ICC Test Rankings: ಕೇಪ್‌ಟೌನ್ ಟೆಸ್ಟ್ ಗೆದ್ದರೂ 2ನೇ ಸ್ಥಾನಕ್ಕೆ ಕುಸಿದ ಭಾರತ

By Naveen KodaseFirst Published Jan 7, 2024, 10:22 AM IST
Highlights

ಈ ಮೊದಲು ಭಾರತ ಹಾಗೂ ಆಸ್ಟ್ರೇಲಿಯಾ ತಲಾ 118 ಅಂಕಗಳೊಂದಿಗೆ ಸಮಬಲ ಹೊಂದಿದ್ದರೂ ಭಾರತ ಅಗ್ರಸ್ಥಾನದಲ್ಲಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಡ್ರಾ ಸಾಧಿಸಿದ್ದು ಮತ್ತು ಆಸೀಸ್‌ ತಂಡ ಪಾಕ್‌ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 2-0ರಿಂದ ಮುನ್ನಡೆ ಸಾಧಿಸಿದ್ದು ಸ್ಥಾನಪಲ್ಲಟಕ್ಕೆ ಕಾರಣವಾಗಿದೆ.

ದುಬೈ(ಜ.07): ದ.ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ 7 ವಿಕೆಟ್‌ ಜಯ ಸಾಧಿಸಿದ ಹೊರತಾಗಿಯೂ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಭಾರತ 2ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ 7 ತಿಂಗಳ ಬಳಿಕ ಟೀಂ ಇಂಡಿಯಾ ನಂ.1 ಸ್ಥಾನ ಕಳೆದುಕೊಂಡಿದೆ. ನೂತನ ಪಟ್ಟಿಯಲ್ಲಿ ಆಸ್ಟ್ರೇಲಿಯಾ 118 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಭಾರತ 117 ಅಂಕ ಹೊಂದಿದೆ.

ಈ ಮೊದಲು ಭಾರತ ಹಾಗೂ ಆಸ್ಟ್ರೇಲಿಯಾ ತಲಾ 118 ಅಂಕಗಳೊಂದಿಗೆ ಸಮಬಲ ಹೊಂದಿದ್ದರೂ ಭಾರತ ಅಗ್ರಸ್ಥಾನದಲ್ಲಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಡ್ರಾ ಸಾಧಿಸಿದ್ದು ಮತ್ತು ಆಸೀಸ್‌ ತಂಡ ಪಾಕ್‌ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 2-0ರಿಂದ ಮುನ್ನಡೆ ಸಾಧಿಸಿದ್ದು ಸ್ಥಾನಪಲ್ಲಟಕ್ಕೆ ಕಾರಣವಾಗಿದೆ. ಇಂಗ್ಲೆಂಡ್‌, ದ.ಆಫ್ರಿಕಾ, ನ್ಯೂಜಿಲೆಂಡ್‌, ಪಾಕಿಸ್ತಾನ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಐಸಿಸಿ ವರ್ಷದ ಕ್ರಿಕೆಟರ್‌ ರೇಸಲ್ಲಿ ಕೊಹ್ಲಿ, ಜಡೇಜಾ!

ದುಬೈ: ಭಾರತದ ತಾರಾ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ 2023ರ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಶುಕ್ರವಾರ ಐಸಿಸಿ ಪ್ರಶಸ್ತಿ ರೇಸ್‌ನಲ್ಲಿರುವವರ ಹೆಸರು ಪ್ರಕಟಿಸಿತು. ಕೊಹ್ಲಿ, ಜಡೇಜಾ ಜೊತೆಗೆ ಆಸ್ಟ್ರೇಲಿಯಾಕ್ಕೆ ವಿಶ್ವಕಪ್‌ ತಂದುಕೊಟ್ಟ ನಾಯಕ ಪ್ಯಾಟ್‌ ಕಮಿನ್ಸ್ ಹಾಗೂ ವಿಶ್ವಕಪ್‌ ಹೀರೊ ಟ್ರ್ಯಾವಿಸ್‌ ಹೆಡ್ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. 

ಇನ್ನು, ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಆರ್‌.ಅಶ್ವಿನ್‌ ನಾಮನಿರ್ದೇಶನಗೊಂಡಿದ್ದಾರೆ. ಆಸ್ಟ್ರೇಲಿಯಾದ ಹೆಡ್‌, ಉಸ್ಮಾನ್‌ ಖವಾಜ ಹಾಗೂ ಇಂಗ್ಲೆಂಡ್‌ನ ಜೋ ರೂಟ್‌ ಕೂಡಾ ಪಟ್ಟಿಯಲ್ಲಿದ್ದಾರೆ. ಇದೇ ತಿಂಗಳಲ್ಲೇ ಪ್ರಶಸ್ತಿ ವಿಜೇತರ ಹೆಸರನ್ನು ಐಸಿಸಿ ಘೋಷಿಸಲಿದೆ.

ವನಿತಾ ಏಕದಿನ: ಪುದುಚೇರಿ ವಿರುದ್ಧ ಸೋತ ಕರ್ನಾಟಕ!

ಕಟರ್‌(ಒಡಿಶಾ): ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಪುದುಚೇರಿ ವಿರುದ್ಧ ಆಘಾತಕಾರಿ ಸೋಲನುಭವಿಸಿದೆ. ಶನಿವಾರ ರಾಜ್ಯಕ್ಕೆ 35 ರನ್‌ ಸೋಲು ಎದುರಾಯಿತು. ಮೊದಲು ಬ್ಯಾಟ್‌ ಮಾಡಿದ ಪುದುಚೇರಿ 9 ವಿಕೆಟ್‌ಗೆ 210 ರನ್‌ ಕಲೆಹಾಕಿತು. ಸಯಾಲಿ ಲೊಂಕರ್‌ 72 ರನ್‌ ಗಳಿಸಿದರು. ಸಹನಾ ಪವಾರ್‌ 10 ಓವರಲ್ಲಿ 24 ರನ್‌ಗೆ 4 ವಿಕೆಟ್‌ ಪಡೆದರು. ಗುರಿಯನ್ನು ಸುಲಭವಾಗಿ ಬೆನ್ನತ್ತುವ ನಿರೀಕ್ಷೆಯಲ್ಲಿದ್ದ ಕರ್ನಾಟಕವನ್ನು ಪುದುಚೇರಿ ಬೌಲರ್‌ಗಳು ನಡುಗಿಸಿದರು. ರೋಶ್ನಿ ಕಿರಣ್‌ 40, ವೇದಾ ಕೃಷ್ಣಮೂರ್ತಿ 37 ರನ್‌ ಗಳಿಸಿದ ಹೊರತಾಗಿಯೂ ತಂಡ 49.3 ಓವರ್‌ಗಳಲ್ಲಿ 175ಕ್ಕೆ ಆಲೌಟಾಯಿತು. ಕರ್ನಾಟಕ ಸೋಮವಾರ ತ್ರಿಪುರಾ ವಿರುದ್ಧ ಆಡಲಿದೆ.

click me!