
ಢಾಕಾ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರ ಲಿಟನ್ ದಾಸ್‌ಗೆ ನಾಯಕತ್ವ ಪಟ್ಟ ಕಟ್ಟಿದೆ. ಈ ಮೂಲಕ ಕಳೆದೊಂದು ವರ್ಷದಿಂದ ಬಾಂಗ್ಲಾದೇಶ ತಂಡದ ನಾಯಕರಾಗಿದ್ದ ಮೆಹದಿ ಹಸನ್ ಮಿರಾಜ್ ಅವರನ್ನು ಕೆಳಗಿಳಿಸಲಾಗಿದೆ.
ಬಾಂಗ್ಲಾದೇಶ ತಂಡವು ಇತ್ತೀಚೆಗಷ್ಟೇ ಜಿಂಬಾಬ್ವೆ ಎದುರು ಏಕದಿನ ಸರಣಿಯನ್ನು ಸೋತಿತ್ತು. ಇದರ ಬೆನ್ನಲ್ಲೇ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ಮೆಹದಿ ಹಸನ್ ಅವರ ತಲೆದಂಡವಾಗಿದೆ. ಇದೀಗ ಹಿಂದೂ ಧರ್ಮದ ಲಿಟನ್ ದಾಸ್‌ಗೆ ಬಾಂಗ್ಲಾದೇಶ ಸೀಮಿತ ಓವರ್‌ಗಳ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಲಿಟನ್ ದಾಸ್ ನಾಯಕನಾಗಿ ಇನ್ನು ಮುಂದೆ ಬಾಂಗ್ಲಾದೇಶ ಏಕದಿನ ಹಾಗೂ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ನಜ್ಮುಲ್ ಹೊಸೈನ್ ಶಾಂತೋ ಅವರು ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.
Litton Das has been appointed captain of the Bangladesh ODI team, taking over from Mehidy Hasan Miraz 🇧🇩 pic.twitter.com/eb2Qt7n2Nj
— Cricinfo (@cricinfo) July 29, 2026
ಬಾಂಗ್ಲಾದೇಶ ಕ್ರಿಕೆಟ್ ತಂಡವು ಮುಂದಿನ ವರ್ಷ ಅಂದರೆ 2027ರ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದು, ಇದೇ ಕಾರಣಕ್ಕೆ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಲಿಟನ್ ದಾಸ್‌ಗೆ ಬಾಂಗ್ಲಾದೇಶ ಏಕದಿನ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಇತ್ತೀಚೆಗಷ್ಟೇ ಮೆಹದಿ ಹಸನ್ ಮಿರಾಜ್ ನಾಯಕತ್ವದ ಬಾಂಗ್ಲಾದೇಶ ತಂಡವು 2-1 ಅಂತರದಲ್ಲಿ ಜಿಂಬಾಬ್ವೆ ಎದುರು ಏಕದಿನ ಸರಣಿ ಸೋತಿತ್ತು. ಮೆಹದಿ ಹಸನ್ 2025ರ ಜೂನ್‌ನಲ್ಲಿ ಬಾಂಗ್ಲಾದೇಶ ಸೀಮಿತ ಓವರ್‌ಗಳ ತಂಡದ ನಾಯಕರಾಗಿದ್ದರು. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರ ಲಿಟನ್ ದಾಸ್, ಬಾಂಗ್ಲಾದೇಶ ಸೀಮಿತ ಓವರ್‌ಗಳ ತಂಡದ ನೂತನ ನಾಯಕರಾಗಿ ನೇಮಕವಾಗಿದ್ದಾರೆ.
ಮೆಹದಿ ಹಸನ್ ನಾಯಕತ್ವದಲ್ಲಿ ಬಾಂಗ್ಲಾದೇಶ ಆಡಿದ 20 ಪಂದ್ಯಗಳ ಪೈಕಿ 10ರಲ್ಲಿ ಗೆಲುವು ಹಾಗೂ ಒಂಬತ್ತು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇನ್ನು ಲಿಟನ್ ದಾಸ್ ಈಗಾಗಲೇ ಬಾಂಗ್ಲಾದೇಶ ಟಿ20 ತಂಡದ ನಾಯಕರಾಗಿದ್ದರು. ಇದೀಗ ಏಕದಿನ ತಂಡದ ನಾಯಕತ್ವದ ಜವಾಬ್ದಾರಿಯು ಲಿಟನ್ ದಾಸ್ ಹೆಗಲೇರಿದೆ.
ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಹಾಗೂ ಬಾಂಗ್ಲಾದೇಶ ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ಈ ಮಹತ್ವದ ತೀರ್ಮಾನ ಘೋಷಿಸಿದ್ದಾರೆ. 'ನಾವು ಈ ಮೊದಲು ಮೂರು ಮಾದರಿಯ ಕ್ರಿಕೆಟ್‌ಗೆ ಮೂರು ನಾಯಕರಿದ್ದರು. ನಮಗೆ ಎರಡು ನಾಯಕರು ಸಾಕು ಎಂದು ಅನಿಸಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೆಹದಿ ಒಳ್ಳೆಯ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶ ಆಡಿದ ಐದು ಸರಣಿಗಳ ಪೈಕಿ ನಾಲ್ಕು ಸರಣಿಗಳನ್ನು ಜಯಿಸಿದೆ. ಅವರು ಬ್ಯಾಟಿಂಗ್‌ನತ್ತ ಗಮನ ಹರಿಸಲಿ ಎನ್ನುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ. ಯಾಕೆಂದರೆ ಇತ್ತೀಚೆಗೆ ಅವರು ಬ್ಯಾಟಿಂಗ್‌ನಲ್ಲಿ ಒಳ್ಳೆಯ ಲಯದಲ್ಲಿ ಇಲ್ಲ' ಎಂದು ತಮೀಮ್ ಇಕ್ಬಾಲ್ ನಾಯಕತ್ವ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.