲಿದೆ. ಆದರೆ ಟೂರ್ನಿಯ ಟಿಆರ್‌ಪಿ ಕುಸಿಯುತ್ತಿರುವ ಕಾರಣ, ಬಿಡ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿರುವ ಸೋನಿ ಸಂಸ್ಥೆ (Sony) ಅಧಿಕೃತವಾಗಿಯೇ ಬಿಸಿಸಿಐನ ದುಬಾರಿ ಮೂಲಬೆಲೆಯನ್ನು ಪ್ರಶ್ನಿಸಿದೆ.
4ನೇ ಸ್ಥಾನ: ಐಪಿಎಲ್ ವೇಳೆ ಸಾಮಾನ್ಯವಾಗಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್(ಬಾರ್ಕ್) ಪ್ರಕಟಿಸುವ ಭಾರತದ ಅಗ್ರ 10 ವಾಹಿನಿಗಳ ಪಟ್ಟಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಹಿಂದಿ ಅಗ್ರಸ್ಥಾನದಲ್ಲಿರುತ್ತಿತ್ತು. ಆದರೆ ಏಪ್ರಿಲ್ 23ರಿಂದ ಏಪ್ರಿಲ್ 29ರ ಪಟ್ಟಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ 4ನೇ ಸ್ಥಾನಕ್ಕೆ ಕುಸಿದಿದೆ. ಇದು ಜಾಹೀರಾತುದಾರರನ್ನೂ ಗೊಂದಲಕ್ಕೆ ಸಿಲುಕಿಸಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.25ರಷ್ಟುಹೆಚ್ಚು ಮೊತ್ತಕ್ಕೆ ಜಾಹೀರಾತು ಒಪ್ಪಂದ ಆಗಿದೆ ಎಂದು ಸಂಸ್ಥೆಯೊಂದು ತಿಳಿಸಿದೆ.
ಕಿವುಡರ ಒಲಿಂಪಿಕ್ಸ್: ಚಿನ್ನ ಗೆದ್ದ 15ರ ಅಭಿನವ್
ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತ 3ನೇ ಚಿನ್ನದ ಪದಕ ಗೆದ್ದಿದೆ. ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 15 ವರ್ಷದ ಅಭಿನವ್ ದೇಶ್ವಾಲ್ ಚಿನ್ನದ ಪದಕ ಜಯಿಸಿದರು. ಉತ್ತರಾಖಂಡದ ಅಭಿನವ್, ಫೈನಲ್‌ನಲ್ಲಿ 24 ಯತ್ನಗಳ ಮುಕ್ತಾಯಕ್ಕೆ ಉಕ್ರೇನ್‌ನ ಒಲೆಸ್ಕಿ ಲೆಜೆಬ್ನೆ್ಯಕ್ ಜೊತೆ 234.2 ಅಂಕಗಳಲ್ಲಿ ಸಮಬಲ ಸಾಧಿಸಿದ್ದರು. ಬಳಿಕ ಶೂಟ್ ಆಫ್‌ನಲ್ಲಿ ಅಭಿನವ್ 10.3 ಅಂಕ ಗಳಿಸಿದರೆ, ಒಲೆಸ್ಕಿ 9.7 ಅಂಕಕ್ಕೆ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ 3 ಚಿನ್ನ, 2 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
IPL 2022 ಆವೇಶ್ ಅಬ್ಬರಕ್ಕೆ ನುಜ್ಜುಗುಜ್ಜಾದ ಕೆಕೆಆರ್
ಇಂದಿನಿಂದ ಥಾಮಸ್, ಉಬರ್ ಕಪ್ ಬ್ಯಾಡ್ಮಿಂಟನ್
ಬ್ಯಾಂಕಾಕ್: ಥಾಮಸ್ ಹಾಗೂ ಉಬರ್ ಕಪ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯಾವಳಿ ಭಾನುವಾರದಿಂದ ಆರಂಭಗೊಳ್ಳಲಿದ್ದು, ಭಾರತ ತಂಡಗಳನ್ನು ಲಕ್ಷ್ಯ ಸೆನ್ ಹಾಗೂ ಪಿ.ವಿ.ಸಿಂಧು ಮುನ್ನಡೆಸಲಿದ್ದಾರೆ. ಥಾಮಸ್ ಕಪ್‌ನಲ್ಲಿ ಈವರೆಗೂ ಒಂದೂ ಪದಕ ಗೆಲ್ಲದ ಭಾರತ ಪುರುಷರ ತಂಡ, ಸೆಮಿಫೈನಲ್‌ಗೂ ಪ್ರವೇಶಿಸಿಲ್ಲ. ಈ ಬಾರಿ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಆಡಲಿದೆ. ಈ ಗುಂಪಿನಲ್ಲಿ ಚೈನೀಸ್ ತೈಪೆ ಹಾಗೂ ಕೆನಡಾ ಸಹ ಇವೆ. ಉಬರ್ ಕಪ್‌ನಲ್ಲಿ 2014, 2016ರಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಮಹಿಳಾ ತಂಡ, ಈ ಬಾರಿ ‘ಡಿ’ ಗುಂಪಿನಲ್ಲಿದ್ದು ಮೊದಲ ಪಂದ್ಯದಲ್ಲಿ ಕೆನಡಾ ಎದುರಾಗಲಿದೆ. ಗುಂಪಿನಲ್ಲಿ ದ.ಕೊರಿಯಾ ಹಾಗೂ ಅಮೆರಿಕ ಸಹ ಇವೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್‌ಗೇರಲಿವೆ.
ಹರ್ಯಾಣದಲ್ಲಿ 4ನೇ ಖೇಲೋ ಇಂಡಿಯಾ ಯೂಥ್ ಗೇಮ್ಸ್
30 ವರ್ಷದ ರಾಷ್ಟ್ರೀಯ ದಾಖಲೆ ಮುರಿದ ಅವಿನಾಶ್
ನವದೆಹಲಿ: ಭಾರತದ ಅಗ್ರ ಓಟಗಾರ ಅವಿನಾಶ್ ಸಬ್ಲೆ 5000 ಮೀ.ನಲ್ಲಿ 30 ವರ್ಷದ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ಸೌಂಡ್ ರನ್ನಿಂಗ್ ಟ್ರ್ಯಾಕ್ ಮೀಟ್ ಕೂಟದಲ್ಲಿ ಪಾಲ್ಗೊಂಡಿದ್ದ ಅವರು 13 ನಿಮಿಷ 26.65 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 12ನೇ ಸ್ಥಾನ ಪಡೆದರು. 1992ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಬಹುದೂರ್ ಪ್ರಸಾದ್ 13 ನಿಮಿಷ 29.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ಈ ವರೆಗಿನ ದಾಖಲೆ ಎನಿಸಿತ್ತು. ಒಲಿಂಪಿಯನ್ ಅವಿನಾಶ್, 3000 ಮೀ. ಸ್ಟೀಪಲ್ ಚೇಸ್‌ನಲ್ಲೂ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.