
ಲಂಡನ್ (ಜು.6): ಕ್ರಿಕೆಟ್ ಮೈದಾನಕ್ಕೆ ಜೇನುನೊಣಗಳು ದಾಳಿ ಇಡುವುದು, ಹಾವು ಅಥವಾ ನಾಯಿಗಳು ನುಗ್ಗಿ ಪಂದ್ಯಕ್ಕೆ ಅಡ್ಡಿಪಡಿಸುವುದು ಹಳೇ ಸುದ್ದಿ. ಆದರೆ, ಇಲ್ಲೊಂದು ಕ್ರಿಕೆಟ್ ಪಂದ್ಯದ ಮಧ್ಯೆ ಬರೋಬ್ಬರಿ 800 ಕೆಜಿ ತೂಕದ ಬೃಹತ್ ಗೂಳಿಯೊಂದು (Bull) ನೇರವಾಗಿ ಪಿಚ್‌ಗೇ ನುಗ್ಗಿ ಆಟಗಾರರ ಮೇಲೆರಗಿದ ವಿಲಕ್ಷಣ ಹಾಗೂ ಅಪಾಯಕಾರಿ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಗೂಳಿಯ ರೌದ್ರಾವತಾರಕ್ಕೆ ಬೆದರಿದ ಅಂಪೈರ್‌ಗಳು ಕೊನೆಗೆ ಪಂದ್ಯವನ್ನೇ ರದ್ದುಗೊಳಿಸಿದ ಅಪರೂಪದ ಪ್ರಸಂಗ ವರದಿಯಾಗಿದೆ.
ಇಂಗ್ಲೆಂಡ್‌ನ ಪ್ರತಿಷ್ಠಿತ ನಾರ್ತ್ ಈಸ್ಟ್ ಪ್ರೀಮಿಯರ್ ಲೀಗ್ (North East Premier League) ಟೂರ್ನಿಯಲ್ಲಿ ಬರ್ನೋಪ್‌ಫೀಲ್ಡ್ ಕ್ರಿಕೆಟ್ ಕ್ಲಬ್ (Burnopfield Cricket Club) ಮತ್ತು ಹೆಟ್ಟನ್ ಲಯನ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಬಿಬಿಸಿ ವರದಿಯ ಪ್ರಕಾರ, ಸಮೀಪದ ಹಸುವಿನ ಫಾರ್ಮ್ ಒಂದರಿಂದ ಹೇಗೋ ತಪ್ಪಿಸಿಕೊಂಡಿದ್ದ ಈ ಬೃಹತ್ ಗೂಳಿಯು ಸತತ 1.6 ಕಿಲೋಮೀಟರ್ ದೂರ ಓಡಿ ಬಂದು ನೇರವಾಗಿ ಕ್ರಿಕೆಟ್ ಮೈದಾನದ ಒಳಗೆ ನುಗ್ಗಿದೆ. ಅಂದಾಜು 800 ಕೆಜಿ ತೂಕವಿದ್ದ ಈ ಗೂಳಿ ಮೈದಾನದ ಒಳಗೆ ಬಂದಿದ್ದಷ್ಟೇ ಅಲ್ಲದೆ, ಅಲ್ಲಿದ್ದ ಆಟಗಾರರನ್ನು ನೋಡಿ ರೊಚ್ಚಿಗೆದ್ದು ಅವರತ್ತ ನುಗ್ಗಲು ಪ್ರಾರಂಭಿಸಿತು. ಇದರಿಂದ ಭಯಭೀತರಾದ ಆಟಗಾರರು ಹಾಗೂ ಅಂಪೈರ್‌ಗಳು ಜೀವ ಉಳಿಸಿಕೊಳ್ಳಲು ಮೈದಾನದ ಹೊರಗೆ ಓಡಬೇಕಾಯಿತು.
