ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಸೋಲಿಗೆ ಕನ್ನಡಿಗನ ಮೇಲೆ ಬೊಟ್ಟು ಮಾಡಿದ ಡೆಲ್ಲಿ ಕ್ಯಾಪ್ಟನ್!

Published : Apr 22, 2026, 02:50 PM IST
Delhi Capitals

ಸಾರಾಂಶ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 47 ರನ್‌ಗಳಿಂದ ಸೋತಿದೆ. ನಾಯಕ ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ಅವರ ರನೌಟ್ ಮತ್ತು ಕ್ಯಾಚ್ ಕೈಚೆಲ್ಲಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ಕಳಪೆ ಫೀಲ್ಡಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್: ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 47 ರನ್‌ಗಳಿಂದ ಸೋತಿದೆ. ಈ ಸೋಲಿನ ಬೆನ್ನಲ್ಲೇ, ಡೆಲ್ಲಿ ಕ್ಯಾಪ್ಟನ್ ಅಕ್ಷರ್ ಪಟೇಲ್, ತಂಡದ ಕಳಪೆ ಫೀಲ್ಡಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆ.ಎಲ್. ರಾಹುಲ್ ಮತ್ತು ಪಥುಮ್ ನಿಸ್ಸಾಂಕ ಮಾಡಿದ ತಪ್ಪುಗಳೇ ಸೋಲಿಗೆ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಲು ಸಿಕ್ಕ ಎರಡು ಸುವರ್ಣಾವಕಾಶಗಳನ್ನು ನಾವು ಕೈಚೆಲ್ಲಿದೆವು, ಇದೇ ನಮಗೆ ದೊಡ್ಡ ಹೊಡೆತ ಕೊಟ್ಟಿತು ಎಂದು ಹೇಳಿದರು.

ಕನ್ನಡಿಗನ ಮೇಲೆ ಸೋಲಿನ ಹೊಣೆ ಹೊರಿಸಿದ್ರಾ ಅಕ್ಷರ್?

ಹೈದರಾಬಾದ್ ಇನ್ನಿಂಗ್ಸ್‌ನ ಆರಂಭದಲ್ಲಿ ಓಪನರ್ ಅಭಿಷೇಕ್ ಶರ್ಮಾ ಅವರ ರನೌಟ್ ಅವಕಾಶವನ್ನು ಕೆ.ಎಲ್. ರಾಹುಲ್ ಮಿಸ್ ಮಾಡಿಕೊಂಡಿದ್ದರು. ನಂತರ, ಪಥುಮ್ ನಿಸ್ಸಾಂಕ ಕೂಡ ಒಂದು ಸುಲಭವಾದ ಕ್ಯಾಚ್ ಕೈಬಿಟ್ಟರು. ಈ ಎರಡು ತಪ್ಪುಗಳು ಪಂದ್ಯದ ದಿಕ್ಕನ್ನೇ ಬದಲಾಯಿಸಿದವು ಎಂದು ಅಕ್ಷರ್ ಸ್ಪಷ್ಟಪಡಿಸಿದರು.

"ಆ ರನೌಟ್ ಚಾನ್ಸ್ ಮತ್ತು ಕ್ಯಾಚ್ ಬಿಟ್ಟಿದ್ದಕ್ಕೆ ನಾವು ದೊಡ್ಡ ಬೆಲೆ ತೆರಬೇಕಾಯ್ತು. ಆ ಅವಕಾಶಗಳನ್ನು ಬಳಸಿಕೊಂಡಿದ್ದರೆ, ಅಭಿಷೇಕ್ ಅಷ್ಟು ದೊಡ್ಡ ಸ್ಕೋರ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಚೆನ್ನಾಗಿ ಫೀಲ್ಡಿಂಗ್ ಮಾಡುವುದು ನಮ್ಮ ಕೈಯಲ್ಲೇ ಇತ್ತು, ಆದರೆ ನಾವು ಅದರಲ್ಲಿ ವಿಫಲರಾದೆವು" ಎಂದು ಅಕ್ಷರ್ ಹೇಳಿದರು. ಆದರೂ, ತಂಡದ ಪ್ರಮುಖ ಆಟಗಾರರ ಸಂಯೋಜನೆಯಲ್ಲಿ ಬದಲಾವಣೆ ಮಾಡಲು ಇಷ್ಟಪಡುವುದಿಲ್ಲ, ಇದೊಂದು ಕೆಟ್ಟ ದಿನ ಎಂದು ಭಾವಿಸಿ ಮುಂದೆ ಸಾಗುತ್ತೇವೆ ಎಂದು ಅಕ್ಷರ್ ಸ್ಪಷ್ಟಪಡಿಸಿದರು.

