
ಕೋಲ್ಕತಾ: ವೇಗ, ಸ್ವಿಂಗ್ ಹಾಗೂ ಬೌನ್ಸರ್‌ಗಳ ಮೂಲಕ ಹಾಲಿ ವಿಶ್ವ ಚಾಂಪಿಯನ್ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಭಾರತ ತಂಡ, ಮೊದಲ ಟೆಸ್ಟ್‌ನ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಜಸ್‌ಪ್ರೀತ್ ಬೂಮ್ರಾರ ಮಾರಕ ದಾಳಿ ಮುಂದೆ ರನ್ ಗಳಿಸಲು ತಿಣುಕಾಡಿದ ಹರಿಣ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 159 ರನ್‌ಗೆ ಆಲೌಟ್ ಆಯಿತು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟದಲ್ಲಿ 37 ರನ್ ಕಲೆಹಾಕಿದ್ದು, ಇನ್ನೂ 122 ರನ್ ಹಿನ್ನಡೆಯಲ್ಲಿದೆ.
ಭಾರತಕ್ಕೆ ಈ ಪಂದ್ಯದಲ್ಲಿ ಟಾಸ್ ಗೆಲುವಿನ ಭಾಗ್ಯ ಸಿಗಲಿಲ್ಲ. ಅಚ್ಚರಿ ಎಂಬಂತೆ ನಾಲ್ವರು ತಜ್ಞ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ ಶುಭ್‌ಮನ್ ಗಿಲ್ ಫೀಲ್ಡಿಂಗ್‌ಗೆ ಇಳಿಸಲ್ಪಟ್ಟಿತು. ಬ್ಯಾಟರ್‌ಗಳಿಗೆ ನೆರವಾಗುವಂತೆ ಕಂಡುಬಂದ ಪಿಚ್‌ನಲ್ಲಿ ಉತ್ತಮ ಆರಂಭ ಪಡೆದ ದ.ಆಫ್ರಿಕಾ, ಮೊದಲ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತು. ಬುಮ್ರಾ ನಿಖರ ದಾಳಿ ನಡೆಸಿದರೂ, ಮೊಹಮ್ಮದ್ ಸಿರಾಜ್ ತಮ್ಮ 3 ಓವರ್‌ಗಳ ಸ್ಪೆಲ್‌ನಲ್ಲಿ 25 ರನ್ ಬಿಟ್ಟುಕೊಟ್ಟರು. ಹೀಗಾಗಿ 8ನೇ ಓವರ್‌ನಲ್ಲೇ ಅಕ್ಷರ್ ಪಟೇಲ್ ದಾಳಿಗಿಳಿದರು.
ತಮ್ಮ ಮೊದಲ ಸ್ಪೆಲ್‌ನ 6ನೇ ಓವರ್‌ನಲ್ಲಿ ಬೂಮ್ರಾ ಭಾರತಕ್ಕೆ ಮೊದಲ ಸಿಹಿ ನೀಡಿದರು. ರಿಕೆಲ್ಟನ್(23)ರನ್ನು ಬೌಲ್ಡ್ ಮಾಡಿದ ಬೂಮ್ರಾ, ತಮ್ಮ ಮುಂದಿನ ಓವರ್‌ನಲ್ಲಿ ಏಡನ್ ಮಾರ್ಕ್‌ರಮ್(31) ಅವರನ್ನೂ ಔಟ್ ಮಾಡಿದರು. 16ನೇ ಓವರ್‌ನಲ್ಲಿ ನಾಯಕ ತೆಂಬಾ ಬವುಮಾ(3) ನಿರ್ಗಮಿಸಿದರು. ಊಟದ ವಿರಾಮದ ವೇಳೆಗೆ ತಂಡ 3 ವಿಕೆಟ್‌ಗೆ 105 ರನ್ ಗಳಿಸಿತ್ತು.
2ನೇ ಅವಧಿಯಲ್ಲಿ ಪ್ರತಿ ರನ್‌ಗೂ ಪರದಾಡಿದ ದ.ಆಫ್ರಿಕಾ ಸತತ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಯಾರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಸಿರಾಜ್ ಲಯ ಕಂಡುಕೊಂಡು ವೆರೈನ್, ಮಾರ್ಕೊ ಯಾನ್ಸನ್‌ರನ್ನು ಔಟ್ ಮಾಡಿದರೆ, ಕೊನೆ ಇಬ್ಬರು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿ ಬುಮ್ರಾ 5 ವಿಕೆಟ್ ಪೂರ್ಣಗೊಳಿಸಿದರು. ಸಿರಾಜ್, ಕುಲ್ದೀಪ್ ತಲಾ 2 ವಿಕೆಟ್ ಕಿತ್ತರು.
