ಟೀಂ ಇಂಡಿಯಾ ಆಟಗಾರರಿಗೆ ಇನ್ನು ಕಠಿಣ ಫಿಟ್ನೆಸ್‌ ಪರೀಕ್ಷೆ..!

By Kannadaprabha NewsFirst Published Jan 23, 2021, 11:25 AM IST
Highlights

ಟೀಂ ಇಂಡಿಯಾದಲ್ಲಿ  ಸ್ಥಾನ ಪಡೆಯಲು ಎರಡನೇ ಹಂತದ ಫಿಟ್ನೆಸ್‌ ಟೆಸ್ಟ್‌ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಯೋ ಯೋ ಟೆಸ್ಟ್ ಪಾಸ್‌ ಮಾಡುವುದರ ಜತೆಗೆ ನಿಗದಿತ ಸಮಯದೊಳಗೆ ಆಟಗಾರರು 2 ಕಿಲೋ ಮೀಟರ್ ಓಡಿ ಗುರಿ ತಲುಪಬೇಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ(ಜ.23): ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೈಹಿಕ ಸಾಮರ್ಥ್ಯಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಭಾರತ ಕ್ರಿಕೆಟ್‌ ತಂಡ ತನ್ನ ಆಟಗಾರರಿಗೆ ಕಠಿಣ ಫಿಟ್ನೆಸ್‌ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಈಗಿರುವ ಯೋ-ಯೋ ಟೆಸ್ಟ್‌ನಲ್ಲಿ ಕನಿಷ್ಠ 17.1 ಅಂಕಗಳನ್ನು ಗಳಿಸುವುದರೊಂದಿಗೆ ಆಟಗಾರರು ಎಂಟೂವರೆ ನಿಮಿಷಗಳಲ್ಲಿ 2 ಕಿಲೋ ಮೀಟರ್‌ ಓಟವನ್ನು ಪೂರ್ಣಗೊಳಿಸಬೇಕಿದೆ.

ಅದರಲ್ಲೂ ವೇಗದ ಬೌಲರ್‌ಗಳು 8 ನಿಮಿಷ 15 ಸೆಕೆಂಡ್‌ಗಳಲ್ಲಿ 2 ಕಿ.ಮೀ. ಓಟ ಮುಗಿಸಬೇಕು ಎನ್ನುವ ಪರೀಕ್ಷೆಯನ್ನು ಜಾರಿಗೆ ತರಲಿದೆ. ಇನ್ಮುಂದೆ ಆಟಗಾರರು ತಂಡಕ್ಕೆ ಪ್ರವೇಶ ಪಡೆಯುವ ಮುನ್ನ ಕಡ್ಡಾಯವಾಗಿ ಎರಡೂ ಫಿಟ್ನೆಸ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಿದೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶಾಕ್‌; ಸ್ಟಾರ್ ಆಟಗಾರ ಔಟ್..!

ಹೊಸ ಫಿಟ್ನೆಸ್‌ ಪರೀಕ್ಷೆಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ‍್ಯದರ್ಶಿ ಜಯ್‌ ಶಾ ಒಪ್ಪಿಗೆ ಸೂಚಿಸಿದ್ದು, ಇಂಗ್ಲೆಂಡ್‌ ವಿರುದ್ಧ ಮುಂದಿನ ತಿಂಗಳು ಆರಂಭಗೊಳ್ಳಲಿರುವ ಸೀಮಿತ ಓವರ್‌ ಸರಣಿಯಿಂದಲೇ ಜಾರಿಗೆ ಬರಲಿದೆ. ಆಸ್ಪ್ರೇಲಿಯಾ ಪ್ರವಾಸದಿಂದ ಹಿಂದಿರುಗಿರುವ ಆಟಗಾರರಿಗೆ ಈ ಬಾರಿ ವಿನಾಯಿತಿ ನೀಡಲಾಗಿದೆ. ಆದರೆ ಇಂಗ್ಲೆಂಡ್‌ ವಿರುದ್ಧ ಟಿ20, ಏಕದಿನ ತಂಡಕ್ಕೆ ಆಯ್ಕೆ ನಿರೀಕ್ಷೆಯಲ್ಲಿರುವ ಆಟಗಾರರು 2 ಕಿ.ಮೀ ಓಟದ ಪರೀಕ್ಷೆಗೆ ಒಳಪಡಬೇಕಿದೆ. ಈ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೂ ಈ ಪರೀಕ್ಷೆ ಮಹತ್ವದಾಗಲಿದೆ. ಈ ವರ್ಷ ಫೆಬ್ರವರಿ, ಜೂನ್‌ ಹಾಗೂ ಆಗಸ್ಟ್‌ ಇಲ್ಲವೇ ಸೆಪ್ಟೆಂಬರ್‌ನಲ್ಲಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಟಗಾರರಿಗೆ ಇರುವ ಸವಾಲೇನು?

ಎಂಟೂವರೆ ನಿಮಿಷದಲ್ಲಿ 2 ಕಿ.ಮೀ ಓಡುವುದು ಕ್ರಿಕೆಟಿಗರಿಗೆ ಸ್ವಲ್ಪ ಮಟ್ಟಿಗಿನ ಸವಾಲಾಗಲಿದೆ. ಎಲೈಟ್‌ ಅಥ್ಲೀಟ್‌ಗಳು ಅಂದರೆ ವೃತ್ತಿಪರ ಓಟಗಾರರು 2 ಕಿ.ಮೀ ಪೂರ್ಣಗೊಳಿಸಲು ಕನಿಷ್ಠ 6 ನಿಮಿಷ ತೆಗೆದುಕೊಳ್ಳುತ್ತಾರೆ. ಹವ್ಯಾಸಿ ಓಟಗಾರರ 15 ನಿಮಿಷಗಳನ್ನು ತೆಗೆದಕೊಳ್ಳುತ್ತಾರೆ. ಹೆಚ್ಚೂ ಕಡಿಮೆ ವೃತ್ತಿಪರ ಓಟಗಾರರ ರೀತಿಯಲ್ಲೇ ಭಾರತೀಯ ಆಟಗಾರರು ಫಿಟ್ನೆಸ್‌ ಪರೀಕ್ಷೆಯಲ್ಲಿ ಓಡಬೇಕಿದೆ.

ಉಪಯೋಗಗಳೇನು?

* ಆಟಗಾರರ ವೇಗ, ಮಿತಿ, ಮಾನಸಿಕ ಸದೃಢತೆಯನ್ನು ಪರೀಕ್ಷಿಸಬಹುದು.

* ನಿಗದಿತ ಸಮಯದಲ್ಲಿ ಓಟ ಪೂರ್ಣಗೊಳಿಸಬೇಕಿರುವ ಕಾರಣ, ಮೋಸ ಮಾಡಲು ಆಗುವುದಿಲ್ಲ.

* ಯೋ-ಯೋ ಟೆಸ್ಟ್‌ಗಿಂತಲೂ ಇದು ಹೆಚ್ಚು ಪರಿಣಾಮಕಾರಿ
 

click me!