
ಹರಾರೆ (ಆ.17): ಟೀಮ್ ಇಂಡಿಯಾ ಕ್ರಿಕೆಟ್ ಸರಣಿಗಾಗಿ ಇತ್ತೀಚೆಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಎರಡು ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಈ ಎಲ್ಲಾ ಪಂದ್ಯಗಳು ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿಯೇ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ಹರಾರೆ ತಲುಪಿದೆ. ಹರಾರೆ ತಲುಪಿದ ಬೆನ್ನಲ್ಲಿಯೇ ಟೀಮ್ ಇಂಡಿಯಾಗೆ ಅಲ್ಲಿನ ಪರಿಸ್ಥಿತಿ ಅರಿವಾಗಿದ್ದು, ಬಿಸಿಸಿಐ ಕೂಡ ಅಲ್ಲಿನ ಸಮಸ್ಯೆಯ ಕುರಿತಾಗಿ ಕಟ್ಟುನಿಟ್ಟಿನ ಸೂಚನೆಯನ್ನು ರವಾನಿಸಿದೆ. ವಿಚಾರವೇನೆಂದರೆ, ಜಿಂಬಾಬ್ವೆಯ ಹರಾರೆಯಲ್ಲಿ ಸ್ನಾನ ಮಾಡೋಕೆ ಕೂಡ ನೀರಿಲ್ಲ. ಹರಾರೆ ಸೇರಿದಂತೆ ಜಿಂಬಾಬ್ವೆಯ ಪ್ರಮುಖ ನಗರಗಳಲ್ಲಿ ನೀರಿನ ಸಮಸ್ಯೆ ಅತೀವವಾಗಿ ಆಡಿದೆ. ಈ ಕುರಿತಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರಿಗೆ ಜಿಂಬಾಬ್ವೆ ನೆಲದಲ್ಲಿ ನೀರನ್ನು ಮಿತವಾಗಿ ಬಳಸುವಂತೆ ಸೂಚನೆಯನ್ನು ರವಾನಿಸಿದೆ. ಯಾವುದೇ ಕಾರಣಕ್ಕೂ ಅತಿಯಾಗಿ ನೀರನ್ನು ಬಳಕೆ ಮಾಡಬೇಡಿ. ನೀರು ಪೋಲು ಮಾಡುವ ಕೆಲಸಕ್ಕೆ ಹೋಗಬೇಡಿ. ಸಾಧ್ಯವಾದಲ್ಲಿ, ದಿನಕ್ಕೆ ಒಮ್ಮೆ ಮಾತ್ರವೇ ಸ್ನಾನ ಮಾಡಿ. ಆಗಲೂ ಕೂಡ ಆದಷ್ಟು ಕಡಿಮೆ ನೀರನ್ನು ಬಳಸಿ ಎಂದು ಹೇಳಿದೆ.
ಟೀಮ್ ಮ್ಯಾನೇಜರ್ ಮೂಲಕ ಸೂಚನೆ: ಟೀಮ್ ಮ್ಯಾನೇಜರ್ ಮೂಲಕ ಬಿಸಿಸಿಐ, ನೀರನ್ನು ಮಿತವಾಗಿ ಬಳಕೆ ಮಾಡಿ ಎನ್ನುವ ಸೂಚನೆಯನ್ನೂ ನೀಡಿದೆ. ಇದರೊಂದಿಗೆ ಇನ್ನೂ ಹಲವಾರು ನಿಯಮವನ್ನು ಬಿಸಿಸಿಐ ಆಟಗಾರರ ಮೇಲೆ ಹೇರಿದೆ. ಜಿಂಬಾಬ್ವೆಯಲ್ಲಿ ಸದ್ಯ ಪ್ರತಿ ದಿನ ಅಂದಾಜು 30 ಡಿಗ್ರಿ ತಾಪಮಾನವಿದ್ದು, ಆಟಗಾರರು ಮೈದಾನಕ್ಕೆ ಅಭ್ಯಾಸ ನಡೆಸಲು ಇದು ಸಮಸ್ಯೆ ಒಡ್ಡಿದೆ.