ಮೈದಾನದಲ್ಲಿ ಗೂಳಿ ಅಬ್ಬರಿಸುತ್ತಿರುವ ಸುದ್ದಿ ತಿಳಿದ ತಕ್ಷಣವೇ ಅದರ ಮಾಲೀಕನಾದ ರೈತ ಸ್ಥಳಕ್ಕೆ ಧಾವಿಸಿದ್ದಾನೆ. ಗೂಳಿಯನ್ನು ಶಾಂತಗೊಳಿಸಿ, ಮರಳಿ ಫಾರ್ಮ್‌ಗೆ ಕರೆದೊಯ್ಯಲು ಆತ ಒಂದು ಉಪಾಯ ಹೂಡಿದ್ದ. ಗೂಳಿಯನ್ನು ಆಕರ್ಷಿಸಲು ಆತ ತನ್ನ ಲಾರಿಯಲ್ಲಿ ಒಂದು ‘ಹಸುವನ್ನು’ (Cow) ಮೈದಾನದ ಬಳಿ ಕರೆತಂದಿದ್ದ. ಆದರೆ, ಅತ್ಯಂತ ಹಠಾತ್ ಬೆಳವಣಿಗೆಯಿಂದ ಬೆದರಿದ್ದ ಆ ಗೂಳಿ ಮಾಲೀಕನ ಈ ಯಾವುದೇ ತಂತ್ರಕ್ಕೂ ಮಣಿಯಲಿಲ್ಲ. ಬದಲಿಗೆ ಅದನ್ನು ಹಿಡಿಯಲು ಯತ್ನಿಸಿದ ಇಬ್ಬರು ರೈತರ ಪೈಕಿ ಒಬ್ಬನಿಗೆ ಜೋರಾಗಿ ಗುದ್ದಿ ನೆಲಕ್ಕೆ ಉರುಳಿಸಿದೆ. ಅದೃಷ್ಟವಶಾತ್ ಆ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಕುರಿತು ಬಿಬಿಸಿ ಜೊತೆ ಆತಂಕ ಹಂಚಿಕೊಂಡಿರುವ ಬರ್ನೋಪ್‌ಫೀಲ್ಡ್ ಕ್ಲಬ್‌ನ ನಿರ್ದೇಶಕ ಮಾರ್ಟಿನ್ ಓಸ್ವೆಲ್, "ಮೊದಲಿಗೆ ಗೂಳಿ ಬಂದಾಗ ನಮಗೆಲ್ಲ ತುಂಬಾ ಹೊಸದು ಮತ್ತು ತಮಾಷೆ ಅನಿಸಿತು. ಆದರೆ ಈ ಗೂಳಿಯಿಂದಾಗಿ ನಮ್ಮ ಇಡೀ ಪಂದ್ಯವೇ ರದ್ದಾಗಬಹುದು ಎಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ. ಅದನ್ನು ಮೈದಾನದಿಂದ ಹೊರಗಟ್ಟಲು ನಾವು ಮಾಡಿದ ಯಾವುದೇ ಯತ್ನಗಳು ಯಶಸ್ವಿಯಾಗಲಿಲ್ಲ. ಪಂದ್ಯದ ಕಟ್-ಆಫ್ ಸಮಯ ಮುಗಿಯುವ ಮುನ್ನ ಆಟ ಮರುಆರಂಭಿಸಲು ಯಾವುದೇ ಸಾಧ್ಯತೆಗಳೇ ಇರಲಿಲ್ಲ," ಎಂದಿದ್ದಾರೆ.
"ಅದು ವಯಸ್ಸಿನಲ್ಲಿ ಚಿಕ್ಕದಾದ ಗೂಳಿಯಾಗಿದ್ದರೂ ಅತ್ಯಂತ ಸದೃಢ, ಚುರುಕು ಹಾಗೂ ಅಥ್ಲೆಟಿಕ್ ಆಗಿತ್ತು. ನಿಜ ಹೇಳಬೇಕೆಂದರೆ ಆ ಸಮಯದಲ್ಲಿ ಮೈದಾನದಲ್ಲಿದ್ದವರೆಲ್ಲರಿಗೂ ಅದು ತುಂಬಾ ಅಪಾಯಕಾರಿಯಾಗಿ ಪರಿಣಮಿಸಿತ್ತು," ಎಂದು ಅವರು ತಿಳಿಸಿದ್ದಾರೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದರಾದರೂ, ಅಷ್ಟರಲ್ಲೇ ಗೂಳಿ ತನ್ನಷ್ಟಕ್ಕೆ ತಾನೇ ಮೈದಾನದಿಂದ ಹೊರನಡೆದಿದೆ.
