
ಮುಂಬೈ(ಏ.02): ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಕೂಡಾ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯರನ್ನು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಕಿಚಾಯಿಸಿದ್ದಾರೆ. ಟಾಸ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರೇಕ್ಷಕರು ರೋಹಿತ್, ರೋಹಿತ್ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ.
ಈ ವೇಳೆ ಟಾಸ್ ಪ್ರಕ್ರಿಯೆ ನಡೆಸಿಕೊಡುತ್ತಿದ್ದ ಸಂಜಯ್ ಮಂಜ್ರೇಕರ್ ಅವರು ಸರಿಯಾಗಿ ನಡೆದುಕೊಳ್ಳಿ ಎಂದು ಅಭಿಮಾನಿಗಳಿಗೆ ಸೂಚಿಸಿದ್ದಾರೆ. ಬಳಿಕ ಹಾರ್ದಿಕ್ ಮಾತನಾಡುವಾಗಲೂ ಹಲವರು ಹಾರ್ದಿಕ್‌ರನ್ನು ಕಿಚಾಯಿಸಿದ್ದು, ರೋಹಿತ್ ಪರ ಘೋಷಣೆ ಕೂಗಿದ್ದಾರೆ. ಈ ಮೊದಲು ಅಹಮದಾಬಾದ್, ಹೈದರಾಬಾದ್‌ನಲ್ಲೂ ಹಾರ್ದಿಕ್ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗಿತ್ತು ನೋಡಿ ಆ ವಿಡಿಯೋ:
ಕ್ರೀಡಾಂಗಣದ ಮುಂದೆ ಹಾರ್ದಿಕ್ ಪಾಂಡ್ಯರ ಜೆರ್ಸಿ ಮಾರಾಟಕ್ಕಿಲ್ಲ!
ಮುಂಬೈ: ಯಾವುದೇ ಪಂದ್ಯವಿದ್ದರೂ ಆಯಾಯ ತಂಡಗಳ ನಾಯಕರು, ತಾರಾ ಆಟಗಾರರ ಜೆರ್ಸಿಗಳು ಕ್ರೀಡಾಂಗಣದ ಹೊರಗಡೆ ಮಾರಾಟಕ್ಕಿಟ್ಟಿರುತ್ತಾರೆ. ಅಪಾರ ಪ್ರಮಾಣದ ಅಭಿಮಾನಿಗಳು ತಮ್ಮಿಷ್ಟದ ಆಟಗಾರರ ಹೆಸರಿನ ಜೆರ್ಸಿಯನ್ನು ಧರಿಸಿ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ.
IPL 2024: ಲಖನೌ ವಿರುದ್ಧ ಆರ್‌ಸಿಬಿಗಿದ್ಯಾ ಗೆಲ್ಲುವ ಲಕ್?
ಆದರೆ ಮಂಗಳವಾರ ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ವಾಂಖೇಡೆ ಕ್ರೀಡಾಂಗಣದ ಬಳಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯರ ಜೆರ್ಸಿ ಮಾರಾಟಕ್ಕೆ ಇರಲಿಲ್ಲ. ಬೀದಿ ಬದಿ ವ್ಯಾಪಾರಿಗಳು ರೋಹಿತ್ ಶರ್ಮಾ ಹೆಸರಿನ ಜೆರ್ಸಿಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿದ್ದರು. ಹಾರ್ದಿಕ್‌ರ ಜೆರ್ಸಿ ಕೇಳಿದರೂ ಇಲ್ಲ ಎನ್ನುವ ಉತ್ತರ ಬರುತ್ತಿತ್ತು ಎಂದು ಹಲವರು ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್‌ಗೆ ಹ್ಯಾಟ್ರಿಕ್ ಸೋಲಿನ ಶಾಕ್!
ಮುಂಬೈ: 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೊಳಗಾಗಿದೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈಗೆ ಮಂಗಳವಾರ ರಾಜಸ್ಥಾನ ವಿರುದ್ಧ 6 ವಿಕೆಟ್ ಸೋಲು ಎದುರಾಯಿತು. ಹ್ಯಾಟ್ರಿಕ್ ಗೆಲುವು ಕಂಡ ರಾಜಸ್ಥಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮೊದಲು ಬ್ಯಾಟ್ ಮಾಡಿದ ಮುಂಬೈ 9 ವಿಕೆಟ್ ಕಳೆದುಕೊಂಡು ಕೇವಲ 125 ರನ್ ಕಲೆಹಾಕಿತು. ಸುಲಭ ಗುರಿಯನ್ನು ರಾಜಸ್ಥಾನ 15.3 ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿತು.
ಯಶಸ್ವಿ ಜೈಸ್ವಾಲ್ 10, ಜೋಸ್ ಬಟ್ಲರ್ 13, ನಾಯಕ ಸಂಜು ಸ್ಯಾಮ್ಸನ್ 12 ರನ್ ಗಳಿಸಿ ಔಟಾದಾಗ ತಂಡ ಸಂಕಷ್ಟಕ್ಕೀಡಾಯಿತು. ಆದರೆ ರಿಯಾನ್ ಪರಾಗ್ ಮತ್ತೆ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧವೂ ಅಬ್ಬರಿಸಿದ್ದ ರಿಯಾನ್ ಈ ಬಾರಿ 39 ಎಸೆತಗಳಲ್ಲಿ 54 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯುವ ವೇಗಿ ಆಕಾಶ್ ಮಧ್ವಾಲ್ 3 ವಿಕೆಟ್ ಪಡೆದರು.
IPL 2024 ರೋಹಿತ್ ಶರ್ಮಾ ಔಟಾಗಿದ್ದಕ್ಕೆ ಸಂಭ್ರಮಿಸಿದ ವೃದ್ಧನ ಹತ್ಯೆ!
ಬ್ಯಾಟಿಂಗ್ ವೈಫಲ್ಯ: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಮೊದಲ ಓವರ್‌ನಲ್ಲೇ ಆಘಾತಕ್ಕೊಳಗಾಯಿತು. ರೋಹಿತ್ ಶರ್ಮಾ ಹಾಗೂ ನಮನ್ ಧೀರ್ ಇಬ್ಬರನ್ನೂ ತಮ್ಮ ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಅಟ್ಟಿದ ಟ್ರೆಂಟ್ ಬೌಲ್ಟ್, ತಮ್ಮ 2ನೇ ಓವರಲ್ಲಿ ಡೆವಾಲ್ಡ್ ಬ್ರೆವಿಸ್‌ರನ್ನು ಔಟ್ ಮಾಡಿದರು. ಈ ಮೂವರೂ ಶೂನ್ಯಕ್ಕೆ ನಿರ್ಗಮಿಸಿದರು.
ಬಳಿಕ ತಿಲಕ್ ವರ್ಮಾ(32) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(34) ಅಲ್ಪ ಹೋರಾಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. ಚಹಲ್ 4 ಓವರಲ್ಲಿ 11 ರನ್‌ಗೆ 3, ಬೌಲ್ಟ್ 22 ರನ್‌ಗೆ 3 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.