ಕೇಪ್‌ಟೌನ್‌ ಟೆಸ್ಟ್‌ನಲ್ಲೂ ಭಾರತೀಯರಿಗೆ ಬೌನ್ಸಿ ಪಿಚ್‌ ಸವಾಲು!

Published : Jan 02, 2024, 11:46 AM IST
ಕೇಪ್‌ಟೌನ್‌ ಟೆಸ್ಟ್‌ನಲ್ಲೂ ಭಾರತೀಯರಿಗೆ ಬೌನ್ಸಿ ಪಿಚ್‌ ಸವಾಲು!

ಸಾರಾಂಶ

2 ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತ 0-1 ಹಿನ್ನಡೆಯಲ್ಲಿದೆ. ಹೀಗಾಗಿ ಸರಣಿ ಸೋಲು ತಪ್ಪಿಸಿಕೊಳ್ಳಬೇಕಿದ್ದರೆ ಭಾರತಕ್ಕೆ 2ನೇ ಪಂದ್ಯದಲ್ಲಿ ಗೆಲುವು ಸಿಗಬೇಕಿದೆ. ಆದರೆ ಆಫ್ರಿಕಾದ ವೇಗಿಗಳ ಮುಂದೆ ಪ್ರತಿರೋಧ ತೋರಿ ಪಂದ್ಯ ಗೆಲ್ಲುವುದೇ ಭಾರತದ ಮುಂದಿರುವ ದೊಡ್ಡ ಸವಾಲು.

ಕೇಪ್‌ಟೌನ್‌(ಜ.02): ಇತಿಹಾಸ ಸೃಷ್ಟಿಸುವ ಕಾತರದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಟೀಂ ಇಂಡಿಯಾ ಆಟಗಾರರು ಹರಿಣಗಳ ವೇಗದ ಮುಂದೆ ತತ್ತರಿಸಿ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಸೋಲು ಕಂಡಿದ್ದರು. ಇದರ ಆಘಾತದಿಂದ ಇನ್ನಷ್ಟೇ ಹೊರಬರುತ್ತಿರುವ ಭಾರತಕ್ಕೆ, ಬುಧವಾರದಿಂದ ಕೇಪ್‌ಟೌನ್‌ನಲ್ಲಿ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ನಲ್ಲೂ ದ.ಆಫ್ರಿಕಾದ ವಿಶ್ವ ಶ್ರೇಷ್ಠ ವೇಗಿಗಳಿಂದ ಬೌನ್ಸರ್‌ ಸವಾಲು ಎದುರಾಗುವುದು ಖಚಿತ.

2 ಪಂದ್ಯಗಳ ಸರಣಿಯಲ್ಲಿ ಸದ್ಯ ಭಾರತ 0-1 ಹಿನ್ನಡೆಯಲ್ಲಿದೆ. ಹೀಗಾಗಿ ಸರಣಿ ಸೋಲು ತಪ್ಪಿಸಿಕೊಳ್ಳಬೇಕಿದ್ದರೆ ಭಾರತಕ್ಕೆ 2ನೇ ಪಂದ್ಯದಲ್ಲಿ ಗೆಲುವು ಸಿಗಬೇಕಿದೆ. ಆದರೆ ಆಫ್ರಿಕಾದ ವೇಗಿಗಳ ಮುಂದೆ ಪ್ರತಿರೋಧ ತೋರಿ ಪಂದ್ಯ ಗೆಲ್ಲುವುದೇ ಭಾರತದ ಮುಂದಿರುವ ದೊಡ್ಡ ಸವಾಲು.

ವಿದಾಯ ಟೆಸ್ಟ್‌ಗೂ ಮುನ್ನ ಏಕದಿನಕ್ಕೆ ಡೇವಿಡ್ ವಾರ್ನರ್‌ ಬೈಬೈ

ವೇಗಿಗಳಿಗೆ ನೆರವು: ಆರಂಭಿಕ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಸೆಂಚೂರಿಯನ್‌ ಕ್ರೀಡಾಂಗಣದ ಪಿಚ್‌ನಂತೆಯೇ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದ ಪಿಚ್‌ ಕೂಡಾ ವೇಗಿಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಪಿಚ್‌ನಲ್ಲಿ ಹುಲ್ಲು ಬೆಳೆದಿರುವ ಕಾರಣ ಹೆಚ್ಚಿನ ಬೌನ್ಸ್‌ ಕೂಡಾ ಇರಲಿದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಮೊದಲ ಪಂದ್ಯದಲ್ಲಿ 19 ವಿಕೆಟ್‌ ಎಗರಿಸಿದ್ದ ಆಫ್ರಿಕಾ ವೇಗಿಗಳು ಮತ್ತೊಮ್ಮೆ ಭಾರತೀಯ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಆದರೆ ಮೊದಲ ಟೆಸ್ಟ್‌ನಲ್ಲಿ ಭಾರತದ ವೇಗಿಗಳು ಹೆಚ್ಚೇನೂ ಪರಿಣಾಮಕಾರಿಯಾಗಿರಲಿಲ್ಲ. ಬೂಮ್ರಾ, ಮೊಹಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಶಾರ್ದೂಲ್‌ ಠಾಕೂರ್‌ 90 ಓವರ್‌ಗಳನ್ನು ಎಸೆದು 350ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಭಾರತೀಯ ಬೌಲರ್‌ಗಳು ಕೂಡಾ 2ನೇ ಟೆಸ್ಟ್‌ನಲ್ಲಿ ಆಫ್ರಿಕಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಬೌನ್ಸರ್‌ಗಳ ಮೊರೆ ಹೋಗುವ ಕಾತರದಲ್ಲಿದ್ದಾರೆ. ಈ ನಡುವೆ ಭಾರತೀಯ ಬ್ಯಾಟರ್‌ಗಳು ಕೂಡಾ ಕಠಿಣ ಅಭ್ಯಾಸ ನಡೆಸುತ್ತಿದ್ದು, ಆಫ್ರಿಕಾ ವೇಗಿಗಳನ್ನು ಎದುರಿಸಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲಿವಿದೆ.