Cow stops play as @HettonLyonsCC attempt chase down 227 against Burnopfield CC.
🐄🏏❌😜😜@SkyCricket @SkySportsNews @neplcricket @burnopfieldcri1
just wanted to remind everyone that it still has the best moo-vement on the pitch. 😂#PitchInvader #CowCorner #OnlyInCricket pic.twitter.com/J92UBXBL1X— Hetton Lyons CC (@HettonLyonsCC) July 4, 2026
ಕ್ರಿಕೆಟ್ ಇತಿಹಾಸದ ಪುಟಗಳನ್ನು ತಿರುವಿದರೆ ಪ್ರಾಣಿಗಳು ಮತ್ತು ಕೀಟಗಳು ಅಂತರರಾಷ್ಟ್ರೀಯ ಪಂದ್ಯಗಳಿಗೂ ಅಡ್ಡಿಪಡಿಸಿದ ಹಲವು ಉದಾಹರಣೆಗಳಿವೆ. ಹಿಂದೆ ನಡೆದ ಹಲವು ಪಂದ್ಯಗಳಲ್ಲಿ ಜೇನುನೊಣಗಳ ಹಿಂಡು ಮೈದಾನಕ್ಕೆ ನುಗ್ಗಿ ಆಟಗಾರರೆಲ್ಲ ನೆಲದ ಮೇಲೆ ಮಲಗುವಂತೆ ಮಾಡಿದ್ದವು. ಅಷ್ಟೇ ಅಲ್ಲದೆ ಹಾವು, ನಾಯಿಹಾಗೂ ಆಫ್ರಿಕಾದ ವಿಶಿಷ್ಟ ಭೂಗತ ಗೆದ್ದಲುಗಳುಕ್ರಿಕೆಟ್ ಪಿಚ್‌ಗಳನ್ನು ಹಾಳುಗೆಡವಿ ಪಂದ್ಯ ಸ್ಥಗಿತಗೊಳ್ಳುವಂತೆ ಮಾಡಿದ ನಿದರ್ಶನಗಳಿವೆ.
ಕ್ರಿಕೆಟ್ ಮೈದಾನಕ್ಕೆ ದನ-ಕರುಗಳು ನುಗ್ಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2017 ರಲ್ಲಿ ಕೆರಿಡ್ಜ್ ಮತ್ತು ಮಾಸ್ಲಿ (Kerridge and Mossley) ತಂಡಗಳ ನಡುವೆ ಹಳ್ಳಿಯೊಂದರಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗಲೂ ಇಂತದ್ದೇ ಘಟನೆ ನಡೆದಿತ್ತು. ಆಗ ಹಸುವೊಂದು ಇದ್ದಕ್ಕಿದ್ದಂತೆ ಪಿಚ್ ಒಳಗೆ ನುಗ್ಗಿ ಆಟಗಾರರ ಮೇಲೆ ದಾಳಿ ಮಾಡಲು ಯತ್ನಿಸಿ ಭೀತಿ ಮೂಡಿಸಿತ್ತು. ಆದರೆ ಆಗ ಹಸು ಕೆಲವೇ ನಿಮಿಷಗಳಲ್ಲಿ ಮೈದಾನದಿಂದ ಹೊರಗೆ ಹೋಗಿದ್ದರಿಂದ ಪಂದ್ಯ ಬಚಾವಾಗಿತ್ತು. ಆದರೆ ಈ ಬಾರಿ 800 ಕೆಜಿಯ ಗೂಳಿಯ ಹಠದಿಂದಾಗಿ ಇಡೀ ಪಂದ್ಯವೇ ಇತಿಹಾಸದ ಪುಟ ಸೇರುವಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.