Ban vs NZ: ಕಿವೀಸ್ ಎದುರು ಬಾಂಗ್ಲಾಗೆ ಮೊದಲ ಇನಿಂಗ್ಸ್‌ ಮುನ್ನಡೆ

By Suvarna NewsFirst Published Jan 3, 2022, 3:23 PM IST
Highlights

* ವಿಶ್ವ ಟೆಸ್ಟ್ ಚಾಂಪಿಯನ್ ಕಿವೀಸ್‌ಗೆ ಬಾಂಗ್ಲಾದೇಶ ತಿರುಗೇಟು

* ಮೂರನೇ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ ತಂಡಕ್ಕೆ 73 ರನ್‌ಗಳ ಮುನ್ನಡೆ

* ಸಮಯೋಚಿತ ಅರ್ಧಶತಕ ಚಚ್ಚಿದ ಮೊಮಿನುಲ್ ಹಕ್‌, ಲಿಟನ್ ದಾಸ್

ಮೌಂಟ್‌ ಮ್ಯಾಂಗ್ಯುಯಿನಿ(ಜ.03): ನಾಯಕ ಮೊಮಿನುಲ್ ಹಕ್‌ (Mominul Haque) ಹಾಗೂ ಲಿಟನ್ ದಾಸ್ (Liton Das) ಅವರ ಸಮಯೋಚಿತ ಶತಕದಾಟದ ನೆರವಿನಿಂದ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ (New Zealand Cricket Team) ಎದುರಿನ ಮೊದಲ ಟೆಸ್ಟ್‌ನ ಮೂರನೇ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 401 ರನ್‌ ಗಳಿಸಿದೆ. ಈ ಮೂಲಕ ಬಾಂಗ್ಲಾದೇಶ ತಂಡವು (Bangladesh Cricket Team) 73 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ನರಿಗೆ ಅವರದ್ದೇ ತವರಿನಲ್ಲಿ ಬಾಂಗ್ಲಾದೇಶ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ.

ಹೌದು, ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 175 ರನ್‌ಗಳಿಸಿದ್ದ ಬಾಂಗ್ಲಾದೇಶ ತಂಡವು, ಮೂರನೇ ದಿನದಾಟದಲ್ಲೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡದೆದುರು ದಿಟ್ಟ ಪ್ರತಿರೋಧ ತೋರಿತು. ಮೂರನೇ ದಿನದಾಟದ ಆರಂಭದಲ್ಲೇ ಅರ್ಧಶತಕ ಬಾರಿಸಿದ್ದ ಆರಂಭಿಕ ಬ್ಯಾಟರ್ ಮೊಹಮದುಲ್ಲಾ ಹಸನ್ ಜೋಯ್(78) ವಿಕೆಟ್ ಕಳೆದುಕೊಂಡಿತು. ಇನ್ನು ಅನುಭವಿ ಬ್ಯಾಟರ್‌ ಮುಷ್ಫಿಕುರ್ ರಹೀಮ್ ಬ್ಯಾಟಿಂಗ್ ಕೇವಲ 12 ರನ್‌ಗಳಿಗೆ ಸೀಮಿತವಾಯಿತು. ಮುಷ್ಫಿಕುರ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ (Trent Boult) ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಲಿಟನ್‌ ದಾಸ್ - ಮೊಮಿನುಲ್ ಹಕ್‌ ಜುಗಲ್ಬಂದಿ: ಒಂದು ಹಂತದಲ್ಲಿ 203 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಕೆಲಕಾಲ ಆಘಾತಕ್ಕೊಳಗಾಗಿದ್ದ ಬಾಂಗ್ಲಾದೇಶ ತಂಡಕ್ಕೆ ಐದನೇ ವಿಕೆಟ್‌ಗೆ ಲಿಟನ್ ದಾಸ್ ಹಾಗೂ ನಾಯಕ ಮೊಮಿನುಲ್ ಹಕ್‌ ಸಮಯೋಚಿತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕಿವೀಸ್‌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಈ ಜೋಡಿ 5ನೇ ವಿಕೆಟ್‌ಗೆ 158 ರನ್‌ಗಳ ಜತೆಯಾಟ ನಿಭಾಯಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ ಮತ್ತೊಮ್ಮೆ ಯಶಸ್ವಿಯಾದರು. ಒಟ್ಟು 244 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 88 ರನ್‌ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಮೊಮಿನುಲ್ ಹಕ್‌ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ಟ್ರೆಂಟ್ ಬೌಲ್ಟ್‌ ಯಶಸ್ವಿಯಾದರು. ಇದಾಗಿ ಕೆಲವೇ ಹೊತ್ತಿನಲ್ಲಿ ಲಿಟನ್‌ ದಾಸ್ ಕೂಡಾ ಟ್ರೆಂಟ್‌ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಲಿಟನ್ ದಾಸ್‌ 177 ಎಸೆತಗಳನ್ನು ಎದುರಿಸಿ 86 ರನ್‌ ಗಳಿಸಿ ಟಾಮ್‌ ಬ್ಲಂಡೆಲ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು.

Bangladesh dominate day three; finish with 401/6, leading by 73 runs. | | https://t.co/tytB0US2qJ pic.twitter.com/26eCWHfav1

— ICC (@ICC)

Ind vs SA: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ, ಕೆ.ಎಲ್. ರಾಹುಲ್ ಟೀಂ ಇಂಡಿಯಾ ನಾಯಕ..!

ಬಾಂಗ್ಲಾದೇಶಕ್ಕೆ 73 ರನ್‌ಗಳ ಮುನ್ನೆಡೆ: ಲಿಟನ್ ದಾಸ್ ಹಾಗೂ ಮೊಮಿನುಲ್ ಹಕ್‌ ಸಮಯೋಚಿತ ಶತಕದ ಜತೆಯಾಟದ ನೆರವಿನಿಂದ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ ಕಿವೀಸ್ ಎದುರು ಮೂರನೇ ದಿನದಾಟದಂತ್ಯದ ವೇಳೆಗೆ 73 ರನ್‌ಗಳ ಮುನ್ನಡೆ ಸಾಧಿಸಿದೆ. ಮೆಹದಿ ಹಸನ್‌ 20 ರನ್ ಹಾಗೂ ಯಾಸಿರ್ ಅಲಿ 11 ರನ್‌ ಬಾರಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪರ ಎಡಗೈ ವೇಗಿಗಳಾದ ನೀಲ್ ವ್ಯಾಗ್ನರ್ ಹಾಗೂ ಟ್ರೆಂಟ್‌ ಬೌಲ್ಟ್‌ ತಲಾ 3 ವಿಕೆಟ್ ಕಬಳಿಸಿದ್ದಾರೆ. ಇನ್ನುಳಿದಂತೆ ಕೈಲ್ ಜೇಮಿಸನ್, ಟಿಮ್ ಸೌಥಿ ಹಾಗೂ ರಚಿನ್ ರವೀಂದ್ರ ವಿಕೆಟ್‌ ಕಬಳಿಸಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 328/10
ಡೆವೊನ್ ಕಾನ್‌ವೇ: 122
ಶೌರಿಫುಲ್ಲಾ ಇಸ್ಲಾ: 69/3

ಬಾಂಗ್ಲಾದೇಶ: 401/6
ಮೊಮಿನುಲ್ ಹಕ್: 88
ಟ್ರೆಂಟ್ ಬೌಲ್ಟ್‌: 61/3

(* ಮೂರನೇ ದಿನದಾಟದಂತ್ಯದ ವೇಳೆಗೆ)

click me!