ಬರ್ಗರ್‌ ಎದುರಿಸಲು ಕೊಹ್ಲಿ ಕಠಿಣ ಅಭ್ಯಾಸ

ಹೊಸ ವರ್ಷದ ಮೊದಲ ದಿನ ಭಾರತೀಯ ಆಟಗಾರರು ಮೈದಾನದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಅದರಲ್ಲೂ ವಿಶೇಷವಾಗಿ ವಿರಾಟ್‌ ಕೊಹ್ಲಿ ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. ಅವರು ಹೆಚ್ಚಾಗಿ ಎಡಗೈ ವೇಗಿಗಳ ಸವಾಲನ್ನು ಎದುರಿಸಿದರು. ದ.ಆಫ್ರಿಕಾ ಯುವ ಎಡಗೈ ವೇಗಿ ನಂಡ್ರೆ ಬರ್ಗರ್‌ ಆರಂಭಿಕ ಟೆಸ್ಟ್‌ನಲ್ಲಿ ಕೊಹ್ಲಿಯನ್ನು ಹೆಚ್ಚಾಗಿ ಕಾಡಿದ್ದರು. ಆದರೆ ಭಾರತ ತಂಡದಲ್ಲಿ ಎಡಗೈ ವೇಗಿಗಳು ಇಲ್ಲದ ಕಾರಣ, ಸೋಮವಾರ ನೆಟ್ಸ್‌ನಲ್ಲಿ ಕೊಹ್ಲಿ ಎಡಗೈ ನೆಟ್‌ ಬೌಲರ್‌ ಹಾಗೂ ಎಡಗೈ ಥ್ರೋಡೌನ್‌ ತಜ್ಞರ ಬೌಲರ್‌ಗಳನ್ನು ಎದುರಿಸಲು ಪ್ರಮುಖ ಒತ್ತು ಕೊಟ್ಟರು.

ಕಿಂಗ್‌ ಕೊಹ್ಲಿ ಕಿರೀಟಕ್ಕೆ ಇನ್ನೊಂದು ಗರಿ: ಫುಟ್ಬಾಲ್‌ ಲೆಜೆಂಡ್‌ ಸೋಲಿಸಿ 2023ರ ಪ್ಯೂಬಿಟಿ ಅಥ್ಲೀಟ್ ಪ್ರಶಸ್ತಿ!

ಇನ್ನು ಶಾರ್ಟ್‌ ಬಾಲ್‌ಗಳ ಮುಂದೆ ಕಳಪೆ ದಾಖಲೆ ಹೊಂದಿರುವ ಶ್ರೇಯಸ್‌ ಅಯ್ಯರ್‌ ನೆಟ್ಸ್‌ನಲ್ಲಿ ಹೆಚ್ಚಾಗಿ ಶಾರ್ಟ್‌ ಬಾಲ್‌ಗಳನ್ನು ಎದುರಿಸಿದರು. ಅವರು ಶ್ರೀಲಂಕಾದ ಎಡಗೈ ಥ್ರೋಡೌನ್‌ ತಜ್ಞ ನುವಾನ್‌ ಸೇನಾವಿರತ್ನೆ ಅವರ ಎಸೆತಗಳನ್ನು ಹೆಚ್ಚಾಗಿ ಎದುರಿಸಿದರು.

ವರ್ಷಾಂತ್ಯದಲ್ಲಿ ಸೋಲು: 2024ರಲ್ಲಿ ಜಯದ ಆರಂಭ?

ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಸೋಲುವುದರೊಂದಿಗೆ 2023ನ್ನು ಸೋಲಿನೊಂದಿಗೆ ಕೊನೆಗೊಳಿಸಿದೆ. ಆದರೆ 2024ರಲ್ಲಿ ಗೆಲುವಿನ ಆರಂಭ ಪಡೆಯವ ಕಾತರದ ಟೀಂ ಇಂಡಿಯಾ ಆಟಗಾರರದ್ದು. ಅಲ್ಲದೆ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿರುವ ಭಾರತ, ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