ಇಂದಿನಿಂದ ಆಸೀಸ್‌ ಎದುರು ಭಾರತಕ್ಕೆ ಟಿ20 ಅಗ್ನಿ ಪರೀಕ್ಷೆ

By Kannadaprabha NewsFirst Published Dec 4, 2020, 8:40 AM IST
Highlights

ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಂ ಇಂಡಿಯಾ ಇದೀಗ ಟಿ20 ಸರಣಿಯಾಡಲು ಸಜ್ಜಾಗಿದೆ. ಈ ಪಂದ್ಯ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ

ಕ್ಯಾನ್‌ಬೆರ್ರಾ(ಡಿ.04): ಆಸ್ಪ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ, ಶುಕ್ರವಾರದಿಂದ ಇಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಆರೋನ್‌ ಫಿಂಚ್‌ ಬಳಗವನ್ನು ಎದುರಿಸಲು ಸಜ್ಜಾಗಿದೆ. 

2021ರ ವಿಶ್ವಕಪ್‌ ಟೂರ್ನಿ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಈ ಟಿ20 ಸರಣಿ ಅತ್ಯಂತ ಮಹತ್ವದ್ದಾಗಿದೆ. ಟಿ20 ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿ ಕೊಹ್ಲಿ ಬಳಗವಿದೆ. 3-0 ಯಿಂದ ಭಾರತ ತಂಡ, ಟಿ20 ಸರಣಿ ಜಯಿಸಿದರೆ ಐಸಿಸಿ ರಾರ‍ಯಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದೆ. ಸದ್ಯ 3ನೇ ಸ್ಥಾನದಲ್ಲಿದೆ. ಒಂದೊಮ್ಮೆ 2ನೇ ಸ್ಥಾನದಲ್ಲಿರು ಆಸೀಸ್‌, ಕ್ಲೀನ್‌ ಸ್ವೀಪ್‌ ಮಾಡಿದರೆ ಮೊದಲ ಸ್ಥಾನಕ್ಕೇರಲಿದೆ.

ಬುಧವಾರ ಇಲ್ಲಿ ಅಂತ್ಯಗೊಂಡಿದ್ದ ಏಕದಿನ ಸರಣಿಯ ಕಡೆಯ ಪಂದ್ಯದಲ್ಲಿ ಭಾರತ ತಂಡ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿದು, 13 ರನ್‌ ಗೆಲುವು ಸಾಧಿಸಿತ್ತು. ಆದರೂ ಕೊಹ್ಲಿ ಬಳಗ ಒಂದು ಹಂತದಲ್ಲಿ ಬೌಲಿಂಗ್‌ ಸಮಸ್ಯೆ ಎದುರಿಸಿತ್ತು. ಮೊದಲೆರೆಡು ಏಕದಿನ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ವೈಫಲ್ಯ ಕಂಡಿದ್ದರಿಂದ ಭಾರತ ತಂಡ ಪರಾಭವ ಹೊಂದಿತ್ತು. ಇಲ್ಲಿನ ಮನುಕಾ ಓವಲ್‌ ಮೈದಾನ ದೊಡ್ಡದಾಗಿದ್ದು, ಟಿ20 ಪಂದ್ಯದಲ್ಲಿ ಹೆಚ್ಚಿನ ರನ್‌ ಹರಿದು ಬರುವುದಿಲ್ಲ ಎಂದು ಅಂದಾಜಿಸಲಾಗಿದೆ.

ಧವನ್‌-ರಾಹುಲ್‌ ಆರಂಭಿಕ?:

ರೋಹಿತ್‌ ಶರ್ಮಾ ಗಾಯಗೊಂಡಿರುವ ಕಾರಣದಿಂದ ಆಸ್ಪ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ದೂರ ಉಳಿದಿದ್ದಾರೆ. ಏಕದಿನ ಸರಣಿಯಲ್ಲಿ ರೋಹಿತ್‌ ಜಾಗದಲ್ಲಿ ಮಯಾಂಕ್‌, ಧವನ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ್ದರು. ಉತ್ತಮ ಇನ್ನಿಂಗ್ಸ್‌ ಆಡುವಲ್ಲ ಈ ಜೋಡಿ ವಿಫಲವಾಗಿತ್ತು. ಕಡೆಯ ಪಂದ್ಯದಲ್ಲಿ ಮಯಾಂಕ್‌ ಬದಲು ಶುಭ್‌ಮನ್‌ ಗಿಲ್‌, ಧವನ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ್ದರು. ಆದರೂ ಆರಂಭಿಕ ಜೋಡಿ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಮೊದಲ ಟಿ20 ಪಂದ್ಯದಲ್ಲಿ ಧವನ್‌ ಜೊತೆ ಕೆ.ಎಲ್‌. ರಾಹುಲ್‌ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಐಪಿಎಲ್‌ 13ನೇ ಆವೃತ್ತಿಯಲ್ಲಿ ರಾಹುಲ್‌ ಗರಿಷ್ಠ ಸ್ಕೋರರ್‌ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಧವನ್‌ ಜೊತೆ ರಾಹುಲ್‌ ಓಪನರ್‌ ಆಗಿ ಆಡಲಿದ್ದಾರೆ. ಅಲ್ಲದೇ ಸಂಜು ಸ್ಯಾಮ್ಸನ್‌ ಕೂಡಾ ಆರಂಭಿಕ ಸ್ಥಾನಕ್ಕ ಸ್ಪರ್ಧೆ ನೀಡುತ್ತಿದ್ದಾರೆ.

