ದೇಸಿ ಕ್ರಿಕೆಟಿಗರ ವೇತನ ಏರಿಕೆ: ಕಿರಿಯ, ಮಹಿಳಾ ಕ್ರಿಕೆಟಿಗರಿಗೂ BCCI ಬಂಪರ್‌!

By Kannadaprabha NewsFirst Published Sep 21, 2021, 9:59 AM IST
Highlights

* ದಿನಕ್ಕೆ 35000 ಇದ್ದ ವೇತನ 60000 ವರೆಗೂ ಏರಿಕೆ

* ಕಿರಿಯ, ಮಹಿಳಾ ಕ್ರಿಕೆಟಿಗರಿಗೂ ಬಿಸಿಸಿಐ ಬಂಪರ್‌

* ದೇಸಿ ಕ್ರಿಕೆಟಿಗರ ವೇತನ ಏರಿಕೆ

ನವದೆಹಲಿ(ಸೆ.21): ದೇಸಿ ಕ್ರಿಕೆಟಿಗರಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ. ಆಟಗಾರರ ವೇತನ ಏರಿಕೆ ಮಾಡಿರುವ ಬಿಸಿಸಿಐ, ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ 2020-21ರ ಋುತುವಿಗೆ ಪರಿಹಾರವನ್ನೂ ಘೋಷಿಸಿದೆ. ಸೋಮವಾರ ನಡೆದ ಬಿಸಿಸಿಐನ 9ನೇ ಅಪೆಕ್ಸ್‌ ಸಮಿತಿ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

40ಕ್ಕೂ ಹೆಚ್ಚು ದೇಸಿ ಪಂದ್ಯಗಳನ್ನು ಆಡಿರುವ ರಣಜಿ ಆಟಗಾರರಿಗೆ ಪ್ರತಿ ದಿನಕ್ಕೆ 35000 ರು. ಬದಲು 60000 ರು. ಸಂಭಾವನೆ ಸಿಗಲಿದೆ. 21ರಿಂದ 40 ಪಂದ್ಯಗಳನ್ನು ಆಡಿರುವ ಆಟಗಾರರಿಗೆ ದಿನಕ್ಕೆ 50000 ರು., 20ಕ್ಕಿಂತ ಕಡಿಮೆ ಪಂದ್ಯ ಆಡಿರುವ ಆಟಗಾರರಿಗೆ ದಿನಕ್ಕೆ 40000 ರು., ಸಂಭಾವನೆ ಘೋಷಿಸಲಾಗಿದೆ.

ಕಿರಿಯ ಕ್ರಿಕೆಟಿಗರ ವೇತನವನ್ನೂ ಏರಿಕೆ ಮಾಡಲಾಗಿದೆ. ಅಂಡರ್‌-23 ಕ್ರಿಕೆಟಿಗರಿಗೆ ಪ್ರತಿ ಪಂದ್ಯಕ್ಕೆ 17500 ರು. ಬದಲು 25000 ರು., ಅಂಡರ್‌-19 ಕ್ರಿಕೆಟಿಗರಿಗೆ 10500 ರು. ಬದಲು 20000 ರು., ಅಂಡರ್‌-16 ಕ್ರಿಕೆಟಿಗರು 3500 ರು., ಬದಲು 7000 ರು. ಪಡೆಯಲಿದ್ದಾರೆ.

ಮಹಿಳಾ ಆಟಗಾರ್ತಿಯರ ವೇತನವೂ ಪರಿಷ್ಕರಣೆಗೊಂಡಿದ್ದು, ಹಿರಿಯ ಮಹಿಳಾ ತಂಡದ ಆಟಗಾರ್ತಿಯರಿಗೆ ದಿನಕ್ಕೆ .12500 ಬದಲು .20000 ಸಿಗಲಿದೆ. ಅಂಡರ್‌-23 ಆಟಗಾರ್ತಿಯರಿಗೆ 5500 ರು., ಬದಲು 10000 ರು., ಅಂಡರ್‌-19/16 ಆಟಗಾರ್ತಿಯರಿಗೆ 5500 ರು., ಬದಲು 10000 ರು., ಸಿಗಲಿದೆ.

ಟಿ20 ಪಂದ್ಯಗಳಿಗೆ ಆಯಾ ದರ್ಜೆಯ ಅನ್ವಯ ಶೇ.50ರಷ್ಟುಸಂಭಾವನೆ ಸಿಗಲಿದೆ. ಐಪಿಎಲ್‌ ಗುತ್ತಿಗೆ ಇಲ್ಲದ ಆಟಗಾರರೂ ರಣಜಿ, ಮುಷ್ತಾಕ್‌ ಅಲಿ, ವಿಜಯ್‌ ಹಜಾರೆ ಟ್ರೋಫಿ ಆಡಿದರೆ ವಾರ್ಷಿಕ 25ರಿಂದ 30 ಲಕ್ಷ ರು. ಸಂಪಾದಿಸಬಹುದಾಗಿದೆ.

ಬಿಸಿಸಿಐ ವೇತನ ಹೆಚ್ಚಳ ಮಾಡಿರುವುದರಿಂದ ಅಂಡರ್‌-16, ಅಂಡರ್‌-19, ಅಂಡರ್‌-23, ಹಿರಿಯರ ವಿಭಾಗ ಸೇರಿ ಸುಮಾರು 2000 ಪುರುಷ, 1000 ಮಹಿಳಾ ಕ್ರಿಕೆಟಿಗರಿಗೆ ಅನುಕೂಲವಾಗಲಿದೆ.

ಕೋವಿಡ್‌ ಪರಿಹಾರ ಘೋಷಿಸಿದ ಬಿಸಿಸಿಐ

ಕೊರೋನಾ ಸೋಂಕಿನಿಂದಾಗಿ 2020-21ರ ದೇಸಿ ಋುತು ರದ್ದಾಗಿದ್ದ ಕಾರಣ ಹಲವು ಕ್ರಿಕೆಟಿಗರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಹೀಗಾಗಿ ಅವರಿಗೆ ಬಿಸಿಸಿಐ ಪರಿಹಾರ ಘೋಷಿಸಿದೆ. 2019-20ರ ಋುತುವಿನಲ್ಲಿ ಆಡಿದ್ದ ಆಟಗಾರರಿಗೆ ಹೆಚ್ಚುವರಿ ಶೇ.50ರಷ್ಟುವೇತನವನ್ನು ಪಾವತಿಸುವುದಾಗಿ ತಿಳಿಸಿದೆ.

click me!