
ದುಬೈ: ಮುಂಬರುವ ಫೆಬ್ರವರಿ 07ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಈ ಪೈಕಿ ಇತ್ತೀಚೆಗಷ್ಟೇ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ರಾಜತಾಂತ್ರಿಕ ಕಾರಣದಿಂದ ಐಪಿಎಲ್‌ನಿಂದ ಹೊರಹಾಕಲಾಗಿದೆ. ಇದರ ಬೆನ್ನಲ್ಲೇ ರೊಚ್ಚಿಗೆದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತಮ್ಮ ಲೀಗ್ ಹಂತದ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಶಿಫ್ಟ್ ಮಾಡುವಂತೆ ಐಸಿಸಿ ಬಳಿ ಪಟ್ಟು ಹಿಡಿದಿತ್ತು.
ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು ಈ ಬಗ್ಗೆ ತನ್ನ ದಿಟ್ಟ ನಿಲುವನ್ನು ಪ್ರಕಟಿಸಿದ್ದು, ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಡಿ ಇಲ್ಲದಿದ್ದರೇ ಟೂರ್ನಿಯಿಂದಲೇ ಹೊರಹೋಗಿ ಎನ್ನುವ ಖಡಕ್ ಎಚ್ಚರಿಕೆಯನ್ನು ಬಾಂಗ್ಲಾದೇಶಕ್ಕೆ ಐಸಿಸಿ ರವಾನಿಸಿದೆ ಎಂದು ವರದಿಯಾಗಿದೆ. ಕೊನೆಯ ಕ್ಷಣದಲ್ಲಿ ಲೀಗ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಶಿಫ್ಟ್ ಮಾಡಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಐಸಿಸಿ ರವಾನಿಸಿದೆ ಎಂದು ವರದಿಯಾಗಿದೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿದ್ದು, ಟೂರ್ನಿಗೆ ಫೆಬ್ರವರಿ 07ರಂದು ಅಧಿಕೃತ ಚಾಲನೆ ಸಿಗಲಿದೆ. ಬಾಂಗ್ಲಾದೇಶ ತಂಡವು 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಇಂಗ್ಲೆಂಡ್, ಇಟಲಿ, ನೇಪಾಳ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸ್ಥಾನ ಪಡೆದಿವೆ. ಬಾಂಗ್ಲಾದೇಶ ತಂಡವು ಫೆಬ್ರವರಿ 07ರಂದು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ.
ಫೆಬ್ರವರಿ 07ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ನಂತರ, ಬಾಂಗ್ಲಾದೇಶ ಫೆಬ್ರವರಿ 9 ರಂದು ಇಟಲಿ ಮತ್ತು ಫೆಬ್ರವರಿ 14 ರಂದು ಇಂಗ್ಲೆಂಡ್ ಅನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಫೆಬ್ರವರಿ 17 ರಂದು ನೇಪಾಳ ವಿರುದ್ಧದ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.
ಹೌದು, ಈಗಾಗಲೇ ಅರಾಜಕತೆಯ ಬೀಡಾಗಿರುವ ಬಾಂಗ್ಲಾದೇಶ ಒಂದು ವೇಳೆ ಹಟಕ್ಕೆ ಬಿದ್ದು, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಯ್ಕಾಟ್ ಮಾಡಿದರೇ, ಕೋಟಿ ಕೋಟಿ ನಷ್ಟ ಅನುಭವಿಸಲಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಹೋಲಿಸಿದರೆ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಮೊತ್ತವನ್ನು ಐಸಿಸಿ ಈ ಬಾರಿ 20% ಹೆಚ್ಚಿಸಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಮೊತ್ತ 11.25 ಮಿಲಿಯನ್ ಡಾಲರ್ ಆಗಿದ್ದರೇ, ಈ ಬಾರಿಯ ಒಟ್ಟು ಬಹುಮಾನ ಮೊತ್ತ 13.5 ಮಿಲಿಯನ್ ಡಾಲರ್ ಆಗಿದೆ.
ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 20 ತಂಡಗಳಿಗೆ ತಲಾ $300,000 ಸಿಗಲಿದೆ. ಅಂದರೆ ಭಾರತೀಯ ರುಪಾಯಿ ಲೆಕ್ಕಚಾರದಲ್ಲಿ ಸುಮಾರು ಎರಡು ಕೋಟಿ ಇಪ್ಪತ್ತೈದು ಲಕ್ಷ ರುಪಾಯಿ ನಗದು ಬಹುಮಾನ ಸಿಗಲಿದೆ. ಇನ್ನು ಇದಷ್ಟೇ ಅಲ್ಲದೇ ಅಂಕಪಟ್ಟಿಯಲ್ಲಿ ಐದರಿಂದ ಹನ್ನೆರಡರವರೆಗೆ ಸ್ಥಾನ ಪಡೆಯುವ ತಂಡಗಳು ತಲಾ 4 ಕೋಟಿ, ನಾಲ್ಕು ಲಕ್ಷ ರುಪಾಯಿ ತಮ್ಮದಾಗಿಸಿಕೊಳ್ಳಲಿವೆ. ಒಂದು ವೇಳೆ ಬಾಂಗ್ಲಾದೇಶ ಈ ಬಾರಿಯ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದರೆ ಬಹುತೇಕ 6 ಕೋಟಿ ರುಪಾಯಿ ನಷ್ಟ ಮಾಡಿಕೊಳ್ಳಲಿದೆ. ಈ ರಿಸ್ಕ್ ತೆಗೆದುಕೊಳ್ಳುತ್ತಾ ಅಥವಾ ತೆಪ್ಪಗೆ ಭಾರತಕ್ಕೆ ಬಂದು ಟಿ20 ವಿಶ್ವಕಪ್ ಆಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.