ಆಸೀಸ್‌ ವಿರುದ್ದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!

ನಾಯಕ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಶ್ರೇಯಸ್‌ ಅಯ್ಯರ್‌ ಬದಲು ಮನೀಶ್‌ ಪಾಂಡೆ ಅಂತಿಮ 11ರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. 3 ಏಕದಿನ ಪಂದ್ಯದಲ್ಲಿ ಶ್ರೇಯಸ್‌, ಆಸೀಸ್‌ ಬೌಲರ್‌ಗಳನ್ನು ಎದುರಿಸುವಲ್ಲಿ ತಿಣುಕಾಡಿದ್ದರು. ಐಪಿಎಲ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಗಮನಸೆಳೆದಿದ್ದ ಹಾರ್ದಿಕ್‌ ಪಾಂಡ್ಯ, ಆಸೀಸ್‌ ವಿರುದ್ಧದ ಕಡೆಯ ಏಕದಿನ ಪಂದ್ಯದಲ್ಲಿ ಅಂತಹದ್ದೇ ಬ್ಯಾಟಿಂಗ್‌ ನಡೆಸಿದ್ದರು. 5ನೇ ಕ್ರಮಾಂಕವನ್ನು ಹಾರ್ದಿಕ್‌ ಭದ್ರಪಡಿಸಿಕೊಂಡಿದ್ದಾರೆ. ಆಲ್ರೌಂಡರ್‌ ವಿಭಾಗವನ್ನು ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ತುಂಬಲಿದ್ದಾರೆ. ಉಳಿದಂತೆ ನಟರಾಜನ್‌ ಟಿ20ಗೆ ಪಾದಾರ್ಪಣೆ ಮಾಡಲಿದ್ದಾರೆ. ಪಾದಾರ್ಪಣೆ ಏಕದಿನ ಪಂದ್ಯದಲ್ಲಿ ನಟರಾಜನ್‌ 2 ವಿಕೆಟ್‌ ಪಡೆದಿದ್ದರು. ಬುಮ್ರಾಗೆ, ನಟರಾಜನ್‌ ಸಾಥ್‌ ನೀಡಲಿದ್ದಾರೆ. 3ನೇ ವೇಗಿಯಾಗಿ ದೀಪಕ್‌ ಚಹರ್‌ ಆಡುವ ಸಾಧ್ಯತೆಯಿದೆ. ಸ್ಪಿನ್‌ ವಿಭಾಗಕ್ಕೆ ಚಹಲ್‌ ಜೀವ ತುಂಬಲಿದ್ದಾರೆ.

ಗಾಯಾಳುಗಳ ಸಮಸ್ಯೆ:

ಆತಿಥೇಯ ಆಸ್ಪ್ರೇಲಿಯಾ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಆರಂಭಿಕ ಡೇವಿಡ್‌ ವಾರ್ನರ್‌, ವೇಗಿ ಮಿಚೆಲ್‌ ಸ್ಟಾರ್ಕ್ ಗಾಯಗೊಂಡಿದ್ದಾರೆ. ವೇಗಿ ಪ್ಯಾಟ್‌ ಕಮಿನ್ಸ್‌ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ನಾಯಕ ಫಿಂಚ್‌ ಜೊತೆಯಲ್ಲಿ ಡಾರ್ಚಿ ಶಾರ್ಟ್‌ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಸ್ಮಿತ್‌ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಉಳಿದಂತೆ ಲಬುಶೇನ್‌, ಮ್ಯಾಕ್ಸ್‌ವೆಲ್‌, ಹೆನ್ರಿಕ್ಸ್‌, ಗ್ರೀನ್‌, ಅಗರ್‌, ಹೇಜಲ್‌ವುಡ್‌ ತಂಡಕ್ಕೆ ಹೆಚ್ಚಿನ ಶಕ್ತಿ ನೀಡಿದ್ದಾರೆ.

ಪಿಚ್‌ ರಿಪೋರ್ಟ್‌: ಇಲ್ಲಿನ ಮನುಕಾ ಓವಲ್‌ ಮೈದಾನದ ಪಿಚ್‌ ಸಮತೋಲನದಿಂದ ಕೂಡಿದೆ. ಆರಂಭದಲ್ಲಿ ಬ್ಯಾಟಿಂಗ್‌ಗೆ, ಸಮಯ ಕಳೆದಂತೆ ಬೌಲರ್‌ಗಳು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಲಿದ್ದಾರೆ. ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಪಂದ್ಯ ಆರಂಭ: ಮಧ್ಯಾಹ್ನ: 1.40ಕ್ಕೆ

ನೇರ ಪ್ರಸಾರ: ಸೋನಿ ಸಿಕ್ಸ್
 

click me!