'ಬ್ರದರ್ ನನಗೆ 30% ಮಾತ್ರ ಇಂಗ್ಲೀಷ್ ಗೊತ್ತು'; ಪಾಕ್ ವೇಗಿ ನಸೀಮ್ ಶಾ ಹೀಗಂದಿದ್ದೇಕೆ..? ವಿಡಿಯೋ ವೈರಲ್

By Naveen KodaseFirst Published Nov 30, 2022, 12:54 PM IST
Highlights

ಪಾಕಿಸ್ತಾನ-ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಪಾಕ್ ವೇಗಿ ನಸೀಂ ಶಾ
ನನಗೆ 30% ಮಾತ್ರ ಇಂಗ್ಲೀಷ್ ಬರುವುದು ಎಂದು ಸತ್ಯ ಒಪ್ಪಿಕೊಂಡ ಪಾಕ್ ವೇಗಿ

ರಾವುಲ್ಪಿಂಡಿ(ನ.30): ಪಾಕಿಸ್ತಾನದ ಉದಯೋನ್ಮುಖ ವೇಗದ ಬೌಲರ್ ನಸೀಂ ಶಾ, ತವರಿನಲ್ಲಿ ಇಂಗ್ಲೆಂಡ್ ಎದುರಿನ ಸರಣಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಇದೇ ವೇಳೆ ಬಹುತೇಕ ಮಾಧ್ಯಮದವರ ಎಲ್ಲಾ ಪ್ರಶ್ನೆಗೆ ಉತ್ತರಿಸಿದ ನಸೀಂ ಶಾ, ಇಂಗ್ಲೀಷ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು. ಪಾಕಿಸ್ತಾನಿ ಕ್ರಿಕೆಟಿಗರು ಸಾಮಾನ್ಯವಾಗಿ ಇಂಗ್ಲೀಷ್‌ನಲ್ಲಿ ಮಾತನಾಡಲು ಹಿಂದೇಟು ಹಾಕುವುದನ್ನು ಈ ಹಿಂದೆಯೂ ನೋಡಿದ್ದೇವೆ. ಇದೀಗ ನಸೀಂ ಶಾ ಕೂಡಾ ತಮಾಶೆಯಾಗಿಯೇ ಇಂಗ್ಲೀಷ್ ಕುರಿತಂತೆ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ವಿಶ್ವಕ್ರಿಕೆಟ್‌ನಲ್ಲಿ ಭರವಸೆಯ ವೇಗಿ ಎಂದೇ ಬಿಂಬಿಸಲ್ಪಟ್ಟಿರುವ ಪಾಕಿಸ್ತಾನದ ನೀಳಾಕಾಯದ ವೇಗಿ ನಸೀಂ ಶಾ, ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರು ಹಿಂದಿಯಲ್ಲಿಯೇ ಪ್ರಶ್ನಿಸಿದಕ್ಕೆ ಸುಲಲಿತವಾಗಿಯೇ ಉತ್ತರಿಸಿದರು. ಆದರೆ ಓರ್ವ ಇಂಗ್ಲೀಷ್ ಪತ್ರಕರ್ತ ಮೇಲಿಂದ ಮೇಲೆ ಇಂಗ್ಲೀಷ್‌ನಲ್ಲಿಯೇ ಪ್ರಶ್ನೆ ಕೇಳಿದ್ದಕ್ಕೆ ಎಲ್ಲರೂ ಜೋರಾಗಿ ನಗುವಂತಹ ಉತ್ತರ ನೀಡಿದ್ದಾರೆ.

ವಿದೇಶಿ ಪತ್ರಕರ್ತನೊಬ್ಬ, ಈ ವರ್ಷಾರಂಭದಲ್ಲಿ 40ನೇ ವರ್ಷಕ್ಕೆ ಕಾಲಿಟ್ಟ ಜೇಮ್ಸ್ ಆಂಡರ್‌ಸನ್‌, ಈ ವಯಸ್ಸಿನಲ್ಲೂ ಅದ್ಭುತ ಫಾರ್ಮ್‌ ಹೊಂದಿದ್ದಾರೆ. ಅವರ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದರು. ಇದಕ್ಕೆ, 'ಇದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ನಾನು ಕೂಡಾ ವೇಗದ ಬೌಲರ್ ಆಗಿರುವುದರಿಂದ, ವೇಗದ ಬೌಲಿಂಗ್ ಮಾಡುವುದು ಎಷ್ಟು ಕಷ್ಟ ಎನ್ನುವುದರ ಅರಿವು ನನಗಿದೆ. ಅವರೊಬ್ಬ ದಿಗ್ಗಜ ಆಟಗಾರ ಹಾಗೂ ಅವರು ಈ ಹಂತ ತಲುಪಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ನಾವು ಯಾವಾಗೆಲ್ಲ ಅವರನ್ನು ಭೇಟಿಯಾಗುತ್ತೇವೋ ಆಗೆಲ್ಲಾ ಅವರಿಂದ ಏನಾದರೊಂದು ಕಲಿಯಲು ಪ್ರಯತ್ನಿಸುತ್ತೇವೆ. ಅವರಿಗೀಗ 40 ವರ್ಷವಾದರೂ ಇಷ್ಟೊಂದು ಫಿಟ್ ಆಗಿದ್ದಾರೆ ಎಂದರೆ ಅದು ಅವರೆಷ್ಟು ಪರಿಶ್ರಮ ಪಡುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ' ಎಂದು ನಸೀಂ ಶಾ ಹೇಳಿದ್ದಾರೆ.

