ಲಯನ್‌ಗೆ ವಿಕೆಟ್‌ ಒಪ್ಪಿಸಿ ಕುಖ್ಯಾತಿಗೆ ಪಾತ್ರವಾದ ರೋಹಿತ್ ಶರ್ಮಾ

By Suvarna NewsFirst Published Jan 16, 2021, 5:05 PM IST
Highlights

ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್‌ ಲಯನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ ರೋಹಿತ್ ಶರ್ಮಾ ಬೇಡವಾದ ದಾಖಲೆಗೆ ಪಾತ್ರವಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ‌

ಬ್ರಿಸ್ಬೇನ್‌(ಜ.16): ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಬ್ರಿಸ್ಬೇನ್‌ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್‌ ಲಯನ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.

ಉತ್ತಮ ಆರಂಭ ಪಡೆದಿದ್ದ ರೋಹಿತ್ ಶರ್ಮಾ ಬೃಹತ್ ಇನಿಂಗ್ಸ್‌ ಕಟ್ಟಬಹುದು ಎಂದು ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ 44 ರನ್‌ ಬಾರಿಸಿದ್ದ ರೋಹಿತ್ ಶರ್ಮಾ ಆಫ್‌ಸ್ಪಿನ್ನರ್ ಲಯನ್ ಬೌಲಿಂಗ್‌ನಲ್ಲಿ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಜತೆಗೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕುಖ್ಯಾತಿಗೆ ಪಾತ್ರರಾಗಿದ್ದಾರೆ. 

ಹೌದು, ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅವರನ್ನು ಅತಿ ಹೆಚ್ಚುಬಾರಿ ಪೆವಿಲಿಯನ್ನಿಗಟ್ಟಿದ ಬೌಲರ್ ಎನ್ನುವ ದಾಖಲೆ ಇದೀಗ ನೇಥನ್ ಲಯನ್ ಪಾಲಾಗಿದೆ. ನೇಥನ್ ಲಯನ್ ಎದುರು ರೋಹಿತ್ ಶರ್ಮಾ 6 ಬಾರಿ ವಿಕೆಟ್‌ ಒಪ್ಪಿಸಿದ್ದಾರೆ. ಈ ಮೊದಲು ಕಗಿಸೋ ರಬಾಡ ಎದುರು ಹಿಟ್‌ಮ್ಯಾನ್‌ 5 ಬಾರಿ ವಿಕೆಟ್ ಒಪ್ಪಿಸಿದ್ದರು. ಇದೀಗ ಲಯನ್‌ ಹಿಟ್‌ಮ್ಯಾನ್ ಅವರನ್ನು ಅತಿ ಹೆಚ್ಚು ಕಾಡಿದ ಬೌಲರ್ ಎನಿಸಿದ್ದಾರೆ.

ಬ್ರಿಸ್ಬೇನ್ ಟೆಸ್ಟ್: ಮಳೆಗೆ ಆಹುತಿಯಾದ ಎರಡನೇ ದಿನದಾಟ

ಇದುವರೆಗೂ ನೇಥನ್‌ ಲಯನ್‌ 258 ಎಸೆತಗಳನ್ನು ಹಾಕಿ ರೋಹಿತ್ ಶರ್ಮಾ ಅವರನ್ನು 6 ಬಾರಿ ಪೆವಿಲಿಯನ್ನಿಗಟ್ಟಿದ್ದರೆ, ರಬಾಡ ಕೇವಲ 204 ಎಸೆತಗಳನ್ನು ಹಾಕಿ ಹಿಟ್‌ಮ್ಯಾನ್‌ ರೋಹಿತ್‌ರನ್ನು 5 ಬಾರಿ ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

click me!