ಮಹಿಳಾ ಕ್ರಿಕೆಟ್: ಆಸೀಸ್‌ ವಿರುದ್ಧ 1-4ರಲ್ಲಿ ಟಿ20 ಸರಣಿ ಸೋತ ಭಾರತ!

By Naveena K VFirst Published Dec 21, 2022, 9:03 AM IST
Highlights

ಭಾರತ ಎದುರಿನ 5 ಪಂದ್ಯಗಳ ಟಿ20 ಸರಣಿ ಆಸ್ಟ್ರೇಲಿಯಾ ಮಹಿಳಾ ತಂಡದ ಪಾಲು
4-1 ಅಂತರದಲ್ಲಿ ಟಿ20 ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದರೂ ಸರಣಿ ಕೈಚೆಲ್ಲಿದ ಭಾರತ

ಮುಂಬೈ(ಡಿ.21): ಆಸ್ಪ್ರೇಲಿಯಾ ವಿರುದ್ಧ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 54 ರನ್‌ ಸೋಲು ಅನುಭವಿಸಿ, ಸರಣಿಯನ್ನು 1-4ರಲ್ಲಿ ಪ್ರವಾಸಿ ತಂಡಕ್ಕೆ ಬಿಟ್ಟುಕೊಟ್ಟಿದೆ. ಸರಣಿಯುದ್ದಕ್ಕೂ ಉತ್ತಮ ಹೋರಾಟ ಪ್ರದರ್ಶಿಸಿದರೂ ಹರ್ಮನ್‌ಪ್ರೀತ್‌ ಪಡೆಗೆ ಒಂದಕ್ಕಿಂತ ಹೆಚ್ಚು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಮಂಗಳವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ 67 ರನ್‌ಗೆ 4 ವಿಕೆಟ್‌ ಕಳೆದುಕೊಂಡರೂ, ಆಶ್ಲೆ ಗಾಡ್ರ್ನರ್‌(32 ಎಸೆತದಲ್ಲಿ 66) ಹಾಗೂ ಗ್ರೇಸ್‌ ಹ್ಯಾರಿಸ್‌(35 ಎಸೆತದಲ್ಲಿ 64)ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 196 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ದೊಡ್ಡ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಸ್ಮೃತಿ ಮಂಧನಾ(04), ಶಫಾಲಿ ವರ್ಮಾ(13)ರ ವಿಕೆಟ್‌ ಕಳೆದುಕೊಂಡಿತು. 88 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ತಂಡದ ಮಾನವನ್ನು ದೀಪ್ತಿ ಶರ್ಮಾ(34 ಎಸೆತದಲ್ಲಿ 53 ರನ್‌) ಅರ್ಧಶತಕ ಸಿಡಿಸಿ ಕಾಪಾಡಿದರು. ಭಾರತ 20 ಓವರಲ್ಲಿ 142 ರನ್‌ಗೆ ಆಲೌಟ್‌ ಆಯಿತು. 13ನೇ ಓವರ್‌ನ ಕೊನೆ 2 ಎಸೆತ, 20ನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದ ಹೀಥರ್‌ ಗ್ರಹಾಮ್‌ ಹ್ಯಾಟ್ರಿಕ್‌ ಪೂರೈಸಿದರು.

Ranji Trophy: ಪುದುಚೆರಿ ಎದುರು ಕರ್ನಾಟಕಕ್ಕೆ ಮೊದಲ ದಿನದ ಗೌರವ

ಸ್ಕೋರ್‌: 
ಆಸ್ಪ್ರೇಲಿಯಾ 20 ಓವರಲ್ಲಿ 196/4(ಗಾಡ್ರ್ನರ್‌ 66*, ಹ್ಯಾರಿಸ್‌ 64*, ಶಫಾಲಿ 1-17) 
ಭಾರತ 20 ಓವರಲ್ಲಿ 142/10(ದೀಪ್ತಿ 53, ಹರ್ಲೀನ್‌ 24, ಹೀಥರ್‌ 4-8)

ಟಿ20: 4 ಸ್ಥಾನ ಜಿಗಿದ ಭಾರತದ ರಿಚಾ ಘೋಷ್‌

ದುಬೈ: ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಚಾ ಘೋಷ್‌ ಐಸಿಸಿ ಮಹಿಳಾ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ 4 ಸ್ಥಾನ ಜಿಗಿತ ಕಂಡಿದ್ದಾರೆ. ಸದ್ಯ ಅವರು 40ನೇ ಸ್ಥಾನದಲ್ಲಿದ್ದರೆ. ದೀಪ್ತಿ ಶರ್ಮಾ ಒಂದು ಸ್ಥಾನ ಏರಿಕೆ ಕಂಡು 32ನೇ ಸ್ಥಾನ ಪಡೆದಿದ್ದಾರೆ.

ಇನ್ನುಳಿದಂತೆ ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಆಶ್ಲೆ ಗಾರ್ಡ್ನರ್, ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಭಾರತ ಎದುರಿನ ಟಿ20 ಸರಣಿ ಗೆಲುವಿನಲ್ಲಿ ಆಶ್ಲೆ ಗಾರ್ಡ್ನರ್ ಮಹತ್ತರ ಪಾತ್ರವನ್ನು ವಹಿಸಿದ್ದರು. ಭಾರತ ಎದುರಿನ 4ನೇ ಟಿ20 ಪಂದ್ಯದಲ್ಲಿ ಆಕರ್ಷಕ 42 ಹಾಗೂ ಬೌಲಿಂಗ್‌ನಲ್ಲಿ ಪ್ರಮುಖ ಎರಡು ವಿಕೆಟ್ ಕಬಳಿಸಿದ್ದ ಗಾರ್ಡ್ನರ್ ಇದೀಗ 9ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಆಶ್ಲೆ ಗಾರ್ಡ್ನರ್, ಬರೋಬ್ಬರಿ 9 ಸ್ಥಾನ ಜಗಿತ ಕಂಡು 17ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು 25 ವರ್ಷದ ಗಾರ್ಡ್ನರ್ ಆಲ್ರೌಂಡರ್‌ಗಳ ವಿಭಾಗದಲ್ಲಿ ಒಂದು ಸ್ಥಾನ ಏರಿಕೆ ಕಂಡು 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಭಾರತ ವಿರುದ್ದ ಆಕರ್ಷಕ 75 ಹಾಗೂ ಅಜೇಯ 72 ರನ್ ಬಾರಿಸಿದ ಎಲಿಸಾ ಪೆರ್ರಿ ಬರೋಬ್ಬರಿ 17 ಸ್ಥಾನ ಜಿಗಿತ ಕಂಡು 34ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

click me!