
ಸಿಡ್ನಿ(ಡಿ.22): ಆಸ್ಟ್ರೇಲಿಯಾದ ಚುಟುಕು ಕ್ರಿಕೆಟ್ ಹಬ್ಬ, ಬಿಗ್‌ಬ್ಯಾಶ್ ಲೀಗ್ 2021-22 ಟೂರ್ನಿಯು (Big Bash League) ಸಾಕಷ್ಟು ಭರ್ಜರಿಯಾಗಿ ಸಾಗುತ್ತಿದ್ದು, ಹಲವು ರೋಚಕ ಪಂದ್ಯಾಟಗಳಿಗೆ ಸಾಕ್ಷಿಯಾಗಿದೆ. ಕ್ರಿಕೆಟ್ ಮನರಂಜನೆಗೆ ಹೆಸರಾದ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಜೊಶುವಾ ಫಿಲಿಫ್ಪಿ, ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell), ಮಿಚೆಲ್ ಮಾರ್ಶ್ (Mitchell Marsh) ಅವರಂತಹ ಬ್ಯಾಟರ್‌ಗಳು ಅಬ್ಬರಿಸುತ್ತಿದ್ದರೆ, ಬೌಲಿಂಗ್‌ನಲ್ಲಿ ಆಂಡ್ರ್ಯೂ ಟೈ (Andrew Tye), ರಶೀದ್ ಖಾನ್ (Rashid Khan) ಅವರಂತಹ ಟಿ20 ಸ್ಪೆಷಲಿಸ್ಟ್ ಬೌಲರ್‌ಗಳು ಮಿಂಚುತ್ತಿದ್ದಾರೆ. ಇದೀಗ ಮಂಗಳವಾರ(ಡಿಸೆಂಬರ್ 21)ದಂದು ನಡೆದ ಪಂದ್ಯವೊಂದರಲ್ಲಿ ವೇಗಿಗಳಾದ ಪೀಟರ್ ಸಿಡ್ಲ್ (Peter Siddle) ಹಾಗೂ ಡೇನಿಯಲ್ ವಾರೆಲ್ (Daniel Worrall) ನಡುವಿನ ಕಿಸ್ಸಿಂಗ್ ಕ್ಷಣ (Kiss) ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.
ಹೌದು, ಸಿಡ್ನಿ ಸಿಕ್ಸರ್ (Sydney Sixers) ಹಾಗೂ ಅಡಿಲೇಡ್ ಸ್ಟ್ರೈಕರ್ಸ್ (Adelaide Strikers) ನಡುವಿನ ಪಂದ್ಯದ ವೇಳೆ ಅಡಿಲೇಡ್ ಸ್ಟ್ರೈಕರ್ಸ್ ತಂಡದ ನಾಯಕ ಪೀಟರ್ ಸಿಡ್ಲ್ ತಮ್ಮ ಸಹ ಆಟಗಾರ ಡೇನಿಯಲ್ ವಾರೆಲ್‌ಗೆ ಮುತ್ತಿಕ್ಕಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿದೆ. ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ಸ್ಟ್ರೈಕರ್ 147 ರನ್‌ಗಳನ್ನು ಕಲೆಹಾಕಿತ್ತು. ಇದಾದ ಬಳಿಕ ಸ್ಟ್ರೈಕರ್ಸ್ ತಂಡದ ನಾಯಕ ಪೀಟರ್ ಸಿಡ್ಲ್ ಮೊದಲ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಬಲಗೈ ವೇಗಿ ಡೇನಿಯಲ್ ವಾರೆಲ್ ಅವರಿಗೆ ನೀಡಿದರು. ಮೊದಲ ಓವರ್‌ನ ಎರಡನೇ ಚೆಂಡು ಎಸೆಯುವ ಮುನ್ನ ನಾಯಕ ಸಿಡ್ಲ್ ಹಾಗೂ ಡೇನಿಯಲ್ ವಾರೆಲ್ ಸಾಕಷ್ಟು ಚರ್ಚೆ ನಡೆಸಿದರು. 30 ಯಾರ್ಡ್ ಸರ್ಕಲ್‌ನಲ್ಲಿದ್ದ ಸಿಡ್ಲ್ ವೇಗಿ ಡೇನಿಯಲ್ ವಾರೆಲ್ ಬಳಿ ಬಂದು ಕೆನ್ನೆಗೆ ಮುತ್ತಿಕ್ಕಿ ಹುರಿದುಂಬಿಸಿದ್ದಾರೆ.
