
ಬ್ರಿಸ್ಬೇನ್(ಜ.19): ಶುಭ್‌ಮನ್ ಗಿಲ್ ಹಾಗೂ ರಿಷಭ್ ಪಂತ್ ಸ್ಪೋಟಕ ಅರ್ಧಶತಕ ಹಾಗೂ ಚೇತೇಶ್ವರ್ ಪೂಜಾರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಗಾಬಾ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್‌ಗಳ ಐತಿಹಾಸಿಕ ಜಯ ದಾಖಲಿಸಿದೆ. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಮತ್ತೊಮ್ಮೆ ಭಾರತ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.
"
ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯವನ್ನು ರೋಚಕವಾಗಿ ಜಯಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. 328 ರನ್‌ಗಳ ಸವಾಲಿನ ಗುರಿಯನ್ನು ಭಾರತ 3 ವಿಕೆಟ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಇದರೊಂದಿಗೆ ಬ್ರಿಸ್ಬೇನ್‌ನಲ್ಲಿ ಬರೋಬ್ಬರಿ 32 ವರ್ಷಗಳ ಬಳಿಕ ಆಸ್ಟ್ರೇಲಿಯಾ ಸೋಲಿನ ಕಹಿಯುಂಡಿದೆ.
ರೋಚಕ ಘಟ್ಟದತ್ತ ಬ್ರಿಸ್ಬೇನ್ ಟೆಸ್ಟ್; ಸರಣಿ ಗೆಲ್ಲಲು ಟೀಂ ಇಂಡಿಯಾಗೆ ಬೇಕಿದೆ 145 ರನ್
ಬ್ರಿಸ್ಬೇನ್ ಟೆಸ್ಟ್ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾ ತಂಡವು ಭಾರತಕ್ಕೆ 328 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತಾದರೂ ಆ ಬಳಿಕ ಶುಭ್‌ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಶುಭ್‌ಮನ್ ಗಿಲ್ 91 ರನ್ ಬಾರಿಸಿ ಕೇವಲ 9 ರನ್ ಅಂತರದಲ್ಲಿ ಚೊಚ್ಚಲ ಶತಕವಂಚಿತರಾದರು. ಇನ್ನು ಅತ್ಯಂತ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಬರೋಬ್ಬರಿ 196 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಈ ಮೂಲಕ ಅತಿ ಹೆಚ್ಚು ಎಸೆತಗಳನ್ನು ಎದುರಿಸಿ 50 ರನ್ ಪೂರೈಸಿದ ಸಾಧನೆ ಮಾಡಿದ್ಧಾರೆ. ಅಂತಿಮವಾಗಿ ಪೂಜಾರ 211 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 56 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.
ಪಂತ್ ಝಲಕ್: ಗಿಲ್ ಹಾಗೂ ಪೂಜಾರ ಉತ್ತಮ ಆರಂಭದ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮನಮೋಹಕ ಇನಿಂಗ್ಸ್ ಕಟ್ಟಿದರು. ಬಲಿಷ್ಠ ಆಸ್ಟ್ರೇಲಿಯಾ ಬೌಲಿಂಗ್ ಪಡೆಯನ್ನು ಪಂತ್ ಮನಬಂದಂತೆ ದಂಡಿಸಿದರು. ರಿಷಭ್ ಪಂತ್ 138 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 89 ರನ್ ಬಾರಿಸಿ ಅಜೇಯರಾಗುಳಿದರು. ಪಂತ್‌ಗೆ ಉತ್ತಮ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ 29 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಅನಾಯಾಸವಾಗಿ ಗೆದ್ದುಕೊಂಡಿತ್ತು. ಇನ್ನು ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಆತಿಥೇಯರಿಗೆ ಭಾರತ ಪಂಚ್ ನೀಡಿತ್ತು. ಇನ್ನು ಸಿಡ್ನಿ ಟೆಸ್ಟ್ ಪಂದ್ಯವನ್ನು ರೋಚಕವಾಗಿ ಡ್ರಾ ಮಾಡಿಕೊಂಡಿದ್ದ ಭಾರತ, ಇದೀಗ ಬ್ರಿಸ್ಬೇನ್‌ನಲ್ಲಿ ಮತ್ತೆ ಚಾರಿತ್ರಿಕ ಸಾಧನೆ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.