ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಬುಶೇನ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲು ಇಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ರಿಸ್ಬೇನ್(ಜ.15): ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಆಕರ್ಷಕ ಶತಕದ ನೆರವಿನಿಂದ ಬ್ರಿಸ್ಬೇನ್ ಟೆಸ್ಟ್‌ನ ಮೊದಲ ದಿನ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 274 ರನ್ ಬಾರಿಸಿದ್ದು ಬೃಹತ್ ಮೊತ್ತದತ್ತ ದಾಪುಗಾಲು ಇಡಲಾರಂಭಿದಿದೆ.
ಇಲ್ಲಿನ ಗಾಬಾ ಮೈದಾನದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್ ಮಾಡಲಿಳಿದ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಹ್ಯಾರಿಸ್ ಅವರನ್ನು ಒಂದಂಕಿ ಮೊತ್ತಕ್ಕೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಟೀಂ ಇಂಡಿಯಾ ವೇಗಿಗಳು ಯಶಸ್ವಿಯಾದರು.
ಲಬುಶೇನ್ ಶತಕದ ಆಸರೆ: ಕೇವಲ 17 ರನ್ ಗಳಿಸುವಷ್ಟರಲ್ಲೇ ಆಸ್ಟ್ರೇಲಿಯಾದ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಬಳಿಕ ಮೂರನೇ ವಿಕೆಟ್‌ಗೆ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಮಿತ್ ವಿಕೆಟ್ ಪತನದ ಬಳಿಕ ರಹಾನೆ ಕೈಚೆಲ್ಲಿದ ಕ್ಯಾಚ್‌ನ ಜೀವದಾನ ಪಡೆದ ಲಬುಶೇನ್ ಭಾರತದ ಅನುನುಭವಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಭಾರತದ ವಿರುದ್ದ ಲಬುಶೇನ್ ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಮಿಂಚಿದರು. ಒಟ್ಟು 204 ಎಸೆತಗಳನ್ನು ಎದುರಿಸಿದ ಲಬುಶೇನ್ 9 ಬೌಂಡರಿ ಸಹಿತ 108 ರನ್ ಬಾರಿಸಿ ಟಿ ನಟರಾಜನ್‌ಗೆ ಎರಡನೇ ಬಲಿಯಾದರು.
ಲಬುಶೇನ್ ಫಿಫ್ಟಿ; ಭಾರತಕ್ಕೆ ಆಸೀಸ್ ತಿರುಗೇಟು..!
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ 87 ಎಸೆತಗಳಲ್ಲಿ 45 ರನ್ ಬಾರಿಸಿ ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕ್ಯಾಮರೋನ್ ಗ್ರೀನ್(28) ಹಾಗೂ ನಾಯಕ ಟಿಮ್ ಪೇನ್(38) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತ ಪರ ಟಿ ನಟರಾಜನ್ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.