 

ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್ ನಿರ್ದೇಶಕ ವೇಣುಗೋಪಾಲ್ ರಾವ್ ಕೂಡ ರಾಹುಲ್ ಮತ್ತು ನಿಸ್ಸಾಂಕ ಅವರ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಅಭಿಷೇಕ್ ಅವರಂತಹ ಆಟಗಾರ ನಿಮಗೆ ಒಂದು ಅವಕಾಶ ಕೊಟ್ಟರೆ, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವರು ನಮಗೆ ಚಾನ್ಸ್ ಕೊಟ್ಟರು, ಆದರೆ ನಾವು ಅದನ್ನು ಹಾಳುಮಾಡಿಕೊಂಡೆವು. 50 ರನ್ ಗಳಿಸಿದ್ದಾಗ ಒಂದು ರನೌಟ್ ಅವಕಾಶವಿತ್ತು. ನಂತರ 84 ರನ್‌ಗಳಲ್ಲಿದ್ದಾಗ ಮತ್ತೊಂದು ಕ್ಯಾಚ್ ಕೈಬಿಟ್ಟೆವು. ಆ ತಪ್ಪುಗಳಿಗೆ ನಾವು ದೊಡ್ಡ ಬೆಲೆ ತೆತ್ತೆವು" ಎಂದು ವೇಣುಗೋಪಾಲ್ ರಾವ್ ಹೇಳಿದರು.

ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 68 ಎಸೆತಗಳಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳೊಂದಿಗೆ ಅಜೇಯ 135 ರನ್ ಗಳಿಸಿ ಹೈದರಾಬಾದ್ ತಂಡವನ್ನು 242 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು. 2024ರಿಂದ ಹೈದರಾಬಾದ್ ಮ್ಯಾನೇಜ್‌ಮೆಂಟ್ ನೀಡುತ್ತಿರುವ ಬೆಂಬಲ ಮತ್ತು ಸ್ವಾತಂತ್ರ್ಯವೇ ತಮ್ಮ ಆಟದಲ್ಲಿನ ಬದಲಾವಣೆಗೆ ಕಾರಣ ಎಂದು ಅಭಿಷೇಕ್ ಹೇಳಿದ್ದಾರೆ. ಸ್ಟ್ಯಾಂಡಿಂಗ್ ಕ್ಯಾಪ್ಟನ್ ಇಶಾನ್ ಕಿಶನ್ ಮತ್ತು ಕೋಚ್ ಡೇನಿಯಲ್ ವೆಟ್ಟೋರಿ ನೀಡುವ ಆತ್ಮವಿಶ್ವಾಸ ಯುವ ಆಟಗಾರರಿಗೆ ದೊಡ್ಡ ಶಕ್ತಿ ಎಂದು ಅಭಿಷೇಕ್ ತಿಳಿಸಿದರು.

ಹೇಗಿತ್ತು ಡೆಲ್ಲಿ-ಹೈದರಾಬಾದ್ ಮ್ಯಾಚ್

ಹೈದರಾಬಾದ್ ನೀಡಿದ ಈ ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ, ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಲಷ್ಟೇ ಶಕ್ತವಾಯಿತು. ನಿತೀಶ್ ರಾಣಾ (57) ಮತ್ತು ಸಮೀರ್ ರಿಜ್ವಿ (41) ಹೋರಾಟ ನಡೆಸಿದರೂ, ಇತರ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಹೈದರಾಬಾದ್ ಪರ ಇಶಾನ್ ಮಲಿಂಗ 4 ವಿಕೆಟ್ ಪಡೆದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'L' ಸೆಲೆಬ್ರೇಷನ್ ಬಿಟ್ಟು ಅಭಿಷೇಕ್ ಶರ್ಮಾ ಕೈಕಟ್ಟಿ ನಿಂತಿದ್ದೇಕೆ? ಕೊನೆಗೂ ಕೋಚ್ ಕೊಟ್ಟ ಚಾಲೆಂಜ್ ಸೀಕ್ರೆಟ್ ಬಿಚ್ಚಿಟ್ಟ ಡ್ಯಾಶಿಂಗ್ ಓಪನ್ನರ್!
IPL 2026: ಈ ಸಲ ಆರ್‌ಸಿಬಿ ಹೆಸರಿನಲ್ಲಿದ್ದ 10 ವರ್ಷದ ಹಳೆಯ ರೆಕಾರ್ಡ್ ಮುರಿದ ಸನ್‌ರೈಸರ್ಸ್ ಹೈದರಾಬಾದ್!