
ಪಾರ್ಲ್ (ಜ. 19): ನಾಯಕ ಟೆಂಬಾ ಬವುಮಾ (Temba Bavuma) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ರಸ್ಸಿ ವ್ಯಾನ್ ಡೆರ್ ಡಸ್ಸೆನ್ (Rassie van der Dussen) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ (South Africa) ತಂಡ ಪ್ರವಾಸಿ ಭಾರತ (India) ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ (First ODi) ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶ ಕಂಡಿದೆ. ಮೊದಲ ಮೂರು ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಲ್ಕನೇ ವಿಕೆಟ್ ಗೆ ಟೆಂಬಾ ಬವುಮಾ ಹಾಗೂ ಡೆರ್ ಡಸ್ಸೆನ್ ಜೋಡಿ ದೊಡ್ಡ ಮೊತ್ತದ ಜೊತೆಯಾಟವಾಡುವ ಮೂಲಕ ಉತ್ತಮ ಮೊತ್ತಕ್ಕೆ ಕಾರಣರಾದರು.
ಬೋಲಾಂಡ್ ಪಾರ್ಕ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಹಿನ್ನಡೆಯ ಹೊರತಾಗಿಯೂ ನಾಲ್ಕನೇ ವಿಕೆಟ್ ಗೆ ಬವುಮಾ (110 ರನ್, 143 ಎಸೆತ, 8 ಬೌಂಡರಿ) ಹಾಗೂ ಡುಸ್ಸೆನ್ (129*) ಜೋಡಿ 204 ರನ್ ಜೊತೆಯಾಟವಾಡುವ ಮೂಲಕ ದಕ್ಷಿಣ ಆಫ್ರಿಕಾ ತಂಡ ನಿಗದಿತ ಓವರ್ ಗಳಲ್ಲಿ 4 ವಿಕೆಟ್ ಗೆ 296 ರನ್ ಪೇರಿಸಿತು. ಇದು ಭಾರತ ತಂಡದ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ನಾಲ್ಕನೇ ವಿಕೆಟ್ ಗೆ ದಕ್ಷಿಣ ಆಫ್ರಿಕಾದ ಅತೀದೊಡ್ಡ ಜೊತೆಯಾಟವಾಗಿದೆ. ಇದಕ್ಕೂ ಮುನ್ನ 2013ರಲ್ಲಿ ಸೆಂಚುರಿಯನ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ 171 ರನ್ ಗಳ ಜೊತೆಯಾಟವಾಡಿದ್ದು ಹಿಂದಿನ ದಾಖಲೆ ಎನಿಸಿತ್ತು. ವಾನ್ ಡೆರ್ ಡುಸ್ಸೆನ್ ಅವರ ಇನ್ನಿಂಗ್ಸ್, ಏಕದಿನ ಕ್ರಿಕೆಟ್ ನಲ್ಲಿ ಅವರ ಜೀವನಶ್ರೇಷ್ಠ ಮೊತ್ತ ಎನಿಸಿದೆ.
ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 10 ಎಸೆತಗಳನ್ನು ಎದುರಿಸಿದ ಜನ್ನೇಮನ್ ಮಲಾನ್ ಕೇವಲ 6 ರನ್ ಬಾರಿಸಿ ಬುಮ್ರಾ ಎಸೆತದಲ್ಲಿ ಪಂತ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಗೆ ಜೊತೆಯಾದ ನಾಯಕ ಟೆಂಬಾ ಬವುಮಾ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನದಲ್ಲಿದ್ದರು. 41 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 27 ರನ್ ಬಾರಿಸದ್ದ ಕ್ವಿಂಟನ್ ಡಿ ಕಾಕ್ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆಗುವುದರೊಂದಿಗೆ ದಕ್ಷಿಣ ಆಫ್ರಿಕಾ ಮತ್ತೊಂದು ಆಘಾತ ಕಂಡಿತು. ಈ ಮೊತ್ತಕ್ಕೆ 10 ರನ್ ಸೇರಿಸುವ ವೇಳೆಗೆ ಏಡೆನ್ ಮಾರ್ಕ್ರಮ್ ರನ್ ಔಟ್ ಅಗಿ ನಿರ್ಗಮಿಸಿದ್ದರಿಂದ ಆತಿಥೇಯ ತಂಡ ಅಘಾತ ಕಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.