ಬಿಸಿಸಿಐ ಕಮೆಂಟೇಟರ್, ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ವಿರುದ್ಧ ಟೀಕೆಗಳು ಕೇಳಿ ಬರುತ್ತಲೇ ಇತ್ತು. ಕೊನೆಗೆ ಅಭಿಮಾನಿಗಳು ಪಂದ್ಯಕ್ಕೆ ಕಮೆಂಟರಿ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಮಂಜ್ರೇಕರ್ ಕಮೆಂಟೇಟರಿ ಮಾತ್ರ ಬೇಡ ಎಂದು ಬಿಸಿಸಿಐಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಇದೀಗ ಬಿಸಿಸಿಐ ಮಂಜ್ರೇಕರ್‌ಗೆ ಕೊಕ್ ನೀಡಿದೆ ಎನ್ನುತ್ತಿವೆ ವರದಿ.
ಮುಂಬೈ(ಮಾ.14): ಕಳೆದ 6 ರಿಂದ 8 ತಿಂಗಳು ಮಾಜಿ ಕ್ರಿಕೆಟಿಗ, ಬಿಸಿಸಿಐ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ನಿರೀಕ್ಷಿಸಿದ ರೀತಿ ಇರಲಿಲ್ಲ. ಕಮೆಂಟೇಟರಿಯಲ್ಲಿ ಒಂದಲ್ಲ ಒಂದು ವಿವಾದ ಸೃಷ್ಟಿಸಿದ ಮಂಜ್ರೇಕರ್, ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡಿದ್ದರು. 2019ರ ವಿಶ್ವಕಪ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ ವಿರುದ್ದ ನೀಡಿದ ಹೇಳಿಕೆ, ಸಹ ಕಮೆಂಟೇಟರ್ ಹರ್ಷಾ ಬೋಗ್ಲೆ ವಿರುದ್ಧ ನೀಡಿದ ಹೇಳಿಕೆ ಸೇರಿದಂತೆ ಹಲವು ಪ್ರಕರಣಗಳು ಮಂಜ್ರೇಕರ್ ಕಮೆಂಟರಿ ಕರಿಯರ್‌ಗೆ ಕಪ್ಪು ಚುಕ್ಕೆ ಇಟ್ಟಿತು.
ಇದನ್ನೂ ಓದಿ: ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು
undefined
ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆದ ಬಳಿಕ, ಸಂಜಯ್ ಮಂಜ್ರೇಕರ್ ಬಿಸಿಸಿಐನ ಖಾಯಂ ಕಮೆಂಟೇಟರ್ ಆಗಿ ಬಡ್ತಿ ಪಡೆದಿದ್ದಾರೆ. ಆದರೆ ಕಮೆಂಟರಿ ಬದಲು ವಿವಾದಿತ ಹೇಳಿಕೆ ನೀಡುತ್ತಾ ವಿವಾದ ಸೃಷ್ಟಿಸಿದ್ದಾರೆ. ಮಂಜ್ರೇಕರ್ ಕಮೆಂಟರಿಗೆ ಅಭಿಮಾನಿಗಳು ಬೇಸತ್ತು ಹೋಗಿದ್ದಾರೆ. ಟ್ವಿಟರ್ ಹಾಗೂ ಇತರ ಸೋಶಿಯಲ್ ಮಿಡಿಯಾ ಮೂಲಕ ಬಿಸಿಸಿಐಗೆ ಮಂಜ್ರೇಕರ್ ತೆಗೆದುಹಾಕುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಮೆಂಟರಿ ಬದಲು ಸಲಹೆ ನೀಡಲು ಹೋದ ಮಂಜ್ರೇಕರ್‌ಗೆ ಮಂಗಳಾರತಿ!
ವಿವಾದಗಳನ್ನು ಸೂಕ್ಷ್ಮವಾಗಿ ಗಮಿಸಿದ್ದ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿದ ಸುಮ್ಮನಿತ್ತು. ಇದೀಗ ಮಂಜ್ರೇಕರ್‌ಗೆ ಕೊಕ್ ನೀಡಲಾಗಿದೆ ಅನ್ನೋ ವರದಿಗಳು ಬಂದಿದೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಿಂದಲೂ ಹೊರಗಿಡಲಾಗಿದೆ ಅನ್ನೋ ಮಾಹಿತಿ ಕೇಳಿ ಬರುತ್ತಿದೆ. ಮಾಧ್ಯಮ ವರದಿಗಳ ಕುರಿತು ಬಿಸಿಸಿಐ ವಕ್ತಾರ ಪ್ರತಿಕ್ರಿಯೆ ನೀಡಿದ್ದು, ಮಂಜ್ರೇಕರ್ ಕೆಲಸ ಬಿಸಿಸಿಐಗೆ ತೃಪ್ತಿತಂದಿಲ್ಲ. ಕಮೇಂಟೇಟರ್ ಹುದ್ದೆಯಿಂದ ಗೇಟ್ ಪಾಸ್ ನೀಡಿರುವ ಕುರಿತು ಬಿಸಿಸಿಐ ಉತ್ತರ ನೀಡಲಿದೆ ಎಂದಿದ್ದಾರೆ.