ಅಡಿಲೇಡ್ ವಿರುದ್ದ ರೋಚಕ ಗೆಲುವು ಸಾಧಿಸಿದ ಸಿಡ್ನಿ ಸ್ಟ್ರೈಕರ್ಸ್:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಡಿಲೇಡ್ ಸ್ಟ್ರೈಕರ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪವರ್ ಪ್ಲೇನಲ್ಲೇ ಅಡಿಲೇಡ್ ಸ್ಟ್ರೈಕರ್ಸ್‌ನ ಆರಂಭಿಕ ಬ್ಯಾಟರ್‌ಗಳಾದ ಜೇಕ್ ವೆದಾರ್ಲ್ಡ್ ಹಾಗೂ ಮ್ಯಾಥ್ಯೂ ಶಾರ್ಟ್ ಪೆವಿಲಿಯನ್ ಸೇರಿದರು. ಇನ್ನು ಮ್ಯಾಟ್ ರೆನ್‌ಶೋ ಹಾಗೂ ಜೋನಾಥನ್ ವೆಲ್ಸ್ ಉತ್ತಮ ಆರಂಭವನ್ನು ಪಡೆದುಕೊಂಡರಾದರೂ ದೊಡ್ಡ ಮೊತ್ತ ಕಲೆಹಾಕಲು ಯಶಸ್ವಿಯಾಗಲಿಲ್ಲ. ಕೊನೆಯಲ್ಲಿ ಥಾಮಸ್ ಕೆಲ್ಲಿ ಕೇವಲ 34 ಎಸೆತಗಳಲ್ಲಿ 41 ರನ್ ಸಿಡಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಅಡಿಲೇಡ್ ಸ್ಟ್ರೈಕರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 41 ರನ್ ಕಲೆಹಾಕಿತ್ತು.
ವಿಂಡೀಸ್ ಸರಣಿಯಿಂದ ಹೊರಬಿದ್ದ ಆರ್ಚರ್: ಮುಗಿಯಿತಾ ಜೋಫ್ರಾ ಕ್ರಿಕೆಟ್ ವೃತ್ತಿ ಬದುಕು?
ಈ ಗುರಿ ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್ ತಂಡಕ್ಕೆ ಜೋಶುವಾ ಫಿಲಿಫ್ಪಿ (Josh Philippe) ಹಾಗೂ ಜೇಮ್ಸ್ ವಿನ್ಸ್ ಮೊದಲ ವಿಕೆಟ್‌ಗೆ 44 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಬಳಿಕ ಅಲ್ಲಲ್ಲಿ ಸಿಡ್ನಿ ಸಿಕ್ಸರ್ಸ್ ವಿಕೆಟ್ ಕಳೆದುಕೊಂಡ ಪರಿಣಾಮ ಒಂದು ಹಂತದಲ್ಲಿ ಅಡಿಲೇಡ್ ಕಮ್‌ಬ್ಯಾಕ್ ಮಾಡುವ ಮುನ್ಸೂಚನೆ ನೀಡಿತು. ರಶೀದ್ ಖಾನ್ 17ನೇ ಓವರ್‌ನಲ್ಲಿ ಸತತ 2 ವಿಕೆಟ್ ಕಬಳಿಸಿ ಪಂದ್ಯಕ್ಕೆ ರೋಚಕತೆ ತಂದುಕೊಟ್ಟರು. ಆದರೆ ಆಲ್ರೌಂಡರ್ ಸೀನ್ ಆಬೋಟ್ ಮಿಂಚಿನ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.