ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತ, 15 ರನ್‌ಗೆ ಸಿಡ್ನಿ ಥಂಡರ್ ಆಲೌಟ್!

By Suvarna News  |  First Published Dec 16, 2022, 8:35 PM IST

ಟಿ20 ಲೀಗ್ ಟೂರ್ನಿಗಳಲ್ಲಿ ಗರಿಷ್ಠ ಸ್ಕೋರ್, ಗರಿಷ್ಠ ಸಿಕ್ಸರ್ ಮೂಲಕ ಹಲವು ದಾಖಲೆಗಳು ನಿರ್ಮಾಣವಾಗಿದೆ. ಇದರ ಜೊತೆಗೆ ಕಡಿಮೆ ಮೊತ್ತದ ಅಪಖ್ಯಾತಿಗೂ ಗುರಿಯಾದ ಪಂದ್ಯಗಳಿವೆ. ಇದೀಗ ಪ್ರತಿಷ್ಠಿತ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಸಿಡ್ನಿ ಥಂಡರ್ ಕೇವಲ 15 ರನ್‌ಗೆ ಆಲೌಟ್ ಆಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.


ಸಿಡ್ನಿ(ಡಿ.16): ಆಸ್ಟ್ರೇಲಿಯಾ ಬಿಗ್‌ಬ್ಯಾಶ್ ಲೀಗ್ ಟೂರ್ನಿ ಜನಪ್ರಿಯ. ಪ್ರತಿ ಬಾರಿ ಹೊಡಿ ಬಡಿ ಆಟದ ಮೂಲಕ ಸುದ್ದಿಯಾಗುವ ಬಿಗ್‌ಬ್ಯಾಶ್ ಲೀಗ್ ಈ ಬಾರಿ ಅತ್ಯಲ್ಪ ಮೊತ್ತದ ಕೆಟ್ಟ ದಾಖಲೆಗೆ ಗುರಿಯಾಗಿದೆ. ಸಿಡ್ನಿ ಥಂಡರ್ ಹಾಗೂ ಆಡಿಲೇಡ್ ಸ್ಟ್ರಕರ್ಸ್ ನಡುವಿನ ಪಂದ್ಯ ಇದೀಗ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿದೆ. ಕಾರಣ ಸಿಡ್ನಿ ಥಂಡರ್ ಕೇವಲ 15 ರನ್‌ಗೆ ಆಲೌಟ್ ಆಗಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತೀ ಕಡಿಮೆ ಮೊತ್ತವಾಗಿದೆ. ವಿಶೇಷ ಅಂದರೆ ಸಿಡ್ನಿ ಥಂಡರ್ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್, ರಿಲೆ ರೂಸೋ, ಡೇನಿಯಲ್ ಸ್ಯಾಮ್ಸ್ ಸೇರಿದಂತೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದರೂ 15 ರನ್‌ಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತ್ಯಲ್ಪ ಮೊತ್ತ
15 ರನ್, ಸಿಡ್ನಿ ಥಂಡರ್ v ಆಡಿಲೇಡ್ ಸ್ಟ್ರೈಕರ್ಸ್(2022)
21 ರನ್, ಟರ್ಕಿ v ಜೆಕ್ ಗಣರಾಜ್ಯ(2019)
26 ರನ್, ಲೆಸೊಥೋ v ಉಗಾಂಡ(2021)
28 ರನ್, ಟರ್ಕಿ v ಲಕ್ಸಮಬರ್ಗ್(2019)
30 ರನ್, ಥಾಯ್ಲೆಂಡ್ v ಮಲೇಷಿಯಾ( 2022)

Tap to resize

Latest Videos

ಬಲಿಷ್ಠ ತಂಡವೊಂದು ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವುದು ಇದೇ ಮೊದಲು. ಮೊದಲು ಬ್ಯಾಟಿಂಗ್ ಮಾಡಿದ ಆಡಿಲೇಡ್ ಸ್ಟ್ರೈಕರ್ಸ್ 9 ವಿಕೆಟ್ ನಷ್ಟಕ್ಕೆ 139 ರನ್ ಸಿಡಿಸಿತ್ತು. 140 ರನ್ ಟಾರ್ಗೆಟ್ ಚೇಸಿಂಗ್‌ಗೆ ಕಣಕ್ಕಿಳಿದ ಸಿಡ್ನಿ ಸ್ಟ್ರೈಕರ್ಸ್ 5.5 ಓವರ್‌‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಗಳಿಸಿದ್ದು ಕೇವಲ 15 ರನ್ ಮಾತ್ರ. ತಂಡದ ಪರ ಗರಿಷ್ಠ ಮೊತ್ತ ಸಿಡಿಸಿದ ಕೀರ್ತಿ ಬ್ರೆಂಡೆನ್ ಡೊಗೆಟ್‌ಗೆ ಸಲ್ಲಲಿದೆ. ಬ್ರೆಂಡೆನ್ 4 ರನ್ ಸಿಡಿಸಿದ್ದಾರೆ.

ಅಲೆಕ್ಸ್ ಹೇಲ್ಸ್ 0, ಮಾಥ್ಯೂ ಗೈಕ್ಸ್ 0, ರಿಲೆ ರೂಸೋ 3, ನಾಯಕ ಜೇಸನ್ ಸಂಗಾ 0, ಅಲೆಕ್ಸ್ ರೊಸ್ 2, ಡೇನಿಯಲ್ ಸ್ಯಾಮ್ಸ್ 1, ಒಲಿವರ್ ಡೇವಿಸ್ 1, ಕ್ರಿಸ್ ಗ್ರೀನ್ 0, ಗುರಿಂದರ್ ಸಂದು 0, ಬ್ರೆಂಡೆನ್ ಡೊಗೆಟ್ 4, ಫಜಲಖ್ ಫಾರೂಖಿ 1 ರನ್ ಸಿಡಿಸಿದ್ದಾರೆ. ಇತರ 3 ರನ್ ನೆರವಿನಿಂದ 15 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ.

ಆಡಿಲೇಡ್ ಸ್ಟ್ರೈಕರ್ಸ್ ಪರ ಹೆನ್ಲಿ ಥಾರ್ಟನ್ 5 ವಿಕೆಟ್ ಕಬಳಿಸಿದರೆ, ವೆಸ ಅಗರ್ 4 ಹಾಗೂ ಮಾಥ್ಯೂ ಶಾರ್ಟ್ 1 ವಿಕೆಟ್ ಕಬಳಿಸಿದ್ದರೆ. ಪಂದ್ಯದ ಮೊದಲ ಪವರ್ ಪ್ಲೇ ಮುಗಿಯುವ ಮುನ್ನೇವೇ ಪಂದ್ಯವೇ ಮುಗಿದಿದೆ.

click me!