
ನವದೆಹಲಿ(ಜೂ.30): ರಾಷ್ಟ್ರೀಯ ಕ್ರೀಡಾಪ್ರಶಸ್ತಿಗಳಾದ ಖೇಲ್ ರತ್ನ, ಅರ್ಜುನ ಪ್ರಶಸ್ತಿಗೆ ಕನ್ನಡಿಗ ಕೆ.ಎಲ್. ರಾಹುಲ್ ಸೇರಿದಂತೆ ಐವರು ಹೆಸರುಗಳನ್ನು ಬಿಸಿಸಿಐ ಶಿಫಾರಸು ಮಾಡಿದೆ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹಾಗೂ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ.
ಇನ್ನು ಅರ್ಜುನ ಪ್ರಶಸ್ತಿಗೆ ಅನುಭವಿ ಕ್ರಿಕೆಟಿಗ ಶಿಖರ್ ಧವನ್, ಕೆ.ಎಲ್. ರಾಹುಲ್ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಅರ್ಜುನ ಪ್ರಶಸ್ತಿಗೆ ಮಹಿಳಾ ಕ್ರಿಕೆಟರ್‌ಗಳ ಹೆಸರನ್ನು ಶಿಫಾರಸು ಮಾಡಿಲ್ಲ, ಆದರೆ ಖೇಲ್ ರತ್ನ ಪ್ರಶಸ್ತಿಗೆ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಒಲಿಂಪಿಕ್ ವರ್ಷದಲ್ಲಿ ಕ್ರೀಡಾ ಇಲಾಖೆ ನೇತೃತ್ವದ ಸಮಿತಿ ಮಿಥಾಲಿ ರಾಜ್‌ಗೆ ಖೇಲ್ ರತ್ನ ಪ್ರಶಸ್ತಿ ನೀಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಮಿಥಾಲಿ ರಾಜ್ ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ವರ್ಷಗಳನ್ನು ಪೂರೈಸಿದ್ದಾರೆ. 38 ವರ್ಷದ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಬಾರಿಸುವ ಮೂಲಕ ಅತಿಹೆಚ್ಚು ರನ್ ಬಾರಿದ ಆಟಗಾರ್ತಿ ಎನ್ನುವ ದಾಖಲೆಯನ್ನು ಹೊಂದಿದ್ದಾರೆ.
ಅರ್ಜುನ ಪ್ರಶಸ್ತಿಗೆ ಅಂಕಿತಾ, ಪ್ರಜ್ನೇಶ್ ಹೆಸರು ಶಿಫಾರಸು
ಮಿಥಾಲಿ ರಾಜ್ ಅವರಂತೆಯೇ ರವಿಚಂದ್ರನ್ ಅಶ್ವಿನ್ ಕೂಡಾ ಈಗಾಗಲೇ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಶ್ವಿನ್ ಇದುವರೆಗೂ 79 ಟೆಸ್ಟ್ ಪಂದ್ಯಗಳನ್ನಾಡಿ 413 ವಿಕೆಟ್ ಕಬಳಿಸಿದ್ದಾರೆ. ಇನ್ನು ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಕ್ರಮವಾಗಿ 150 ಹಾಗೂ 42 ವಿಕೆಟ್ ಕಬಳಿಸಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಅಶ್ವಿನ್ ಸೀಮಿತ ಓವರ್‌ಗಳ ತಂಡದಿಂದ ಹೊರಗುಳಿದಿದ್ದಾರೆ.
ಇನ್ನು ಶಿಖರ್ ಧವನ್ ಸದ್ಯ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.