ಪೂಲ್ ಸೆಷನ್ ಕೂಡ ರದ್ದು: ಬಿಸಿಸಿಐ ಅಧಿಕಾರಿಯನ್ನು ಉಲ್ಲೇಖಿಸಿ ಇನ್ಸೈಡ್ ಸ್ಪೋರ್ಟ್ ಈ ಮಾಹಿತಿ ನೀಡಿದೆ. ‘ಹೌದು, ಸದ್ಯ ಹರಾರೆಯಲ್ಲಿ ನೀರಿನ ತೀವ್ರ ಸಮಸ್ಯೆ ಇದೆ’ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಭಾರತೀಯ ಆಟಗಾರರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಯಾವುದೇ ಕಾರಣಕ್ಕೂ ನೀರನ್ನು ವ್ಯರ್ಥ ಮಾಡದಂತೆ ಆಟಗಾರರಿಗೆ ಸೂಚಿಸಲಾಗಿದೆ. ಕಡಿಮೆ ಸಮಯ ಮತ್ತು ಕಡಿಮೆ ನೀರಿನಿಂದ ಸ್ನಾನ ಮಾಡಿ. ನೀರನ್ನು ಉಳಿಸಲು ಪೂಲ್ ಸೆಷನ್‌ಗಳನ್ನು ಸಹ ಕಡಿತಗೊಳಿಸಲಾಗಿದೆ.
FTP Cycle 2023-27: ಒಟ್ಟು 20 ಟೆಸ್ಟ್ ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ..!
ಹರಾರೆಯ ಹಲವು ಪ್ರದೇಶಗಳಲ್ಲಿ ಮೂರು ವಾರಗಳಿಂದ ನೀರಿಲ್ಲ: ಜಿಂಬಾಬ್ವೆಯ ಮಹಿಳಾ ರಾಜಕಾರಣಿ ಲಿಂಡಾ ತ್ಸುಂಗಿರೈ ಮಸಾರಿರಾ ಕೂಡ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ನೀರಿನ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. 'ವಿಶೇಷವಾಗಿ ಪಶ್ಚಿಮ ಹರಾರೆ ಸೇರಿದಂತೆ ರಾಜಧಾನಿಯ ಉಳಿದ ಭಾಗಗಳಲ್ಲಿ ಸುಮಾರು ಮೂರು ವಾರಗಳಿಂದ ನೀರು ಸರಬರಾಜು ಇಲ್ಲ. ನೀರೇ ಜೀವನ, ಅದರ ಅನುಪಸ್ಥಿತಿಯಿಂದಾಗಿ ಜನರ ಆರೋಗ್ಯ ಮತ್ತು ಸ್ವಚ್ಛತೆಗೆ ದೊಡ್ಡ ಅಪಾಯವಿದೆ. ಸ್ಥಳೀಯಾಡಳಿತ ಇಲಾಖೆಗಳು ಹಾಗೂ ಹರಾರೆ ಆಡಳಿತ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಬಿಡಬೇಕು. ಅಲ್ಲದೆ, ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡಬೇಕು' ಎಂದು ಬರೆದಿದ್ದಾರೆ.
ಸಚಿನ್ ತೆಂಡುಲ್ಕರ್‌ಗೆ ಎಲ್ಲವೂ ಗೊತ್ತಿದೆ, ಆದ್ರೆ ಯಾರಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ: ವಿನೋದ್ ಕಾಂಬ್ಳಿ
ನಾಳೆಯಿಂದ ಏಕದಿನ ಸರಣಿ: ವಿಶೇಷವಾಗಿ ಹರಾರೆ ಪಶ್ಚಿಮ ಮತ್ತು ಹರಾರೆಯ ಇತರ ಭಾಗಗಳಲ್ಲಿ ಕಳೆದ 3 ವಾರಗಳಿಂದ ನೀರಿನ ಪೂರೈಕೆಯಾಗಿಲ್ಲ.. ಇದು ಸುರಕ್ಷಿತ, ಶುದ್ಧ ಮತ್ತು ಕುಡಿಯುವ ನೀರಿನ ಹಕ್ಕನ್ನು ಪ್ರತಿಪಾದಿಸುವ ಜಿಂಬಾಬ್ವೆ ಸಂವಿಧಾನದ ಸೆಕ್ಷನ್ 77 ರ ಸ್ಪಷ್ಟ ಉಲ್ಲಂಘನೆಯಾಗಿದೆ. ನೀರು ಜೀವನ, ಈಗ ಅದರ ಅಲಭ್ಯತೆ ಕಾಡಿದೆ ಎಂದು ಅವರು ಬರೆದಿದ್ದಾರೆ. ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗಲಿದೆ. ಆಗಸ್ಟ್ 18 ರಂದು ಮೊದಲ ಪಂದ್ಯ ನಡೆಯಲಿದ್ದರೆ, ಆಗಸ್ಟ್ 20 ಹಾಗೂ 22 ರಂದು ನಂತರದ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳಿಗೂ ಹರಾರೆ ಆತಿಥ್ಯ ವಹಿಸಿಕೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.