ಬಳಿಕ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಉತ್ತಮ ಬ್ಯಾಟಿಂಗ್‌ನ ಮುನ್ಸೂಚನೆ ನೀಡಿದ್ದ ಜೈಸ್ವಾಲ್ 12 ರನ್‌ಗೆ ಔಟಾದರು. ಸಕೆ.ಎಲ್.ರಾಹುಲ್ 59 ಎಸೆತಗಳಲ್ಲಿ ಔಟಾಗದೆ 13 ರನ್ ಗಳಿಸಿದ್ದು, ವಾಷಿಂಗ್ಟನ್ ಸುಂದರ್(38 ಎಸೆತಕ್ಕೆ 6 ರನ್) ಜೊತೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಕೋರ್: ದ.ಆಫ್ರಿಕಾ ಮೊದಲ ಇನ್ನಿಂಗ್ಸ್ 159/10 (ಮಾರ್ಕ್‌ರಮ್ 31, ಮುಲ್ಡರ್ 24, ಜೊರ್ಜಿ 24, ಬೂಮ್ರಾ 2-27, ಕುಲ್ದೀಪ್ 2-36, ಸಿರಾಜ್ 2-47), ಭಾರತ ಮೊದಲ ಇನ್ನಿಂಗ್ಸ್ 37/1(1ನೇ ದಿನದಂತ್ಯಕ್ಕೆ) (ರಾಹುಲ್ ಔಟಾಗದೆ 13, ಜೈಸ್ವಾಲ್ 12, ಯಾನ್ಸನ್ 1-11)
ದಿಗ್ಗಜ ಕ್ರಿಕೆಟಿಗ, ಕರ್ನಾಟಕದ ಅನಿಲ್ ಕುಂಬ್ಳೆ ಅವರು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬೆಲ್ ಬಾರಿಸುವ ಮೂಲಕ ಸಾಂಪ್ರದಾಯಿಕವಾಗಿ ಟೆಸ್ಟ್ ಪಂದ್ಯಕ್ಕೆ ಚಾಲನೆ ನೀಡಿದರು.
ಗಂಭೀರ್ ಕೋಚ್ ಆಗಿ ನೇಮಕಗೊಂಡ ಬಳಿಕ ಭಾರತ ತಂಡ ಪ್ರತಿ ಪಂದ್ಯಕ್ಕೂ ಹಲವು ಪ್ರಯೋಗಳನ್ನು ನಡೆಸುತ್ತಿದೆ. ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದರು. ಕಳೆದ 12 ತಿಂಗಳುಗಳಲ್ಲಿ ಭಾರತ ಪರ 3ನೇ ಕ್ರಮಾಂಕದಲ್ಲಿ ಆಡಿದ 6ನೇ ಬ್ಯಾಟರ್ ವಾಷಿಂಗ್ಟನ್. ಕಳೆದೊಂದು ವರ್ಷದಲ್ಲಿ ಸಾಯಿ ಸುದರ್ಶನ್, ಕರುಣ್ ನಾಯರ್, ಶುಭ್‌ಮನ್ ಗಿಲ್, ದೇವದತ್ ಪಡಿಕ್ಕಲ್, ಕೆ.ಎಲ್.ರಾಹುಲ್ 3ನೇ ಕ್ರಮಾಂಕದಲ್ಲಿ ಆಡಿದ್ದಾರೆ.
ಟೆಸ್ಟ್‌ನಲ್ಲಿ ಬುಮ್ರಾ 16 ಬಾರಿ 5 ವಿಕೆಟ್ ಗೊಂಚಲ ಪಡೆದಿದ್ದು, ಕರ್ನಾಟಕದ ದಿಗ್ಗಜ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ದಾಖಲೆ ಸರಿಗಟ್ಟಿದರು. ಆರ್.ಅಶ್ವಿನ್ 37 ಬಾರಿ ಈ ಸಾಧನೆ ಮಾಡಿದ್ದು, ಭಾರತ ಪರ ಗರಿಷ್ಠ ಬಾರಿ 5+ ವಿಕೆಟ್ ಕಿತ್ತ ಆಟಗಾರ. ಅನಿಲ್ ಕುಂಬ್ಳೆ(35), ಹರ್ಭಜನ್ ಸಿಂಗ್(25), ಕಪಿಲ್ ದೇವ್(23) ನಂತರದ ಸ್ಥಾನಗಳಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.