
ಬೆಂಗಳೂರು(ಜ.19): ಈಗ ದೇಶದೆಲ್ಲೆಡೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಧ್ಯಾನ ಜೋರಾಗಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಟಾಪನೆ ಇದೇ ಜನವರಿ 22ರಂದು ನಿಗದಿಯಾಗಿದೆ. ಅಂದೇ ಅಯೋಧ್ಯೆಯಲ್ಲಿ ನೂತನ ರಾಮ ಮಂದಿರ ಉದ್ಘಾಟನೆ ಕೂಡಾ ಆಗಲಿದೆ. ಹೀಗಿರುವಾಗ ಟೀಂ ಇಂಡಿಯಾ ಪ್ರತಿಭಾನ್ವಿತ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್ ಲಾಕ್‌ಡೌನ್ ವೇಳೆಯಲ್ಲಿ ಬಿಡುವಿದ್ದಾಗ ಶ್ರೀರಾಮ ಹಾಗೂ ಹನುಮಂತನ ಚಿತ್ರ ಬಿಡಿಸಿದ್ದರು. ಇದೀಗ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಮತ್ತೊಮ್ಮೆ ಕುಲ್ದೀಪ್ ಯಾದವ್ ಬಿಡಿಸಿದ್ದ ಈ ಎರಡು ಚಿತ್ರಗಳು ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿವೆ.
ಭಾರತದ ಮಿಸ್ಟ್ರಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಕುಲ್ದೀಪ್ ಯಾದವ್, ಮೈದಾನಕ್ಕಿಳಿದರೇ ಮಾರಕ ಗೂಗ್ಲಿ ಬೌಲಿಂಗ್ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ತಬ್ಬಿಬ್ಬು ಗೊಳಿಸುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಎಡಗೈ ಸ್ಪಿನ್ನರ್ ಓರ್ವ ಅದ್ಭುತ ಚಿತ್ರ ಕಲಾವಿದ ಎನ್ನುವುದು ಬೆಳಕಿಗೆ ಬಂದಿದ್ದೇ, ಕೊರೋನಾ ಕಾಲದಲ್ಲಿ. ಅದರಲ್ಲೂ ಲಾಕ್‌ಡೌನ್ ವೇಳೆಯಲ್ಲಿ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಸ್ತಬ್ಧವಾಗಿದ್ದ ಕಾಲದಲ್ಲಿ ಕುಲ್ದೀಪ್ ಯಾದವ್ ಸುಮ್ಮನೆ ಮನೆಯಲ್ಲೇ ಕುಳಿತಿದ್ದಾಗ ಶ್ರೀರಾಮ ಹಾಗೂ ಶ್ರೀ ಹನುಮಂತನ ಚಿತ್ರ ಬಿಡಿಸಿ ತಾವು ಕ್ರಿಕೆಟ್ ಆಡುವುದಷ್ಟೇ ಅಲ್ಲ, ಅದ್ಬುತವಾಗಿ ಚಿತ್ರಗಳನ್ನು ಬಿಡಿಸುತ್ತೇನೆಂದು ಜಗತ್ತಿನ ಮುಂದೆ ತಮ್ಮನ್ನು ತಾವು ಅನಾವರಣ ಮಾಡಿದ್ದರು.
ಹೀಗಿದೆ ನೋಡಿ ಕುಲ್ದೀಪ್ ಯಾದವ್ ಬಿಡಿಸಿದ ಚಿತ್ರ:
ಸತತ ಪರಿಶ್ರಮ ಹಾಗೂ ಬೌಲಿಂಗ್ ತಂತ್ರಗಾರಿಕೆ ಮೂಲಕ ಐಪಿಎಲ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿದ್ದ ಕುಲ್ದೀಪ್ ಯಾದವ್ 2017ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಪಾದಾರ್ಪಣೆ ಮಾಡಿದ ವರ್ಷದಲ್ಲೇ ಆಸ್ಟ್ರೇಲಿಯಾ ಎದುರು ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ ಕುಲ್ದೀಪ್ ಯಾದವ್, ಆದಷ್ಟು ಬೇಗ ತಂಡದಲ್ಲಿ ತಮ್ಮ ಸ್ಥಾನಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಅಮೋಘ ಪ್ರದರ್ಶನ ತೋರುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾಗಿದ್ದರು. ಇದೀಗ ಕುಲ್ದೀಪ್ ಯಾದವ್, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಜೂನ್ ತಿಂಗಳಿನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.