ಆಸೀಸ್ ಟಾಪ್ 3 ಬ್ಯಾಟರ್ಸ್‌ ಸೆಂಚುರಿ; ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ!

Published : Aug 25, 2025, 01:16 PM IST
Australia Win

ಸಾರಾಂಶ

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 276 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾದ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಶತಕ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾದ ದಾಖಲೆಯನ್ನು ಸರಿಗಟ್ಟಿದ್ದಾರೆ. 

ಮೆಕಾಯ್: ಆತಿಥೇಯ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಹರಿಣಗಳ ಮೇಲೆ ಕಾಂಗರೂ ಪಡೆ ಸವಾರಿ ನಡೆಸಿ ಭಾರೀ ಅಂತರದ ಗೆಲುವು ಸಾಧಿಸಿದೆ. ಆಸೀಸ್‌ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳ ಆಕರ್ಷಕ ಶತಕ ಹಾಗೂ ಕೂಪರ್ ಕಾನೊಲ್ಲಿ ಅವರ ಮಾರಕ ದಾಳಿಯ ನೆರವಿನಿಂದ ಆಸೀಸ್ ತಂಡವು 276 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಈ ಸೋಲಿನ ಹೊರತಾಗಿಯೂ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಇನ್ನು ಇದೀಗ ಆಸ್ಟ್ರೇಲಿಯಾ ತಂಡವು ಕೊನೆಯ ಏಕದಿನ ಪಂದ್ಯದಲ್ಲಿ ಹಲವು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಟ್ರ್ಯಾವಿಸ್ ಹೆಡ್, ನಾಯಕ ಮಿಚೆಲ್ ಮಾರ್ಷ್ ಹಾಗೂ ಕ್ಯಾಮರೋನ್ ಗ್ರೀನ್ ಬಾರಿಸಿದ ಶತಕ ಹಾಗೂ ಕೊನೆಯಲ್ಲಿ ಅಲೆಕ್ಸ್ ಕ್ಯಾರಿ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 431 ರನ್ ಕಲೆಹಾಕಿತು. ಇದು ಕಾಂಗರೂ ಪಡೆ ತವರಿನಲ್ಲಿ ದಾಖಲಿಸಿದ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಆರಂಭಿಕ ಬ್ಯಾಟರ್ ಟ್ರ್ಯಾವಿಸ್ ಹೆಡ್ 142, ಮಿಚೆಲ್ ಮಾರ್ಷ್ 100 ಹಾಗೂ ಕ್ಯಾಮರೋನ್ ಗ್ರೀನ್ ಅಜೇಯ 118 ರನ್ ಸಿಡಿಸಿದರು. ಇನ್ನು ಕ್ಯಾರಿ 50 ರನ್ ಸಿಡಿಸಿ ಮಿಂಚಿದರು.

 

ಇನ್ನು ಸವಾಲಿನ ಗುರಿ ಬೆನ್ನತ್ತಿದ ಹರಿಣಗಳ ಪಡೆ ಕೂಪರ್ ಕಾನೊಲ್ಲಿ ಮಾರಕ ದಾಳಿಗೆ ತತ್ತರಿಸಿ ಕೇವಲ 24.5 ಓವರ್‌ಗಳಲ್ಲಿ 155 ರನ್ ಬಾರಿಸಿ ಸರ್ವಪತನ ಕಂಡಿತು.ಕೂಪರ್ ಕಾನೊಲ್ಲಿ ಕೇವಲ 22 ರನ್ ನೀಡಿ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 276 ರನ್ ಅಂತರದ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಯಿತು.

ದಕ್ಷಿಣ ಆಫ್ರಿಕಾ ಬ್ಯಾಟರ್ಸ್‌ ದಾಖಲೆ ಸರಿಗಟ್ಟಿದ ಆಸ್ಟ್ರೇಲಿಯಾ: ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್ ಹಾಗೂ ಕ್ಯಾಮರೋನ್ ಗ್ರೀನ್ ಹೀಗೆ ಆಸ್ಟ್ರೇಲಿಯಾದ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಶತಕ ಸಿಡಿಸುವುದರೊಂದಿಗೆ ಇದೀಗ ಹರಿಣಗಳ ಪಡೆಯ ಬ್ಯಾಟರ್‌ಗಳ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾದರು. ಈ ಮೊದಲು 2015ರಲ್ಲಿ ವೆಸ್ಟ್ ಇಂಡೀಸ್ ಎದುರು ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ, ರಿಲೇ ರೂಸೌ ಹಾಗೂ ಎಬಿ ಡಿವಿಲಿಯರ್ಸ್‌ ಹೀಗೆ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು. ಇದೀಗ ಆಸೀಸ್ ಮೂವರು ಬ್ಯಾಟರ್‌ಗಳು ಆ ದಾಖಲೆ ಸರಿಗಟ್ಟಿದ್ದಾರೆ.

ಭಾರತದ ದಾಖಲೆ ಸರಿಗಟ್ಟಿದ ಆಸೀಸ್: ಇನ್ನು ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 276 ರನ್ ಅಂತರದ ಗೆಲುವು ಸಾಧಿಸುವುದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 4ನೇ ಬಾರಿಗೆ 250+ ರನ್ ಅಂತರದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತದ ದಾಖಲೆ(04) ದಾಖಲೆ ಸರಿಗಟ್ಟುವುದರ ಜತೆಗೆ ಜಂಟಿ ಅಗ್ರಸ್ಥಾನಕ್ಕೇರಿದೆ. ಇನ್ನು ದಕ್ಷಿಣ ಆಫ್ರಿಕಾ ಮೂರು ಬಾರಿ 250+ ರನ್ ಅಂತರದ ಗೆಲುವು ಸಾಧಿಸಿದೆ.

ಇನ್ನು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವು ಸಾಧಿಸುವುದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರ ಜತೆಗೆ ಕಳೆದ 9 ವರ್ಷಗಳಲ್ಲಿ ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ಗೆಲುವಿನ ನಾಗಲೋಟ ಮುಂದುವರೆಸಿದೆ. 2016ರಿಂದೀಚೆಗೆ ಆಸ್ಟ್ರೇಲಿಯಾ ಎದುರು ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿ ಸೋತಿಲ್ಲ ಎನ್ನುವುದು ವಿಶೇ‍ಷ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