
ಮೆಲ್ಬರ್ನ್: ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮನ್ನು ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ ವಿಚಾರವನ್ನು ಮೆಲುಕು ಹಾಕಿದ್ದಾರೆ. ಕಳೆದ ನಾಲ್ಕು ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಈ ಜೋಡಿ ಎಲ್ಲಾ ವೈಮನಸ್ಸುಗಳನ್ನು ಮರೆತು, ಆತ್ಮೀಯ ಗೆಳೆಯರಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ಸೇರುವವರೆಗೂ, ವಿರಾಟ್ ಕೊಹ್ಲಿ ಆಸೀಸ್ ಆಲ್ರೌಂಡರ್ ಮ್ಯಾಕ್ಸಿಯನ್ನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದರು.
2021ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬರೋಬ್ಬರಿ 14.25 ಕೋಟಿ ರುಪಾಯಿ ನೀಡಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆ ಆವೃತ್ತಿಯಲ್ಲಿ ಮ್ಯಾಕ್ಸಿ 500ಕ್ಕೂ ಅಧಿಕ ರನ್ ಬಾರಿಸುವ ಮೂಲಕ ಆರ್‌ಸಿಬಿ ತಂಡವು ಪ್ಲೇ ಆಫ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸ್ಮೃತಿ ಮಂಧನಾ ಸೆಂಚುರಿ: ಕಿವೀಸ್ ಮಹಿಳೆಯರ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ
ಒಂದು ಕಾಲದಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಇತಿಹಾಸದಲ್ಲೇ ಅಪಾಯಕಾರಿ ಜೋಡಿ ಎಂದು ಗುರುತಿಸಿಕೊಂಡಿತ್ತು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್, 2021ರಲ್ಲಿ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳುವ ಮುನ್ನ, ವಿರಾಟ್ ಕೊಹ್ಲಿ ತಮ್ಮನ್ನು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದ್ದರು ಎನ್ನುವ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಹೌದು, 2017ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಮೈದಾನದಲ್ಲಿ ತಮ್ಮನ್ನು ಹಂಗಿಸಿದ್ದಕ್ಕೆ ಆಸ್ಟ್ರೇಲಿಯಾದ ತಾರಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದರು. ಇದನ್ನು ಸ್ವತಃ ಮ್ಯಾಕ್ಸ್ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮ್ಯಾಕ್ಸ್‌ವೆಲ್, '2021ರಲ್ಲಿ ಆರ್‌ಸಿಬಿ ಸೇರ್ಪಡೆಗೊಂಡ ಬಳಿಕ ಕೊಹ್ಲಿಯನ್ನು ಫಾಲೋ ಮಾಡಲು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಹೆಸರನ್ನು ಹುಡುಕಾಡುತ್ತಿದ್ದೆ. ಆದರೆ ಹೆಸರು ಕಾಣಿಸುತ್ತಿರಲಿಲ್ಲ. ಈ ಬಗ್ಗೆ ಕೊಹ್ಲಿ ಬಳಿ ವಿಚಾರಿಸಿದಾಗ, 2017ರ ಟೆಸ್ಟ್ ಸರಣಿ ವೇಳೆ ತಮ್ಮನ್ನು ಹಂಗಿಸಿದ್ದಕ್ಕೆ ಬ್ಲಾಕ್ ಮಾಡಿರುವುದಾಗಿ ಹೇಳಿದ್ದರು ಎಂದು ಮ್ಯಾಕ್ಸಿ ಆ ದಿನಗಳನ್ನು ಮೆಲುಕು ಹಾಕಿದ್ದರು.
ರೀಟೈನ್‌ಗೆ ಕ್ಷಣಗಣನೆ ಬೆನ್ನಲ್ಲೇ ಸ್ಪೋಟಕ ಶತಕ ಸಿಡಿಸಿದ ಆರ್‌ಸಿಬಿ ಆಟಗಾರ! ಬೆಂಗಳೂರು ಫ್ರಾಂಚೈಸಿ ಮೇಲೆ ಎಲ್ಲರ ಕಣ್ಣು
ಇನ್ನು 2021ರಲ್ಲಿ ಐಪಿಎಲ್‌ನಲ್ಲಿ ತಾವು ಆರ್‌ಸಿಬಿ ಸೇರಿಕೊಂಡ ಬಳಿಕ ಅನ್‌ಬ್ಲಾಕ್ ಮಾಡಿದರು' ಎಂದಿದ್ದಾರೆ. ಆಸೀಸ್ ವಿರುದ್ಧ ಟೆಸ್ಟ್ ಪಂದ್ಯದ ಫೀಲ್ಡಿಂಗ್ ವೇಳೆ ಕೊಹ್ಲಿ ಭುಜದ ನೋವಿಗೆ ತುತ್ತಾಗಿದ್ದರು. ಇದನ್ನು ಅಣಕಿಸಿದ್ದ ಮ್ಯಾಕ್ಸ್ ವೆಲ್, ತಮ್ಮ ಭುಜಕ್ಕೆ ಕೈ ಇಟ್ಟು ನೋವಾದಂತೆ ನಟಿಸಿದ್ದರು. ಇದು ಕೊಹ್ಲಿಯನ್ನು ಕೆರಳಿಸಿತ್ತು.
ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೀಟೈನ್ ಮಾಡಿಕೊಳ್ಳಲಿದೆಯೇ ಎನ್ನುವ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಯಾಕೆಂದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ ಕೇವಲ 52 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.