17 ವರ್ಷಗಳ ಬಳಿಕ ಮೊದಲ ಟೆಸ್ಟ್‌ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದ ಇಂಗ್ಲೆಂಡ್..!

ಇಷ್ಟಕ್ಕೆ ಸುಮ್ಮನಾಗದ ವಿದೇಶಿ ಪತ್ರಕರ್ತ, ಆಂಡರ್‌ಸನ್, ನಿಮ್ಮಷ್ಟು ವೇಗವಾಗಿ ಬೌಲಿಂಗ್ ಮಾಡದೇ ಹೋದರೂ, ಅವರಲ್ಲಿ ಬೇರೆಯ ಕೌಶಲಗಳಿವೆ. ಇದರ ಬಗ್ಗೆ ನೀವೇನೆನ್ನುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಸೀಂ ಶಾ, 'ಬ್ರದರ್‌ ನನಗೆ ಕೇವಲ 30% ಮಾತ್ರ ಇಂಗ್ಲೀಷ್ ಗೊತ್ತು. ಅದು ಈಗ ಖಾಲಿ ಆಗಿದೆ' ಎಂದು ನಗುನಗುತ್ತಲೇ ಉತ್ತರ ನೀಡಿದರು. ನಸೀಂ ಶಾ ಉತ್ತರ ಕೇಳಿ ಪತ್ರಕರ್ತರು ಒಂದು ಕ್ಷಣ ನಗೆಗಡಲಲ್ಲಿ ತೇಲಿದರು.

Brother mast kheliye aur badhiya kheliye. English na aana koi badi baat nahi hai.

Even our Neeraj Chopra can’t speak in English, but what he has achieved is incredible ♥️ Mehnat aur achievement ke aage ye sab chize chhoti ho jati hai. 🤗 pic.twitter.com/RDOy1L2p2N

— Avinash Aryan (@AvinashArya09)

ಮುಂದುವರೆದು, ಬ್ರದರ್, ನಾನು ಈಗಾಗಲೇ ಹೇಳಿದ್ದೇನಲ್ಲ, ಅವರೊಬ್ಬ ದಿಗ್ಗಜ ಬೌಲರ್. ಜಗತ್ತಿನಾದ್ಯಂತ ಸಾಕಷ್ಟು ಕ್ರಿಕೆಟ್ ಆಡಿರುವುದರಿಂದ ವಿಕೆಟ್ ಹೇಗೆ ಕಬಳಿಸಬೇಕು ಎನ್ನುವುದು ಅವರಿಗೆ ಗೊತ್ತಿದೆ. ಆ ಕಾರಣಕ್ಕಾಗಿಯೇ ಅವರು ಜಗತ್ತಿನ ದಿಗ್ಗಜ ಬೌಲರ್ ಆಗಿ ಬೆಳೆದು ನಿಂತಿದ್ದಾರೆ ಎಂದು ನಸೀಂ ಶಾ ಹೇಳಿದ್ದಾರೆ.

 

ಇಂಗ್ಲೆಂಡ್ ತಂಡವು ಬರೋಬ್ಬರಿ 17 ವರ್ಷಗಳ ಬಳಿಕ ಟೆಸ್ಟ್ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಟೆಸ್ಟ್‌ ಚಾಂಪಿಯನ್‌ ಭಾಗವಾಗಿದ್ದು, ಡಿಸೆಂಬರ್ 01ರಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಡಿಸೆಂಬರ್ 09ರಂದು ಮುಲ್ತಾನ್‌ ಹಾಗೂ ಡಿಸೆಂಬರ್ 17ರಂದು ಕರಾಚಿಯಲ್ಲಿ ಮೂರನೇ ಟೆಸ್ಟ್‌ ಪಂದ್ಯವನ್ನಾಡಲಿದೆ.

ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಬೆನ್ ಸ್ಟೋಕ್ಸ್‌(ನಾಯಕ), ಜೇಮ್ಸ್‌ ಆಂಡರ್‌ಸನ್, ಹ್ಯಾರಿ ಬ್ರೂಕ್, ಜಾಕ್‌ ಕ್ರಾವ್ಲಿ, ಬೆನ್ ಡಕೆಟ್‌, ಬೆನ್ ಫೋಕ್ಸ್, ವಿಲ್‌ ಜೇಕ್ಸ್‌, ಕೇಟನ್‌ ಜೆನ್ನಿಂಗ್ಸ್‌, ಜಾಕ್ ಲೀಚ್, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜೆಮಿ ಓವರ್‌ಟನ್, ಓಲಿ ಪೋಪ್, ಓಲಿ ರಾಬಿನ್‌ಸನ್‌, ಜೋ ರೂಟ್‌, ಮಾರ್ಕ್‌ ವುಡ್‌, ರೆಹನ್‌ ಅಹಮನ್‌.

ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡ ಹೀಗಿದೆ ನೋಡಿ:
ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹಮದ್, ಅಝರ್ ಅಲಿ, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಇಮಾಮ್ ಉಲ್-ಹಕ್, ಮೊಹಮ್ಮದ್ ನವಾಜ್, ವಾಸೀಂ ಜೂನಿಯರ್, ನಸೀಂ ಶಾ, ನೂಮನ್ ಅಲಿ, ಸಲ್ಮಾನ್ ಅಲಿ ಆಘಾ, ಸರ್ಫರಾಜ್ ಅಹಮದ್, ಸೌದ್ ಶಕೀಲ್, ಶಾನ್ ಮಸೂದ್ ಮತ್ತು ಜಹಿದ್ ಮೆಹಮೂದ್.

click me!