
ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಸುಮಾರು ಒಂದೂವರೆ ವರ್ಷಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗುತ್ತಿದೆ. ಹೀಗಿರುವಾಗಲೇ ಬೆಂಗಳೂರಿನಲ್ಲಿ ಐದನೇ ಟಿ20 ಮ್ಯಾಚ್ ನಡಿಯೋದೇ ಡೌಟ್ ಎನ್ನಲಾಗುತ್ತಿದೆ.
ಹೌದು, ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 5ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಕೆಲವು ದಿನಗಳ ಬಿಡುವಿನ ನಂತರ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಬೆಂಗಳೂರು ನಗರದಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗಲಿದೆ.
ಇದು ಶನಿವಾರದ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಯಿದೆ. ಅಲ್ಲದೆ, ಶುಕ್ರವಾರ ಭಾರತ ಹಾಗೂ ವಿಂಡೀಸ್ ಆಟಗಾರರು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಬೇಕಿದೆ. ಅದರೆ ಮಳೆ ಸುರಿದರೆ ಅಭ್ಯಾಸ ಶಿಬಿರ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಉಭಯ ತಂಡಗಳ ನಡುವಿನ ಸರಣಿಯ ಆರಂಭಿಕ 4 ಪಂದ್ಯಗಳ ಬಳಿಕ 2-2 ಸಮಬಲಗೊಂಡಿದ್ದು, ಶನಿವಾರದ ಪಂದ್ಯ ಫೈನಲ್ ಎನಿಸಿಕೊಂಡಿದೆ.
2025ರ ಜೂ.4ರಂದು ಆರ್ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಭೀಕರ ಕಾಲ್ತುಳಿದ ಬಳಿಕ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಬ್ರೇಕ್ ಬಿದ್ದಿತ್ತು. ಹೀಗಾಗಿ ಕಳೆದ ವರ್ಷ ಬೆಂಗಳೂರಿನಲ್ಲೇ ಆಯೋಜನೆಗೊಂಡಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಬೆಂಗಳೂರಿನಿಂದ ಎತ್ತಂಗಡಿಯಾಗಿತ್ತು. ಇದಾಗಿ ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಭಾರತದಾದ್ಯಂತ ನಡೆದರೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಇಂಟರ್ ನ್ಯಾಷನಲ್ ಮ್ಯಾಚ್ ನಡೆದಿರಲಿಲ್ಲ. ಆದರೆ ಇದೀಗ ಅ.17ರ ಶನಿವಾರ ಇಲ್ಲಿ ಭಾರತ-ವೆಸ್ಟ್ಇಂಡೀಸ್ 5ನೇ ಟಿ20 ಪಂದ್ಯಕ್ಕೆ ಸ್ಟೇಡಿಯಂ ಸಜ್ಜಾಗಿದೆ. ಸಂಪೂರ್ಣ ಮ್ಯಾಚ್ ನಡೆಯಲು ಮಳೆರಾಯ ಅವಕಾಶ ಮಾಡಿಕೊಡುತ್ತೋ ಇಲ್ಲವೋ ಕಾದು ನೋಡಬೇಕಿದೆ. ಮಳೆ ಬಂದು ನಿಂತರೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್ಏರ್ ಸಿಸ್ಟಮ್ ಇರುವುದರಿಂದ ಪಂದ್ಯ ಚುರುಕಾಗಿ ಆರಂಭವಾಗಲಿದೆ. ಆದರೆ, ನಿರಂತರವಾಗಿ ಮಳೆ ಸುರಿದರೇ, ಪಂದ್ಯ ಆಯೋಜನೆ ಕಷ್ಟಸಾಧ್ಯವಾಗಲಿದೆ.
ದುಬೈ: ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಭಾರತದ ನಾಯಕ ಶ್ರೇಯಸ್ ಅಯ್ಯರ್ ಜೀವನಶ್ರೇಷ್ಠ 4ನೇ ಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ಪಟ್ಟಿಯಲ್ಲಿ ಶ್ರೇಯಸ್ 3 ಸ್ಥಾನ ಪ್ರಗತಿ ಸಾಧಿಸಿದರು. ಸದ್ಯ ಅಗ್ರ-5ರಲ್ಲಿ ಮೂವರು ಭಾರತೀಯರಿದ್ದಾರೆ. ಇಶಾನ್ ಕಿಶನ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಅಭಿಷೇಕ್ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ತಿಲಕ್ ವರ್ಮಾ 9ನೇ, ಸಂಜು ಸ್ಯಾಮ್ಸನ್ 27ನೇ ಸ್ಥಾನಕ್ಕೇರಿದ್ದಾರೆ.
ಟಿ20 ಬೌಲರ್ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 9ನೇ, ಜಸ್ಪ್ರೀತ್ ಬೂಮ್ರಾ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ 8ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.